Advertisement
ಕನ್ನಡ ಸಾರಸ್ವತ ಲೋಕದ ಈ ಇಬ್ಬರು ಮುಕುಟ ಮಣಿಗಳ ಅಂತ್ಯಕ್ರಿಯೆ ಜ್ಞಾನಭಾರತಿ ಸಮೀಪದ ಕಲಾಗ್ರಾಮದ ಆವರಣದಲ್ಲಿ ನೆರವೇರಿತ್ತು. ಸದ್ಯ ಅಂತ್ಯಕ್ರಿಯೆ ಸ್ಥಳದಲ್ಲಿ ಆಯತಾಕಾರದ ಸಿಮೆಂಟ್ ಕಟ್ಟೆ ಹೊರತುಪಡಿಸಿದರೆ ಹೆಸರು, ಜನನ- ಮರಣ ದಿನಾಂಕ, ಒಂದಿಷ್ಟು ವಿವರವುಳ್ಳ ಪುಟ್ಟ ಫಲಕವೂ ಇಲ್ಲದಿರುವುದು ಅಭಿಮಾನಿಗಳಲ್ಲಿ ನೋವು ತಂದಿದೆ.
Related Articles
Advertisement
ಹಿಂದೆ ಅಗೌರವ ವಿವಾದ: ರಾಷ್ಟ್ರೀಯ ನಾಟಕ ಶಾಲೆಗೆ ಸೇರಿದ ಈ ಪ್ರದೇಶದಲ್ಲಿ ಕೆಲ ತಿಂಗಳ ಹಿಂದೆ ಅಂತ್ಯಕ್ರಿಯೆ ನಡೆದ ಸ್ಥಳವೇ ಕಾಣದಷ್ಟರ ಮಟ್ಟಿಗೆ ಗಿಡಗಂಟಿ, ಮುಳ್ಳು ಪೊದೆ ಬೆಳೆದಿತ್ತು. ಆ ಭಾಗದಲ್ಲಿ ಖಾಲಿ ಮದ್ಯದ ಬಾಟಲಿ, ನೀರಿನ ಬಾಟಲಿ, ಲೋಟ ಇತರೆ ಕಸ ಬಿದ್ದಿತ್ತು. ಆ ವಾತಾವರಣ ಜಿಎಸ್‌ಎಸ್ ಮತ್ತು ಅನಂತಮೂರ್ತಿ ಅವರಿಗೆ ಅಗೌರವ ತೋರುವಂತಿತ್ತು. ಇದು ವಿವಾದ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಗ್ರಾಮದ ಸ್ವತ್ಛತೆಗೆ ಮುಂದಾಗಿತ್ತು.
ರಂಗಕಲೆಗೆ ಬಳಕೆ ಆಗಬೇಕು: ಕಲೆಯ ಉದ್ದೇಶಕ್ಕೆ ಬಳಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು ರಾಷ್ಟ್ರೀಯ ನಾಟಕ ಶಾಲೆಗೆ ಬೆಂಗಳೂರಿನಲ್ಲಿ ಜಾಗ ನೀಡಿದೆ. ಸುಮಾರು ಐದು ಎಕರೆ ಪ್ರದೇಶದಲ್ಲಿ ಕಲಾಗ್ರಾಮ ನಿರ್ಮಾಣವಾಗಿದ್ದು, ಇಲ್ಲಿ ರಾಷ್ಟ್ರೀಯ ಕಲಾ ಶಾಲೆಯ ರಂಗ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಪ್ರದೇಶ ಸದಾ ರಂಗ ಚಟುವಟಿಕೆಗಳಿಗೆ ಸೀಮಿತವಾಗಬೇಕೆ ಹೊರತು ಸಮಾಧಿ ಸ್ಥಳವಾಗಬಾರದು ಎಂದು ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೂವಿನ ತೋಟ ಬೆಳೆಸಲಿ: ಸರ್ಕಾರ ಈ ಹಿಂದೆ ರಾಷ್ಟ್ರಕವಿ ಜಿಎಸ್‌ಎಸ್ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿತ್ತು. ಕನಕಪುರ ರಸ್ತೆ ಬಳಿಯ ಜಂಬೂಸವಾರಿ ದಿಣ್ಣೆ ಬಳಿ ಟ್ರಸ್ಟ್‌ಗೆಂದು ಜಾಮೀನು ಮಂಜೂರು ಮಾಡಿದೆ. ಆದರೆ ಆ ಜಾಗದ ವಿವರ, ವಿಸ್ತೀರ್ಣ ಇತರೆ ಯಾವ ಮಾಹಿತಿಯೂ ಇಲ್ಲ.
ಜಂಬೂಸವಾರಿ ದಿಣ್ಣೆ ಪ್ರದೇಶ ಬೆಂಗಳೂರಿನ ಹೃದಯ ಭಾಗದಿಂದ ಬಹು ದೂರದಲ್ಲಿದೆ. ಹಾಗಾಗಿ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲೇ ಸ್ವಲ್ಪ ಜಾಗ ನೀಡಿದ್ದರೆ ಅನುಕೂಲವಾಗುತ್ತಿತ್ತು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಜಿ.ಎಸ್.ಎಸ್ ಕುಟುಂಬದ ಆಪ್ತರೊಬ್ಬರು ಹೇಳಿದ್ದಾರೆ.
ನಾನಾ ಉದ್ದೇಶ, ಕಾರ್ಯಗಳಿಗೆ ಭೂಮಿ ನೀಡುವ ಸರ್ಕಾರ ಜಿಎಸ್‌ಎಸ್ ಮತ್ತು ಅನಂತಮೂರ್ತಿ ಅವರ ಅಂತ್ಯಕ್ರಿಯೆ ನಡೆದ ಸ್ಥಳವನ್ನು ಒಗ್ಗೂಡಿಸಿ, ಅಲ್ಲೊಂದು ಪುಟ್ಟ ಮಾಹಿತಿಯುಳ್ಳ ನಾಮಫಲಕ ಅಳವಡಿಸಬಹುದು. ಜತೆಗೆ ಹುಲ್ಲುಹಾಸು, ಹೂವಿನ ತೋಟವನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಂತಿಸಬಹುದು ಎಂದು ತಿಳಿಸಿದ್ದಾರೆ.
ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮತ್ತು ಡಾ.ಯು.ಆರ್.ಅನಂತಮೂರ್ತಿ ಅವರ ಅಭಿಮಾನಿಗಳಲ್ಲಿ ಬೇಸರ ಉಂಟಾಗಲು ಅವಕಾಶ ನೀಡಬಾರದು. ಜತೆ ಹಿರಿಯ ಕಾದಂಬರಿಕಾರ ಬಸವರಾಜ ಕಟ್ಟಿಮನಿ ಅವರ ಸಮಾಧಿ ಸ್ಥಳ ಕೂಡ ನಾಪತ್ತೆಯಾಗಿದ್ದು, ಇದರ ಉಳಿವಿಗೂ ಸರ್ಕಾರ ಮುಂದಾಗಬೇಕು.-ಸಿದ್ಧಲಿಂಗಯ್ಯ, ಹಿರಿಯ ಕವಿ ಈ ಇಬ್ಬರು ಮಹನಿಯರು ರಾಷ್ಟ್ರಮಟ್ಟದಲ್ಲಿ ಕನ್ನಡ ಸೊಗಡನ್ನು ಬಿಂಬಿಸಿದವರು. ಸರ್ಕಾರ ಈ ಬಗ್ಗೆ ಉಪೇಕ್ಷೆ ಮಾಡಬಾರದು. ಇವುಗಳನ್ನು ಅಚ್ಚುಕಟ್ಟಾಗಿ ಕಾಪಾಡುವುದು, ಪರಂಪರೆಯನ್ನು ಕಾಪಾಡಿದಂತೆ ಎಂಬುದನ್ನು ಅರಿಯಬೇಕು.
-ಹಂಪ ನಾಗರಾಜಯ್ಯ, ಹಿರಿಯ ಸಂಶೋಧಕ * ದೇವೇಶ ಸೂರಗುಪ್ಪ