Advertisement
ವಿಶೇಷ ವರದಿ –ಕುಂದಾಪುರ/ಬೈಂದೂರು: ಕಳೆದೊಂದು ವಾರದಿಂದ ಆಹಾರ ಇಲಾಖೆ ಗ್ರಾಹಕರನ್ನು ಗುರುತಿಸುವ ಇ-ಕೆ.ವೈ.ಸಿ. ಸರ್ವರ್ ಸಮಸ್ಯೆಯಿಂದ ಪಡಿತರ ಅಂಗಡಿ ಹಾಗೂ ತಾ| ಕಚೇರಿಯ ಆಹಾರ ಶಾಖೆಯಲ್ಲಿ ನೂರಾರು ಜನ ಸರದಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ. ಸರ್ವರ್ ನಿಧಾನವಾದ ಕಾರಣ ದಿನದಲ್ಲಿ ಕೇವಲ 6 ಜನರ ಹೆಬ್ಬೆಟ್ಟಿನ ಗುರುತು ಮಾತ್ರ ಪಡೆದ ಉದಾಹರಣೆ ಕೂಡಾ ಗ್ರಾಮೀಣ ಭಾಗದಲ್ಲಿ ನಡೆದಿದೆ. ಈ ಸಮಸ್ಯೆ ನಗರ ಹಾಗೂ ಗ್ರಾಮಾಂತರ ಎರಡೂ ಕಡೆ ಒಂದೇ ರೀತಿಯಿದೆ.
ಅನೇಕ ಕಡೆ ಸೊಸೈಟಿಗಳಲ್ಲಿ ಪಡಿತರ ಚೀಟಿಯಲ್ಲಿ ಮೃತರಾದವರ ಹೆಸರು ಉಳಿದಿದೆ. ಬಿಪಿಎಲ್ ಅಲ್ಲದವರ ಹೆಸರೂ ಪಟ್ಟಿಯಲ್ಲಿದೆ. ರಾಜ್ಯದಲ್ಲಿ ಹತ್ತಾರು ಕೋಟಿ ಮೌಲ್ಯದ ಪಡಿತರ ಸಾಮಗ್ರಿ ಗ್ರಾಹಕರಲ್ಲದವರಿಗೂ ದೊರೆಯುತ್ತಿತ್ತು. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಪ್ರಕಾರ (ನೋ ಯುವರ್ ಕಸ್ಟಮರ್, ನಿಮ್ಮ ಗ್ರಾಹಕರನ್ನು ಅರಿಯಿರಿ) ಕೆ.ವೈ.ಸಿ. ಆರಂಭಿಸಿದೆ. ಕಳೆದ ಜೂನ್‌ನಿಂದ ಇದ್ದ ಈ ಯೋಜನೆ ಅನಂತರದ ತಿಂಗಳಿನಲ್ಲಿ ಪಡಿತರ ವಿತರಣೆಯಾಗದ ಮೊದಲ 10 ದಿನಗಳಲ್ಲಿ ಮಾತ್ರ ಇತ್ತು. ಈ ವರ್ಷ ಜನವರಿ ತಿಂಗಳಿಡೀ ಗಡುವು ನೀಡಲಾಗಿದ್ದು ಜ. 31ರೊಳಗೆ ಪೂರ್ಣಪ್ರಮಾಣದಲ್ಲಿ ಅಪ್‌ಡೇಟ್ ಮಾಡಬೇಕಿದೆ. ಮಾ. 31ರ ವರೆಗೆ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಬೆರಳಚ್ಚು
ನ್ಯಾಯಬೆಲೆ ಅಂಗಡಿಯವರು ಪಡಿತರ ಚೀಟಿಯಲ್ಲಿ ಹೆಸರಿ ರುವ ಪ್ರತಿ ಗ್ರಾಹಕರ ಬೆರಳಚ್ಚು ಪಡೆಯಬೇಕು. ಜ.1ರಿಂದ ಇಂದಿನವರೆಗೆ ಸರ್ವರ್ ಸಮಸ್ಯೆಯಿಂದ ಅತ್ತ ಬೆರಳಚ್ಚು ಪಡೆಯಲಾಗದೆ ಇತ್ತ ವ್ಯವಹಾರವು ನಡೆಸಲಾಗದೆ ಗ್ರಾಹಕರಿಗೆ ಮತ್ತು ಅಧಿಕಾರಿಗಳಿಗೆ ತೊಂದರೆಯಾಗುತ್ತಿದೆ. ಆಗಮಿಸಿದ ನಾಗರಿಕರಿಗೆ ನಾಳೆ ಬನ್ನಿ ಎನ್ನುವ ಧ್ವನಿ ಕೇಳಿ ಸಾಕಾಗಿದೆ.
Related Articles
ರಾಜ್ಯದಲ್ಲಿ ಕೆ.ವೈ.ಸಿ. ಪ್ರಕ್ರಿಯೆ 36 ಶೇ.ರಷ್ಟು ಮಾತ್ರ ಆಗಿ ರುವುದರಿಂದ ಆಹಾರ ಶಾಖೆಯಲ್ಲಷ್ಟೇ ಇದ್ದ ಸೌಲಭ್ಯವನ್ನು ತ್ವರಿತವಾಗಿ ನಡೆಸಲು ನ್ಯಾಯಬೆಲೆ ಅಂಗಡಿಗಳಲ್ಲಿ ಇದನ್ನು ಅಳವಡಿಸಲಾಗಿದೆ. ಇದರ ಪ್ರಕಾರ ಕುಟುಂಬ ಸದಸ್ಯರೆಲ್ಲರೂ ನ್ಯಾಯಬೆಲೆ ಅಂಗಡಿಗೆ ಹೋಗಬೇಕೆಂದಿಲ್ಲ. ಸೇವಾ ಸಿಂಧು ಕಚೇರಿಯಲ್ಲಿ ಕುಟುಂಬದ ಒಂದು ಸದಸ್ಯ ಆಹಾರ ಇಲಾಖೆ ವೆಬ್‌ಸೈಟ್‌ನಲ್ಲಿ ಬೆರಳಚ್ಚು ನೀಡಿದಾಗ ಉಳಿದ ಸದಸ್ಯರ ಮೊಬೈಲ್ ನಂಬರ್ ಆಧಾರ್ ಕಾರ್ಡ್‌ನಲ್ಲಿ ದಾಖಲಾಗಿದ್ದರೆ ಅವರಿಗೆ ಒ.ಟಿ.ಪಿ. ಬರುತ್ತದೆ. ಅದನ್ನು ವೆಬ್‌ಸೈಟ್‌ನಲ್ಲಿ ನಮೂ ದಿಸಿದರೆ ಕೆ.ವೈ.ಸಿ. ಪರಿಷ್ಕರಣೆ ಪ್ರಕ್ರಿಯೆ ಮುಗಿಯುತ್ತದೆ.
Advertisement
ನೆಟ್‌ವರ್ಕ್ ಇಲ್ಲದೆ ಸಮಸ್ಯೆಯಾಗಿದೆ. ಸಿದ್ದಾಪುರ, ಅಮಾಸೆಬೈಲು, ವಂಡ್ಸೆ, ತೂದಳ್ಳಿ, ಕರಾವಳಿ, ಗಂಗನಾಡು ಮೊದಲಾದೆಡೆ ನೆಟ್‌ವರ್ಕ್ ಸಮಸ್ಯೆ ತೀವ್ರವಾಗಿದೆೆ. ಇಲಾಖೆ ಮಾ. 31ರ ವರೆಗೆ ಗಡುವು ಮುಂದುವರಿಸಿದೆ. ಹೀಗಾಗಿ ಗ್ರಾಹಕರು ಈ ಬಗ್ಗೆ ಗೊಂದಲಪಡುವ ಆವಶ್ಯಕತೆಯಿಲ್ಲ.
ಒಬ್ಬರೇ ಅಧಿಕಾರಿಬಹುತೇಕ ತಾಲೂಕುಗಳಲ್ಲಿ 50-60 ಪಡಿತರ ಅಂಗಡಿಗಳ ವ್ಯಾಪ್ತಿಗೆ ಆಹಾರ ಶಾಖೆಗೆ ಉಪ ತಹಶೀಲ್ದಾರ್ ದರ್ಜೆಯ ಒಬ್ಬ ಅಧಿಕಾರಿಯನ್ನು ನಿಯುಕ್ತಿಗೊಳಿಸಲಾಗುತ್ತದೆ. ಬೈಂದೂರು ತಾಲೂಕು ಆಡಳಿತಾತ್ಮಕವಾಗಿ ಪ್ರತ್ಯೇಕವಾದರೂ ಆಹಾರ ಶಾಖೆ ಉಪ ತಹಶೀಲ್ದಾರ್ ಇಲ್ಲ. 116 ಪಡಿತರ ಅಂಗಡಿಗಳಿಗೆ ಒಬ್ಬರೇ ಉಪ ತಹಶೀಲ್ದಾರ್. ಹೆಬ್ರಿ ತಾಲೂಕಿನ ಕೆಲವು ಅಂಗಡಿಗಳೂ ಇವರಿಗೇ!. ಇಲ್ಲಿನ ಡಿಟಿಗೆ ಐದು ಜವಾಬ್ದಾರಿ. ತಾಲೂಕು ಕಚೇರಿ ಉಪ ತಹಶೀಲ್ದಾರ್, ಎರಡು ತಾಲೂಕಿನ ಆಹಾರ ಉಪ ತಹಶೀಲ್ದಾರ್, ಸರ್ವೆ ಇಲಾಖೆ ಉಪ ತಹಶೀಲ್ದಾರ್ ಹಾಗೂ ಆಹಾರ ನಿರೀಕ್ಷಕರ ಜವಾಬ್ದಾರಿ!. ಆಹಾರ ಶಾಖೆಯಲ್ಲಿ ಡಾಟಾ ಆಪರೇಟರ್ ಇಲ್ಲ. ತಪ್ಪು ಮಾಹಿತಿ
ತಪ್ಪು ಮಾಹಿತಿಯಿಂದ ಗೊಂದಲ ಉಂಟಾಗಿದೆ. ಬೆಂಗಳೂರು, ಮುಂಬೈ, ಪುಣೆ, ಹೈದ್ರಾಬಾದ್‌ನಿಂದ ತರಾತುರಿಯಲ್ಲಿ ಓಡಿ ಬರುವಂತಾಗಿದೆ.ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ನೆಟ್‌ವರ್ಕ್ ಇಲ್ಲದೆ ನಾಲ್ಕೈದು ದಿನದಿಂದ ಉದ್ಯೋಗ ಬಿಟ್ಟು ಕಾಯಬೇಕಾದ ಪರಿಸ್ಥಿತಿ ಬಂದಿದೆ.ಈ ಬಗ್ಗೆ ಇಲಾಖೆ ಗೊಂದಲ ಉಂಟು ಮಾಡಿದೆ.
-ಜಯವರ್ಧನ ಬಿಲ್ಲವ, ತೂದಳ್ಳಿ ಡಬ್ಬಲ್ ಕೆಲಸ
ನ್ಯಾಯಬೆಲೆ ಅಂಗಡಿಗಳಲ್ಲಿ 10ನೇ ತಾರೀಕಿನಿಂದ ಪಡಿತರ ನೀಡಬೇಕಾಗಿದೆ.ಅದರ ನಡುವೆ ಕೆ.ವೈ.ಸಿ. ಕಾರ್ಯದಿಂದ ಗ್ರಾಹಕರಿಗೂ ತೊಂದರೆಯಾಗುತ್ತಿದೆ.ನೆಟ್‌ವರ್ಕ್ ಸಮಸ್ಯೆ, ಸರ್ವರ್ ಕೊರತೆಯಿಂದ ನಿಭಾಯಿ ಸಲು ಸಾಧ್ಯವಾಗುತ್ತಿಲ್ಲ. ನ್ಯಾಯಬೆಲೆ ಅಂಗಡಿ ಹೊರತುಪಡಿಸಿ ಪಂಚಾಯತ್ ಅಥವಾ ತಾಲೂಕು ಕಚೇರಿಗಳಲ್ಲಿ ಇದನ್ನು ಅನುಷ್ಠಾನ ಮಾಡಿದರೆ ಗ್ರಾಹಕರಿಗೆ ಅನುಕೂಲವಾಗುತ್ತಿತ್ತು.
-ಶಾಂತಾರಾಮ ಶೆಟ್ಟಿ, ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿಗಳು, ಬೈ.ವ್ಯ.ಸೇ.ಸ.ಯಡ್ತರೆ ಬೈಂದೂರು ಎಲ್ಲೆಡೆ ಸಮಸ್ಯೆಯಿದೆ
ರಾಜ್ಯದೆಲ್ಲೆಡೆ ಸರ್ವರ್ ಸಮಸ್ಯೆಯಿದೆ. ಪ್ರತಿದಿನ, ಪ್ರತಿಕ್ಷಣ ಇಲಾಖೆಗೆ ಮಾಹಿತಿ ನೀಡಲಾಗುತ್ತಿದೆ. ಸರಿಪಡಿಸುವ ಭರವಸೆ ದೊರೆತಿದೆ. ಅವಧಿಯನ್ನು ಮಾರ್ಚ್‌ವರೆಗೆ ವಿಸ್ತರಿಸಲಾಗಿದ್ದು ಹೆಬ್ಬೆಟ್ಟು ನೀಡದಿದ್ದರೆ ಎಪ್ರಿಲ್‌ನಿಂದ ಬಿಪಿಎಲ್‌ಗೆ ಪಡಿತರ ದೊರೆಯುವುದಿಲ್ಲ. ಅಂತಹವರು ಎಪ್ರಿಲ್‌ನಲ್ಲಿ ನೀಡಿದರೆ ಮೇಯಿಂದ ದೊರೆಯಲಿದೆ. ಆತಂಕ ಅನಗತ್ಯ.
-ಪ್ರಕಾಶ್, ಆಹಾರ ನಿರೀಕ್ಷಕರು, ಕುಂದಾಪುರ