Advertisement

ತೀರ್ಥರಾಮೇಶ್ವರಸ್ವಾಮಿ ಗೋಪುರದ ಕಳಸಾರೋಹಣ

12:32 PM Apr 29, 2017 | |

ಹೊನ್ನಾಳಿ: ತಾಲೂಕಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ತೀರ್ಥರಾಮೇಶ್ವರ ಕ್ಷೇತ್ರದಲ್ಲಿ ಶುಕ್ರವಾರ ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ತೀರ್ಥರಾಮೇಶ್ವರಸ್ವಾಮಿಯ ಗೋಪುರದ ಕಳಸಾರೋಹಣ ಕಾರ್ಯಕ್ರಮ ನೆರವೇರಿಸಿದರು. 

Advertisement

ತೀರ್ಥರಾಮೇಶ್ವರಸ್ವಾಮಿಯ ಗೋಪುರದ ಕಳಸಾರೋಹಣ ಕಾರ್ಯಕ್ರಮಗಳು ಗುರುವಾರ ಸಂಜೆಯಿಂದಲೇ ಪ್ರಾರಂಭಗೊಂಡವು. ಗುರುವಾರ ಸಂಜೆ 4:30ರಿಂದ 5:30ರವರೆಗಿನ ಗೋಧೂಳಿ ಲಗ್ನದಲ್ಲಿ ಗಂಗಾ ಪೂಜೆಯೊಂದಿಗೆ ಮಹಾಗಣಪತಿ, ಪುಣ್ಯಾಹ ಕಳಶ ಪೂಜೆ, ನಾಂದಿ ಸಮಾರಾಧನೆ, ಪಂಚಕಳಶ ಪೂಜೆ,

ಸಪ್ತಸಭಾ ಕಳಶ ಪೂಜೆ, ಅಷ್ಟ ಲಕ್ಷ್ಮಿ ಪೂಜೆ, ನವದುರ್ಗಾ ಕಳಶ ಪೂಜೆ, ಲಕ್ಷ್ಮಿನಾರಾಯಣ, ವಾಸ್ತು ಕಳಶ ಪೂಜೆ, ಅಘೋರ ಕಳಶ ಪೂಜೆ, ಏಕಾದಶ ರುದ್ರ ಕಳಶ ಪೂಜೆ, ದ್ವಾದಶಾದಿತ್ಯ ರುದ್ರ ಕಳಶ ಪೂಜೆ, ಆದಿತ್ಯಾದಿ ನವಗ್ರಹ ಪೂಜೆ, ಮಹಾಮೃತ್ಯುಂಜಯ ಕಳಶ ಪೂಜೆ ಕಾರ್ಯಕ್ರಮಗಳು ನಡೆದವು.

ರಾತ್ರಿ 8:30ರಿಂದ 9.30ರವರೆಗೆ ಶ್ರೀ ಕಾಶಿ ವಿಶ್ವನಾಥ ಲಿಂಗು ಮೂರ್ತಿ ಪ್ರತಿಷ್ಠಾಪನೆ, ಗಣಹೋಮ, ವಾಸ್ತುಹೋಮ, ಮಹಾರುದ್ರ ಹೋಮ, ಮಹಾಮಂಗಳಾರತಿ ಕಾರ್ಯಗಳು ನಡೆದವು. ತೀರ್ಥರಾಮೇಶ್ವರ ಕ್ಷೇತ್ರದಲ್ಲಿ ಗಂಗಾ ಜಲ ಸನ್ನಿಧಿಧಿ ಇದ್ದು, ಕಾಶಿಯಿಂದ ಇಲ್ಲಿಗೆ ನೀರು ಹರಿದುಬರುತ್ತದೆ ಎಂಬ ಪ್ರತೀತಿ ಇದೆ.

ಈ ನೀರಿನಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುತ್ತವೆ ಎಂದು ಭಕ್ತರು ನಂಬಿ ಇಲ್ಲಿಗೆ ಆಗಮಿಸುತ್ತಾರೆ. ಎಂಥ ಬಿರು ಬೇಸಿಗೆಯಲ್ಲೂ ಇಲ್ಲಿ ನೀರು ಲಭಿಸುತ್ತದೆ. ಭೀಕರ ಬರಗಾಲದಲ್ಲಿಯೂ ಇಲ್ಲಿ ನೀರು ಬತ್ತಿದ ಉದಾಹರಣೆಯೇ ಇಲ್ಲ. ಇಲ್ಲಿಯ ಇನ್ನೊಂದು ವಿಶೇಷ ಎಂದರೆ, ಬ್ರಹ್ಮನಿಗೆ ಎಲ್ಲಿಯೂ ಪೂಜೆ ಸಲ್ಲುವುದಿಲ್ಲ. 

Advertisement

ತೀರ್ಥರಾಮೇಶ್ವರ ಕ್ಷೇತ್ರದಲ್ಲಿ ಚತುರ್ಮುಖ ಬ್ರಹ್ಮನ ದೇವಸ್ಥಾನವಿದ್ದು, ಇಲ್ಲಿ ಬ್ರಹ್ಮದೇವರಿಗೆ ಪೂಜೆ ಸಲ್ಲುತ್ತದೆ. ಚತುರ್ಮುಖ ಬ್ರಹ್ಮನ ದೇವಸ್ಥಾನದ ಗೋಪುರದ ಕಳಸಾರೋಹಣ ಕಾರ್ಯಕ್ರಮ ಕೂಡ ವಿಜೃಂಭಣೆಯಿಂದ ನೆರವೇರಿತು. ಶ್ರೀ ತೀರ್ಥರಾಮೇಶ್ವರಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಜಗದೀಶ್‌, ಉಪಾಧ್ಯಕ್ಷ ಬಿ.ಎಚ್‌. ಪ್ರಕಾಶ್‌, ಕಾರ್ಯದರ್ಶಿ ಸೋಮಸುಂದರ್‌ರಾಜ್‌ ಅರಸ್‌, ಖಜಾಂಚಿ ಎ.ಕೆ. ನಾಗರಾಜ್‌,

ಸದಸ್ಯರಾದ ಎಂ.ಎಸ್‌. ಪ್ರಕಾಶ್‌ ಒಡೆಯರ್‌, ರಾಜು ತಳವಾರ್‌, ಚಂದ್ರಪ್ಪ, ಕೃಷ್ಣಮೂರ್ತಿ, ಎ.ಕೆ. ರಾಜು, ಹಾಲಪ್ಪ, ಶಿವು, ಮಂಜು, ಎ.ಕೆ. ಕರಿಬಸಪ್ಪ, ಪ್ರಭು, ವ್ಯವಸ್ಥಾಪಕ ರಂಗನಾಥ್‌ರಾಜ್‌ ಅರಸ್‌, ಹನುಮಂತಯ್ಯ ಮತ್ತಿತರರು ಉಪಸ್ಥಿತರಿದ್ದರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಬೆಳಗುತ್ತಿ, ಮಲ್ಲಿಗೇನಹಳ್ಳಿ, ನ್ಯಾಮತಿ ಮತ್ತಿತರ ಗ್ರಾಮಗಳು ಸೇರಿದಂತೆ ರಾಜ್ಯದ ನಾನಾ ಭಾಗಗಳ ಭಕ್ತರು ಪಾಲ್ಗೊಂಡಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next