ನೆಲಮಂಗಲ: ಬಯಲು ಶೌಚ ಮುಕ್ತ ಉದ್ದೇಶಕ್ಕೆ ನಿರ್ಮಾಣವಾದ ಶೌಚಾಲಯಗಳು ನೀರಿಲ್ಲದೆ ಪಾಳುಬಿದ್ದಿವೆ. ಮೂಲಸೌಕರ್ಯಗಳ ಅಭಿವೃದ್ಧಿಯಾಗಿಲ್ಲ. ಸಾಕಷ್ಟು ಬಾರಿ ಗ್ರಾಪಂ ಅಧಿಕಾರಿ ಗಳಿಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ಹಾಗೂ ಅತ್ಯಂತ ಬೇಜವಾಬ್ದಾರಿತನ ದಿಂದ ವರ್ತಿಸಿದ್ದಾರೆ. ಇನ್ನಾದರೂ ಸಂಬಂಧಿಸಿದವರು ಕ್ರಮಕೈ ಗೊಳ್ಳ ಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಅರೆಬೊಮ್ಮನಹಳ್ಳಿ ಗ್ರಾಪಂನ ತಿಮ್ಮಸಂದ್ರದ ಸಮುದಾಯದ ಜನರ 40ಕ್ಕೂ ಹೆಚ್ಚು ಮನೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಬಂಡೆ ಸಮಸ್ಯೆ ಎಂದು ಸರಕಾರ 20ಕ್ಕೂ ಹೆಚ್ಚು ಶೌಚಾಲಯಗಳನ್ನು ಒಂದೆಡೆ ನಿರ್ಮಿಸಿದೆ. ಆದರೆ ವರ್ಷಗಳಾದರೂ ನೀರಿನ ಸರಬರಾಜು ವ್ಯವಸ್ಥೆ ಮಾಡಿಲ್ಲೆ ಎಂಬುದು ಗ್ರಾಮಸ್ಥರು ದೂರಿದ್ದಾರೆ.
ಪಾಳು ಬಿದ್ದಿರುವ ಶೌಚಾಲಯಗಳು: ಬಯಲು ಶೌಚ ಮುಕ್ತ ಗ್ರಾಮದ ಪಟ್ಟಿಗೆ ಸೇರ ಬೇಕಾದ ಗ್ರಾಮದಲ್ಲಿ ಸರಕಾರ ನಿರ್ಮಿಸಿರುವ ಶೌಚಾಲಯಗಳ ಹಸ್ತಾಂತರ ಹಾಗೂ ನೀರು ಸರಬರಾಜು ಮಾಡಿಲ್ಲ. ಹೀಗಾಗಿ ಪಾಳು ಬಿದ್ದಿರುವ ಶೌಚಾಲಯಗಳ ಬಾಗಿಲು ಮುರಿದಿವೆ. ಸುತ್ತಲೂ ಬೇಲಿ ಬೆಳೆದಿದೆ. ಆದರೆ ಸರಕಾರದ ದಾಖಲೆಯಲ್ಲಿ ಬಯಲು ಶೌಚ ಮುಕ್ತ ಗ್ರಾಪಂ ಎಂದು ಘೋಷಣೆ ಮಾಡಿದ್ದಾರೆ. ಗ್ರಾಮದ ಜನರ ಬಯಲು ಶೌಚ ಮಾತ್ರ ನಿಂತಿಲ್ಲ ಎಂದು ಗ್ರಾಮದ ಯುವಕರು ಆರೋಪಿಸಿದ್ದಾರೆ.
ಮೂಲಸೌಕರ್ಯ ವಂಚಿತ ಜನರು: ತಿಮ್ಮಸಂದ್ರ ಗ್ರಾಮದಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ, ಬೀದಿ ದೀಪಗಳು ಸೇರಿ ದಂತೆ ಮೂಲ ಸೌಕರ್ಯ ನೀಡಲು ಗ್ರಾಪಂ ಅಧಿಕಾರಿಗಳು ಮುಂದಾಗಿಲ್ಲ. ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಕೊಳಕು ನೀರು ಸರಬರಾಜು: ಗ್ರಾಮದ ಕೊಳವೆ ಬಾವಿಯಿಂದ ವಾಟರ್ ಟ್ಯಾಂಕ್‌ಗೆ ನೀರು ಸರಬರಾಜು ಮಾಡಲು ಹಾಕಿರುವ ಪೈಪುಗಳು ಹೊಡೆದುಹೋಗಿ ಕೊಳಕು ನೀರು ಟ್ಯಾಂಕ್‌ಗೆ ಸೇರುತ್ತಿದೆ. ಆದರೆ ಸರಿಪಡಿಸುವ ಕೆಲಸವಾಗಿಲ್ಲ. ಕೇಳಿದರೆ ಮಾಡೋಣ ಬಿಡಿ ಎಂದು ಸುಮ್ಮನಾಗುತ್ತಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಪಿಡಿಒ ಕೆಲಸ ಏನು?: ಪಂಚಾಯಿತಿ ಅಭಿವೃದ್ಧಿ ಮಾಡಬೇಕಾದ ಅಧಿಕಾರಿ, ಗ್ರಾಮಗಳಿಗೆ ಬಂದು ಜನರ ಸಮಸ್ಯೆ ಕೇಳಿ ಪರಿಹರಿಸುವ ಬದಲು ಪ್ರಭಾವಿಗಳ ಮಾತಿಗೆ ತಲೆಬಾಗುತ್ತಿದ್ದಾರೆ. ಹತ್ತಾರು ಬಾರಿ ಸಮಸ್ಯೆ ಬಗೆಹರಿಸುವಂತೆ ಮನವಿ ಪತ್ರ ಸಲ್ಲಿಸಿದರೂ ಸಮಸ್ಯೆ ಹೆಚ್ಚಾಗಿದೆ ವಿನಾ ಬಗೆಹರಿಸಲು ಮಾತ್ರ ಬಂದಿಲ್ಲ. ಪಿಡಿಒ ಕೆಲಸ ಮರೆತು ಅಧಿಕಾರದ ಅಮಲಿನಲ್ಲಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ತಿಮ್ಮಸಂದ್ರ ಗ್ರಾಮದ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಶೌಚಾಲಯ ಬಳಕೆ ಹಾಗೂ ನೀರಿನ ಸರಬರಾಜಿಗೆ ತಿಳಿಸಲಾಗಿದೆ.
-ನಾಗರಾಜು, ಜಿಪಂ ಇಒ
* ಕೊಟ್ರೇಶ್ ಆರ್.