ಎಚ್.ಡಿ.ಕೋಟೆ: ರಾಜ್ಯದ ಜೀವನಾಡಿಗಳಲ್ಲೊಂದಾದ ತಾಲೂಕಿನ ಕಬಿನಿ ಜಲಾಶಯದ ಕಳೆದ 2 ದಿನಗಳಲ್ಲಿ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡ ಪರಿಣಾಮ ಜಲಾಶಯಕ್ಕೆ ಸುಮಾರು 15 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿದ್ದು ಈಗ ಜಲಾಶಯದ ಸಂಗ್ರಹ ನೀರಿನ ಮಟ್ಟ 2281.50 ಅಡಿಗೆ ಏರಿಕೆ ಕಂಡಿದೆ. ಹೀಗಾಗಿ ಜಲಾಶಯ ಇನ್ನೆರಡು ಮೂರು ದಿನಗಳಲ್ಲಿ ಭರ್ತಿಗೊಳ್ಳುವ ಸಾಧ್ಯತೆಯಿದೆ.
ಕೇರಳದ ವೈನಾಡು ಪ್ರದೇಶ ಸೇರಿದಂತೆ ತಾಲೂಕು ಮತ್ತು ಕಬಿನಿ ಹಿನ್ನಿರು ಪ್ರದೇಶದಲ್ಲಿ ಕಳೆದ 3-4 ದಿನಗಳಿಂದ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಪ್ರಮಾಣ ಹೆಚ್ಚಿದೆ. ಕಳೆದ 5 ದಿನಗಳ ಹಿಂದೆ 1800 ಕ್ಯೂಸೆಕ್ ಇದ್ದ ಒಳ ಹರಿವು, ಭಾನುವಾರ 4.5 ಸಾವಿರ ಕ್ಯೂಸೆಕ್ ತನಕ ಏರಿತ್ತು. ಭಾನುವಾರ ಇಡೀ ದಿನ ವರುಣ ಆರ್ಭಟಿಸಿದ್ದರಿಂದ ಸೋಮವಾರ ದಿಢೀರ್ ಸುಮಾರು 15 ಸಾವಿರ ಕ್ಯೂಸೆಕ್ ಏರಿಕೆ ಕಂಡಿದೆ.
ಜಲಾಶಯದ ಗರಿಷ್ಠ ಮಟ್ಟ 2284 ಅಡಿ ಆಗಿದ್ದು, ಜಲಾಶಯದಲ್ಲಿ ಸದ್ಯಕ್ಕೆ 18.1 ಟಿಎಂಸಿ (2281.50) ನೀರು ಸಂಗ್ರಹಣಗೊಂಡಿದೆ. ಕಳೆದ ವರ್ಷ ಇದೆ ದಿನಕ್ಕೆ ಜಲಾಶಯದಲ್ಲಿ 2269.73 ಅಡಿಗಳಷ್ಟು ನೀರು ಮಾತ್ರ ಸಂಗ್ರಹಣವಾಗಿತ್ತು ಆಗ ಜಲಾಶಯಕ್ಕೆ 2 ಸಾವಿರ ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿತ್ತು.
ಭರ್ತಿಗೆ 2 ಅಡಿ ಬಾಕಿ, ಬಾಗಿನ ಸಂಬಂಧ ಯಾವುದೇ ಸೂಚನೆ ಬಂದಿಲ್ಲ; ಜಲಾಶಯದಿಂದ ಈಗ ಮುಂಭಾಗದ ನದಿಗೆ ಪಕ್ಕದ ಸುಭಾಷ್ ವಿದ್ಯುತ್ ಘಟಕದ ಮೂಲಕ 5 ಸಾವಿರ ಕ್ಯೂಸೆಕ್ ನೀರು, ಜಲಾಶಯದ ಬಲದಂಡೆ ಮತ್ತು ಎಡದಂಡೆ ನಾಲೆ ಸೇರಿ 1500 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ, ಮಳೆ ಆರ್ಭಟ ಮುಂದುವರಿದಿದೆ. ಇದೆ ರೀತಿ ಮಳೆಯಾದರೆ ಹೆಚ್ಚಿನ ಜಲಾಶಯಕ್ಕೆ ಹರಿದು ಬರಲಿದ್ದು ಇನ್ನೇರಡು 3 ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.
ಇಲಾಖೆ ಮೇಲಧಿಕಾರಿಗಳಿಂದ ಜಲಾಶಯಕ್ಕೆ ಸರ್ಕಾರದಿಂದ ಬಾಗಿನ ಅರ್ಪಣೆ ಸಂಬಂಧ ಯಾವ ಸೂಚನೆ ಬಂದಿಲ್ಲ. ಭದ್ರತೆ ದೃಷ್ಟಿಯಿಂದ ಕ್ರಷ್ಟ್ ಗೇಟ್‌ಗಳ ಮೂಲಕ ಮುಂಭಾಗದ ನದಿಗೆ ಹೆಚ್ಚಿನ ನೀರನ್ನು ಹೊರ ಬಿಡಲಾಗುವುದು ಎಂದು ಕಬಿನಿ ಜಲಾಶಯ ಇಇ ಜಗದೀಶ್ “ಉದಯವಾಣಿ’ಗೆ ತಿಳಿಸಿದ್ದಾರೆ.
* ಬಿ.ನಿಂಗಣ್ಣಕೋಟೆ