Advertisement

ಪೇಟೆ ಬೀದಿಗಳಲ್ಲಿ ಕುಣಿಯುವ ಹುಲಿಗಳ ಅಬ್ಬರ!

05:53 PM Sep 23, 2017 | |

ಆಲಂಕಾರು : ತಾಸೆದ ಪೆಟ್ಟಿಗೆ ಢೋಲಿನ ಸಾಥ್‌ನೊಂದಿಗೆ ನಾಡಿನ ಹುಲಿಗಳು ಪೇಟೆಗೆ ಧಾವಿಸುತ್ತಿವೆ.ಹುಲಿ, ಕರಡಿ, ಸಿಂಹ ಸಹಿತ ಹಲವು ವೇಷಗಳು ನವರಾತ್ರಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲಿವೆ. ಈ ಮೂಲಕ ಪರಂಪರೆಯನ್ನು ಜೀವಂತವಾಗಿ ಇರಿಸಿಕೊಳ್ಳುವ ಪ್ರಯತ್ನವೂ ನಡೆದಿದೆ.

Advertisement

ವಿನಾಶದ ಅಂಚಿನಲ್ಲಿರುವ ಕಾಡು ಪ್ರಾಣಿಗಳ ವೇಷವನ್ನು ಧರಿಸಿ ಜನರಲ್ಲಿ ಜಾಗೃತಿ ಮೂಡಿಸುವುದಲ್ಲದೆ, ಯಕ್ಷಗಾನ, ಯಮ, ನಾರದ, ಋಷಿ, ನಪ್ಪು ಬಾಲೆ ಮುಂತಾದ ವೇಷಗಳನ್ನೂ ಧರಿಸಿ ಒತ್ತಡದಲ್ಲಿರುವವರಿಗೆ ಒಂದಿಷ್ಟು ಖುಷಿ ನೀಡುವುದು ಈ ಕಲಾವಿದರ ಉದ್ದೇಶ.

ಗ್ರಾಮೀಣ ಕಲಾವಿದರು
ಗ್ರಾಮೀಣ ಪ್ರತಿಭೆಗಳಿಗೆ ಇದೊಂದು ಸೂಕ್ತ ವೇದಿಕೆಯಾಗಿ ಮಾರ್ಪಟ್ಟಿದೆ. ಕೆಲವರು ಇದನ್ನು ಧಾರ್ಮಿಕ ಕಟ್ಟು ಪಾಡಿನ ಆಚರಣೆಯಾಗಿ ಬಳಸಿದರೆ, ಮತ್ತೆ ಕೆಲವರು ಹರಕೆಯ ರೂಪದಲ್ಲಿ ತಮ್ಮ ಸೇವೆ ಮಾಡುತ್ತಾರೆ. 

ವಿವಿಧ ವೇಷಗಳು
ಹುಲಿ, ಕರಡಿ, ಸಿಂಹ ಪ್ರಮುಖ ಗುಂಪು ವೇಷಗಳಾದರೆ, ಬೇಟೆಗಾರ, ಪೈಂಟರ್‌, ಬೇಲಿ ಹಾಕುವವರು, ಗಾರೆ ಕೆಲಸಗಾರರಾಗಿ, ನಪ್ಪುಬಾಲೆ, ಯಕ್ಷಗಾನ, ಯಮ, ನಾರದ, ಋಷಿ- ಹೀಗೆ ಹತ್ತು ಹಲವು ಒಂಟಿ ವೇಷ ಧರಿಸಿ ದುರ್ಗೆಯ ಆರಾಧನೆ ಮಾಡುವ ವಾಡಿಕೆಯಿದೆ. 

ಹೆಚ್ಚಿನ ತಂಡಗಳು ಈಗಿಲ್ಲ
ಹಲವು ವರ್ಷದ ಹಿಂದೆ ನವರಾತ್ರಿ ವೇಷಗಳಿಗೆ ವಿಶೇಷವಾದ ಗೌರವವಿತ್ತು. ಆದರೆ ಇಂದು ಮಹತ್ವ ಕಡಿಮೆಯಾಗಿದೆ. ಟಿ.ವಿ, ಮೊಬೈಲ್‌ಗ‌ಳ ಪ್ರಭಾವದಿಂದಾಗಿ ಜನರೂ ಒಲವು ಕಳೆದುಕೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ವೇಷಧಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಇಂದು ವೇಷಧಾರಿಗಳು ದಿನಕ್ಕೆ 2000 ರೂ.ಗಳಿಗೂ ಹೆಚ್ಚು ಸಂಬಳದ ಬೇಡಿಕೆ ಯಿಡುತ್ತಿದ್ದಾರೆ. 

Advertisement

ಒಂದು ಹುಲಿ ಅಥವಾ ಕರಡಿ ವೇಷದ ತಂಡದಲ್ಲಿ 7ಮಂದಿ ಅಗತ್ಯವಿದ್ದು, ದಿನಕ್ಕೆ 14 ಸಾವಿರ ರೂ. ಸಂಬಳ ಭರಿಸಬೇಕು. ಊಟ-ತಿಂಡಿ ಖರ್ಚು, ಪ್ರಯಾಣ ವೆಚ್ಚ ಸೇರಿಸಿದರೆ 20 ಸಾವಿರ ರೂ.ಗಳಿಗೂ ಅಧಿಕ ಖರ್ಚು ಇದೆ. ಇಷ್ಟು ಖರ್ಚು ಭರಿಸುವ ಸಾಮರ್ಥ್ಯವಿಲ್ಲದೆ ಹಾಗೂ ದೇಣಿಗೆಯೂ ಸಂಗ್ರಹವಾಗದೆ ತಂಡಗಳು ಕಡಿಮೆಯಾಗುತ್ತಿವೆ ಎಂಬ ಅಭಿಪ್ರಾಯವಿದೆ.

ಹರಕೆ ಸಂದಾಯ
ತಮ್ಮ ಕೃಷಿಗೆ ಕಾಡು ಪ್ರಾಣಿಗಳ ವಿಪರೀತ ಉಪಟಳ, ಆರೋಗ್ಯ ಸಹಿತ ಹಲವು ದೈನಂದಿನ ಹಾಗೂ ವ್ಯಾವಹಾರಿಕ ಸಮಸ್ಯೆಗಳ ಪರಿಹಾರಕ್ಕೆ ಜನರು ದೇವರ ಮೊರೆ ಹೋಗುತ್ತಾರೆ. ನವರಾತ್ರಿಯ ಸಮಯದಲ್ಲಿ ವಿಶೇಷ ವೇಷ ಧರಿಸಿ ತಮ್ಮ ಸಮಸ್ಯೆ ಬಗೆಹರಿಸಿದ ದುರ್ಗೆಗೆ ಹರಕೆ ಸಂದಾಯ ಮಾಡುತ್ತಾರೆ. ವೇಷಧಾರಿಗಳು ಮೊದಲ ದಿವಸ ಬಣ್ಣ ಬಳಿದ ಬಳಿಕ ಕೊನೆಯ ದಿನ ದೇವಸ್ಥಾನದಲ್ಲಿ ಸೇವೆ ನಡೆಸಿಯೇ ಬಣ್ಣ ತೆಗೆಯುತ್ತಾರೆ. ರಾತ್ರಿ ತೆಂಗಿನ ಗರಿಯ ಚಾಪೆ ಮೇಲೆ ಮಲಗಿ, ಮಾಂಸಾಹಾರ-ಮದ್ಯಪಾನವನ್ನೂ ತ್ಯಜಿಸಿ ವ್ರತಾಚರಣೆ ಮಾಡುತ್ತಾರೆ.

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next