Advertisement
ಕೋವಿಡ್ 19 ವೈರಸ್ ಇಂದು ಜಗತ್ತಿಗೆಲ್ಲ ಗೊತ್ತಿರುವ ಹೆಸರು. ಈ ಶತಮಾನದಲ್ಲಿ ದೇಶಗಳನ್ನ ಹೀಗೆ ಲಾಕ್‌ಡೌನ್ ಅಂದರೆ, ಪೂರ್ಣ ವ್ಯಾಪಾರ ವಹಿವಾಟು ನಿಲ್ಲಿಸಿ, ಮನುಷ್ಯರ ಓಡಾಟಕ್ಕೂ ನಿರ್ಬಂಧ ಹೇರಿದ ಉದಾಹರಣೆ ನಮ್ಮ ಮುಂದಿಲ್ಲ. ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ಪ್ರಜೆಗಳನ್ನ ಗೃಹ ಬಂಧನದಲ್ಲಿರಲು ಸೂಚಿಸಿವೆ.
Related Articles
Advertisement
ಹಿಂದಿನವರು ಖುಷಿಯಾಗಿರಲಿಲ್ಲವೇ? : ವರ್ಕ್ ಫ್ರಮ್ ಹೋಂ ಎನ್ನುವುದು ಇನ್ನು ಸಾಮಾನ್ಯ ಎನ್ನುವಂತಾಗುತ್ತದೆ . ಇದರಿಂದ ಪ್ರತಿ ನಿತ್ಯ ವಾಹನಗಳ ಓಡಾಟ ಕಡಿಮೆಯಾಗುತ್ತದೆ . ಇದು ಕಾರ್ಬನ್ ಉಗುಳುವಿಕೆಯನ್ನು ಕಡಿಮೆ ಮಾಡುತ್ತದೆ. ಈ ನಗರೀಕರಣ, ಕೈಗಾರೀಕರಣಕ್ಕೆ ಮುಂಚೆ ಭಾರತದಲ್ಲಿ ಜನ ಬದುಕುತ್ತಿರಲಿಲ್ಲವೇ? ಆಗ ಗೂಗಲ್, ಮೈಕ್ರೊಸಾಫ್ಟ್, ರಿಲಯನ್ಸ್ ಅಥವಾ ಇನ್ನ್ಯಾವುದೇ ಪ್ರಸಿದ್ಧ ಸಂಸ್ಥೆಗಳು ಇರಲಿಲ್ಲ. ನಮ್ಮ ತಾತ , ಮುತ್ತಾತರು ಇಂತಹ ಸಂಸ್ಥೆಗಳ ನೌಕರರಾಗಿರಲಿಲ್ಲ, ಅವರಿಗೆಲ್ಲ, ನಮಗೆ ಬಂದ ಹಾಗೆ ತಿಂಗಳ ಕೊನೆಗೆ ವೇತನ ಸಿಗುತ್ತಿರಲಿಲ್ಲ.
ಇಷ್ಟಿದ್ದರೂ ಅವರೆಲ್ಲಾ ನಮಗಿಂತ ಖುಷಿಯಾಗಿ, ಆರೋಗ್ಯವಾಗಿ ಬದುಕಿ ಜೀವನ ಪಯಣ ಮುಗಿಸಿ ಹೋಗಲಿಲ್ಲವೇ? ಅಂದರೇನರ್ಥ? ನಾವು ನಗರಕ್ಕೆ ಬಂದೆವು, ನಮ್ಮಲ್ಲಿನ ಬದುಕುವ ಕಲೆಯನ್ನ ಮರೆತೆವು. ಕೆಲ್ಸವಿಲ್ಲದಿದ್ದರೆ ಮುಂದೇನು? ಎನ್ನುವ ಆತಂಕ ಬಿಟ್ಟು ನಮಗೆ ಬೇರೆ ಯೋಚನೆ ಬರುವುದೇ ಇಲ್ಲ! ಹೆಚ್ಚು ಕಷ್ಟ ಪಡದೆ ತಿಂಗಳಿಗೆ ಸಿಗುವ ವೇತನದ ಗುಲಾಮರಾದ ನಮಗೆ, ಪರ್ಯಾಯ ಚಿಂತಿಸುವ ಶಕ್ತಿ ಎಲ್ಲಿಂದ ಬಂದಿತು?
ಈಗೇನು ಪ್ರಪಂಚ ಮುಳುಗಿ ಹೋಗಿಲ್ಲ. ಈಗಲೂ ಬದುಕು ನಮ್ಮ ಕೈಲಿದೆ. ನಮ್ಮ ಚಿಂತನೆಯಲ್ಲಿ, ನಾವು ಬದುಕನ್ನು ನೋಡುವ ರೀತಿಯಲ್ಲಿ ಒಂದಷ್ಟು ಬದಲಾವಣೆ ಬೇಕಾಗಿದೆ. ಅಷ್ಟು ಮಾಡಿಕೊಂಡರೆ, ಬದುಕು ಕಷ್ಟವೇನಲ್ಲ. ಅಷ್ಟರ ಮಟ್ಟಿಗೆ ಕೋವಿಡ್ 19 ನಮ್ಮನ್ನು ಒಂದು ಅಲರಾಂ ರೀತಿ ಎಚ್ಚರಿಸಿದೆ.
ಇದು ರೀಸೆಟ್ ಬಟನ್ : ಮೊಬೈಲ್ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದರೆ, ಅದನ್ನು ಮತ್ತೆ ಫ್ಯಾಕ್ಟರಿ ಸೆಟ್ಟಿಂಗ್‌ಗೆ ಹೊಂದಿಸುತ್ತೇವೆ. ಅದೂ ಇಲ್ಲದಿದ್ದರೆ? ರೀಸೆಟ್ ಎನ್ನುವ ಒಂದು ಬಟನ್ ಒತ್ತುತ್ತೇವೆ. ನಂತರ ಅದು ಹೊಸ ಮೊಬೈಲ್ ಮಟ್ಟಕ್ಕೆ ಬದಲಾಗಿರುತ್ತದೆ . ಅಂದರೆ, ಹಳೆಯ ಯಾವ ವಿಷಯವೂ ಇರದೇ, ಹೊಸದಾಗಿ ಬೇಕಾದುದನ್ನು ತುಂಬಲು ಸಿದ್ಧವಾಗುತ್ತೆ ಅಲ್ಲವೇ? ಈಗ ಆಗಿರುವುದೂ ಅದೇ! ಕೋವಿಡ್ 19, ವಿಶ್ವ ವ್ಯವಸ್ಥೆಯ ರೀಸೆಟ್ ಬಟನ್!!
ಗಮನಿಸಿ: ಎಲ್ಲೆಲ್ಲಿ ಸಮಸ್ಯೆ ಇರುತ್ತದೆಯೋ, ಅಲ್ಲಿ ಅವಕಾಶಗಳೂ ಹೇರಳವಾಗಿ ತೆರೆದು ಕೊಳ್ಳುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ