Advertisement

ಬೆಚ್ಚಿ ಬೀಳಿಸಿದ ಸರಣಿ ಮನೆಗಳ್ಳತನ

05:57 PM May 03, 2022 | Team Udayavani |

ರಾಯಚೂರು: ನಗರದಲ್ಲಿ ನೇತಾಜಿ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲೇ ಮೂರು ಮನೆಗಳ ಸರಣಿ ಕಳ್ಳತನ ನಡೆದಿದ್ದು, ನಗರವಾಸಿಗಳನ್ನು ಬೆಚ್ಚಿ ಬೀಳುವಂತೆ ಮಾಡಿದೆ.

Advertisement

ಬೇಸಿಗೆ ವೇಳೆ ಮನೆಯವರೆಲ್ಲ ಮೇಲೆ ಮಲಗುವುದರಿಂದ ಕಳವು ಪ್ರಕರಣಗಳು ನಡೆಯುವುದು ಸಾಮಾನ್ಯ. ಆದರೆ, ಹಗಲಲ್ಲೇ ಈ ರೀತಿ ನಡೆದಿರುವುದು ಪೊಲೀಸರಿಗೂ ಕಂಗೆಡಿಸಿದೆ.

ವಿವಿಧ ಬಡಾವಣೆಗಳಲ್ಲಿನ ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಗಾಜಗಾರಪೇಟೆ, ನೇತಾಜಿ ನಗರ ವ್ಯಾಪ್ತಿಯಲ್ಲಿ ಬರುವ ಮೂರು ಮನೆಗಳಲ್ಲಿ ಕಳವಾಗಿದೆ. ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಕಳ್ಳರು, ಬಾಗಿಲು ಮುರಿದು ಅಲಮಾರಿಗಳಲ್ಲಿದ್ದ ಚಿನ್ನಾಭರಣ, ಹಣವನ್ನು ಕದ್ದು ಪರಾರಿಯಾಗಿದ್ದಾರೆ.

ನೇತಾಜಿ ನಗರದ ನಿವಾಸಿ ಗೋಪಾಲಾಚಾರ್ಯ ಅವರ ಮನೆಯಲ್ಲಿಟ್ಟಿದ್ದ 80,000 ರೂ. ನಗದು 4 ತೊಲ ಬಂಗಾರ, 1 ಕೆಜಿ ಬೆಳ್ಳಿ ಕಳುವಾಗಿದೆ. ಅದೇ ರೀತಿ ಗಾಜಗಾರಪೇಟೆಯ ನಿವಾಸಿ ಅಂಬರೀಶ ಮನೆಗೆ ನುಗ್ಗಿರುವ ಕಳ್ಳರು ಬಟ್ಟೆಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಕೈಗೆ ಸಿಕ್ಕ ಚಿನ್ನಾಭರಣ ತೆಗೆದುಕೊಂಡು ಹೊಗಿದ್ದಾರೆ. ಹೀಗೆ ಇತರೆ ಮನೆಗಳಿಗೆ ನುಗ್ಗಿದ ಅಪರಿಚಿತ ಕಳ್ಳರು ಹಾಡುಹಗಲೇ ಕೈ ಚಳಕ ತೋರಿದ್ದಾರೆ.

ಈಚೆಗೆ ತಾಲೂಕಿನ ಗಾರಲದಿನ್ನಿಯಲ್ಲೂ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ನಗರದಲ್ಲಿ ಮೇಲಿಂದ ಮೇಲೆ ಇಂಥ ಘಟನೆಗಳು ನಡೆಯುತ್ತಿರುವುದು, ಅದರಲ್ಲೂ ಹಗಲಲ್ಲೇ ಕಳ್ಳತನ ನಡೆದಿರುವುದು ಸಾಕಷ್ಟು ಆತಂಕ ಸೃಷ್ಟಿಸಿದೆ.

Advertisement

ಒಬ್ಬನೇ ಮಾಡಿರುವ ಶಂಕೆ: ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರಿಗೆ ಪ್ರಾಥಮಿಕ ಮಾಹಿತಿಯಲ್ಲಿ ಈ ಕಳ್ಳತನಗಳನ್ನು ಒಬ್ಬನೇ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳ್ಳತನ ನಡೆದ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, 25-30 ವರ್ಷದ ಯುವಕ ಅನುಮಾನಾಸ್ಪದವಾಗಿ ದೃಶ್ಯಗಳು ಸೆರೆಯಾಗಿವೆ. ಈ ರೀತಿ ಹಾಡಹಗಲಲ್ಲೇ ಕೃತ್ಯ ಎಸಗಿರುವುದನ್ನು ನೋಡಿದರೆ ಯುವಕ ಹಣದಾಹದಿಂದ ಈ ರೀತಿ ಮಾಡಿರುವ ಸಾಧ್ಯತೆಗಳಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ನೇತಾಜಿ ಠಾಣೆ ಪಿಎಸ್‌ಐ ಬಸವರಾಜ್‌ ನಾಯಕ ತಿಳಿಸಿದ್ದಾರೆ.

ನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಿಪೇರಿ ಹೆಸರಿನಲ್ಲಿ ಮನೆಗಳ ಮುಂದೆ ಬರುವ ಜನರಿಂದ ಎಚ್ಚರಿಕೆ ವಹಿಸುವಂತೆ ಪೊಲೀಸ್‌ ಇಲಾಖೆಯು ಜಾಗೃತಿ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next