ಧಾರವಾಡ: ಈಗ ಹೆಬ್ಬಟ್ಟು ಕೊಟ್ಟು ಹೋಗು..ನಾಲ್ಕೈದು ದಿನ ಬಿಟ್ಟುಕೊಂಡು ಬಂದು ರೇಷನ್ ತಗೋ..ಎಂಬ ಮಾತುಗಳು ಜಿಲ್ಲೆಯ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಕೇಳಿ ಬರುತ್ತಿದೆ. ಇದರಿಂದ ಪಡಿತರ ಪಡೆಯಲು ಗ್ರಾಹಕರು ಎರಡೆರಡು ಸಲ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ವಾರದ ಬಳಿಕ ವಿತರಣೆ: ಪ್ರತಿ ತಿಂಗಳ 10ನೇ ದಿನಾಂಕದೊಳಗೆ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಪೂರೈಕೆ ಆಗುತ್ತಿದ್ದು, ಆ ಬಳಿಕ ತಿಂಗಳ ಕೊನೆಯವರೆಗೂ ಪಡಿತರ ವಿತರಣೆ ಸಾಗುತ್ತದೆ. ಇದರನ್ವಯ ಗ್ರಾಹಕರು ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೋಮೆಟ್ರಿಕ್ ಕೊಟ್ಟು ಪಡಿತರ ಪಡೆದುಕೊಳ್ಳಬೇಕು. ಆದರೆ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಪಡೆದು ವಾರದ ಬಳಿಕ ಪಡಿತರ ವಿತರಣೆ ಮಾಡುವ ಹೊಸ ಪದ್ಧ‌್ದತಿಯನ್ನು ಅಂಗಡಿ ಮಾಲೀಕರೇ ತಮ್ಮ ಅನುಕೂಲಕ್ಕಾಗಿ ಅಳವಡಿಸಿಕೊಂಡಿರುವುದು ಗ್ರಾಹಕರಿಗೆ ತೊಂದರೆ ಉಂಟು ಮಾಡಿದೆ. ನಗರ ಪ್ರದೇಶದಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಹೊಸ ಪದ್ಧತಿ ಜಾರಿ ಕಡಿಮೆ ಇದ್ದರೂ ಗ್ರಾಮೀಣ ಪ್ರದೇಶದ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಪದ್ಧತಿಯೇ ಹೆಚ್ಚು ಜಾಲ್ತಿಯಲ್ಲಿದೆ.
ಗ್ರಾಹಕರಿಗೆ ತೊಂದರೆ: ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಗ್ರಾಹಕರು ಮೊದಲು ಹೆಬ್ಬೆಟ್ಟು ಕೊಟ್ಟು ಹೋಗಬೇಕು. ಆಮೇಲೆ ವಾರದ ಬಳಿಕ ಬಂದು ಪಡಿತರ ತೆಗೆದುಕೊಂಡು ಹೋಗಬೇಕು. ಇದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ಜನರಿಗೆ ತೊಂದರೆ ಆಗುತ್ತಿದೆ. ನಮ್ಮ ಕೆಲಸ ಕಾರ್ಯ ಬಿಟ್ಟು ಇಡೀ ದಿನ ಹೆಬ್ಬೆಟ್ಟು ಕೊಡಲು ನಿಂತರೆ ಮತ್ತೂಂದು ದಿನ ಪಡಿತರ ಪಡೆಯಲು ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರೇ ಸ್ವಯಂ ಅನುಕೂಲಕ್ಕಾಗಿ ಮಾಡಿಕೊಂಡಿರುವ ಈ ಪದ್ಧತಿಗೆ ಆಹಾರ ಇಲಾಖೆ ಕಡಿವಾಣ ಹಾಕಿ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಬಗೆಹರಿಸಬೇಕು ಎಂಬುದು ಗ್ರಾಹಕರ ಆಗ್ರಹವಾಗಿದೆ.
Advertisement
ಜಿಲ್ಲೆಯಲ್ಲಿ ಒಟ್ಟು 514 ನ್ಯಾಯಬೆಲೆ ಅಂಗಡಿಗಳಿದ್ದು, ಈ ಪೈಕಿ 513ರಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇದೆ. ಉಳಿದಂತೆ ಧಾರವಾಡ ತಾಲೂಕಿನ ಒಂದು ನ್ಯಾಯ ಬೆಲೆ ಅಂಗಡಿಯಲ್ಲಿ ಮಾತ್ರವಷ್ಟೇ ನೆಟ್ವರ್ಕ್ ಸಮಸ್ಯೆಯಿಂದ ಈವರೆಗೂ ಬಯೋಮೆಟ್ರಿಕ್ ಅಳವಡಿಸಲು ಸಾಧ್ಯವಾಗಿಲ್ಲ. ಈ ನ್ಯಾಯ ಬೆಲೆ ಅಂಗಡಿ ಹೊರತುಪಡಿಸಿ ಉಳಿದ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಸ್ವೀಕರಿಸಿದ ಬಳಿಕ ಪಡಿತರ ವಿತರಣೆ ಆಗುತ್ತಿದೆ ಎಂಬುದು ಆಹಾರ ಇಲಾಖೆ ಅಧಿಕಾರಿಗಳ ಮಾತಾಗಿದೆ. ಆದರೆ ಬಹುತೇಕ ನ್ಯಾಯ ಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ತೆಗೆದುಕೊಂಡ ಕೂಡಲೇ ಪಡಿತರ ವಿತರಣೆ ಆಗುತ್ತಿಲ್ಲ. ಬದಲಾಗಿ ವಾರಗಟ್ಟಲೇ ಕಾದ ಬಳಿಕವಷ್ಟೇ ಪಡಿತರ ಸಿಗುತ್ತಿದೆ ಎಂಬುದು ಗ್ರಾಹಕರ ಆರೋಪ.