Advertisement

ಪೊಲೀಸರ ಮೇಲೆರಗಿದ ಸುಲಿಗೆಕೋರನಿಗೆ ಗುಂಡೇಟು

11:42 AM Nov 30, 2018 | Team Udayavani |

ಬೆಂಗಳೂರು: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಗುರುವಾರ ಮುಂಜಾನೆ ಒಂದೂವರೆ ಗಂಟೆ ಅವಧಿಯಲ್ಲಿ ಆರು ಮಂದಿ ವಾಹನ ಸವಾರರನ್ನು ಸುಲಿಗೆ ಮಾಡಿದ್ದ ಆರೋಪಿಗೆ ಚಿಕ್ಕಜಾಲ ಪೊಲೀಸರು ಗುಂಡೇಟು ನೀಡುವ ಮೂಲಕ ಪಾಠ ಕಲಿಸಿದ್ದಾರೆ.

Advertisement

ಪೊಲೀಸರಿಂದ ಗುಂಡೇಟು ತಿಂದಿರುವ ಆರ್‌.ಟಿ.ನಗರ ನಿವಾಸಿ ಮೊಹಮದ್‌ ಅಶ್ರಫ್ಖಾನ್‌ ಎಂಬಾತನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಜತೆ ಸರಣಿ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಗುರುವಾರ ನಸುಕಿನಲ್ಲಿ ತನ್ನ ಸ್ನೇಹಿತರ ಜತೆ ಬೈಕ್‌ಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಗೆ ಬಂದ ಆರೋಪಿ ಮೊಹಮದ್‌ ಅಶ್ರಫ್, ಸುಲಿಗೆಗಾಗಿ ಹೊಂಚುಹಾಕಿ ಕುಳಿತಿದ್ದ. ಮುಂಜಾನೆ 4 ಗಂಟೆ ಸುಮಾರಿಗೆ ದೇವನಹಳ್ಳಿ ನಿವಾಸಿ ನಾಗರಾಜ್‌ ಎಂಬುವವರು ತರಕಾರಿ ತರಲು ಟಾಟಾ ಏಸ್‌ ವಾಹನದಲ್ಲಿ ಬೆಂಗಳೂರಿಗೆ ಬರುತ್ತಿದ್ದರು.

ಈ ವೇಳೆ ಕನ್ನಮಂಗಲ ಗೇಟ್‌ ಸಮೀಪ ನಾಗರಾಜ್‌ರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಚಾಕು ತೋರಿಸಿ 12 ಸಾವಿರ ರೂ. ನಗದು ಕಿತ್ತುಕೊಂಡಿದ್ದಾರೆ. ಬಳಿಕ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದಾಗ ಅವರಿಂದ ತಪ್ಪಿಸಿಕೊಂಡು ಓಡಿದ ನಾಗರಾಜ್‌, ಅಲ್ಲಿದ್ದ ಪೊದೆಗಳಲ್ಲಿ ಅವಿತುಕೊಂಡು ತನ್ನ ಮಾವನಿಗೆ ದೂರವಾಣಿ ಕರೆ ಮಾಡಿದ್ದಾರೆ. ಮಾವ ಕಂಟ್ರೋಲ್‌ ರೂಮ್‌ಗೆ ಮಾಹಿತಿ ನೀಡಿದ್ದಾರೆ.

ಈ ಮಾಹಿತಿ ಆಧರಿಸಿ ಏರ್‌ಪೋರ್ಟ್‌ ಠಾಣೆ ಹೊಯ್ಸಳ ಸಿಬ್ಬಂದಿ ದುಷ್ಕರ್ಮಿಗಳನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಬೆಳವಣಿಗೆಗಳ ಮಧ್ಯೆಯೇ ಅಶ್ರಪ್‌ ಹಾಗೂ ಆತನ ಸಹಚರರು ಅದೇ ಹೆದ್ದಾರಿಯಲ್ಲಿ ಕಾರು ಚಾಲಕ ಸೆರಿ ಐವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅವರಿಂದ ಮೊಬೈಲ್‌ ಫೋನ್‌, ಹಣ, 2 ಬೈಕ್‌ ಕಳವು ಮಾಡಿದ್ದಾರೆ. 

Advertisement

ಈ ಮಾಹಿತಿ ಆಧರಿಸಿದ ಚಿಕ್ಕಜಾಲ ಠಾಣೆ ಪೊಲೀಸರು, ದುಷ್ಕರ್ಮಿಗಳ ಬಂಧನಕ್ಕೆ ಹೆದ್ದಾರಿಯಲ್ಲಿ ನಾಕಾಬಂಧಿ ಅಳವಡಿಸಿದ್ದರು. ಬೆಳಗ್ಗೆ 8 ಗಂಟೆ ಸುಮಾರಿಗೆ ಭಾರತಿ ನಗರದ ವಿಐಟಿ ಕಾಲೇಜಿನ ಮುಂಭಾಗ ಬೈಕ್‌ನಲ್ಲಿ ಬಂದ ಆರೋಪಿ ಅಶ್ರಫ್ಖಾನ್‌ ಹಾಗೂ ಆತನ ಸಹಚರರನ್ನು ಚಿಕ್ಕಚಾಲ ಪಿಎಸ್‌ಐ ಪ್ರವೀಣ್‌ ಕುಮಾರ್‌ ನೇತೃತ್ವದ ತಂಡ ತಡೆದಿದೆ.

ಪೊಲೀಸರನ್ನು ಕಂಡ ಕೂಡಲೇ ಬೈಕ್‌ ತಿರುಗಿಸಿಕೊಂಡು ಪರಾರಿಯಾಗಲು ಯತ್ನಿಸಿದ ಅಶ್ರಫ್ನನ್ನು ಹಿಡಿಯಲು ಹೋದ ಪೇದೆ ಲೋಕೇಶ್‌ ಮೇಲೆ ಆತ ಲಾಂಗ್‌ನಿಂದ ಹಲ್ಲೆ ನಡೆಸಿದ್ದು, ಪೇದೆ ಕೈಗೆ ಗಾಯವಾಗಿದೆ. ಈ ವೇಳೆ ಶರಣಾಗುವಂತೆ ಸೂಚಿಸಿದ ಪಿಎಸ್‌ಐ ಪ್ರವೀಣ್‌ಕುಮಾರ್‌, ಗಾಳಿಯಲ್ಲಿ ಗುಂಡು ಹಾರಿಸಿದರೂ ಶರಣಾಗದ ಆರೋಪಿ, ಪಿಎಸ್‌ಐ ಮೇಲೇ ಹಲ್ಲೆಗೆ ಮುಂದಾಗಿದ್ದಾನೆ.

ಈ ವೇಳೆ ಪ್ರಾಣರಕ್ಷಣೆಗಾಗಿ, ಪಿಎಸ್‌ಐ, ಅಶ್ರಫ್ ಎಡಗಾಲಿನ ಪಾದಕ್ಕೆ ಗುಂಡು ಹೊಡೆದು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಆರೋಪಿ ಅಶ್ರಫ್ಖಾನ್‌ ಹಾಗೂ ಆತನ ಸ್ನೇಹಿತರು ನಡೆಸಿದ ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿಕ್ಕಚಾಲ ಠಾಣೆಯಲ್ಲಿ 3 ಹಾಗೂ ಏರ್‌ಪೋರ್ಟ್‌ ಪೊಲೀಸ್‌ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಎಂದು ಅಧಿಕಾರಿ ಹೇಳಿದರು. ಆರೋಪಿ ಮೊಹಮದ್‌ ಅಶ್ರಫ್ ಚಾಳಿಬಿದ್ದ ಸುಲಿಗೆಕೋರನೇ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಆತನ ಸಹಚರರ ಬಂಧನದ ಬಳಿಕ ಮತ್ತಷ್ಟು ಮಾಹಿತಿ ಹೊರಬೀಳಲಿದೆ ಎಂದು ಅಧಿಕಾರಿ ತಿಳಿಸಿದರು.

ಈ ವರ್ಷದ 23ನೇ ಶೂಟೌಟ್‌: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಚಾಳಿಬಿದ್ದ ಆರೋಪಿಗಳಿಗೆ ನಗರ ಪೊಲೀಸರು ಗುಂಡೇಟಿನ ರುಚಿ ತೋರಿಸಿ ಜೈಲಿನ ಹಾದಿ ಹಿಡಿಸುತ್ತಿದ್ದಾರೆ. ಇದೇ ವರ್ಷ ಎಂಟು ಪೊಲೀಸ್‌ ವಿಭಾಗಗಳಿಂದ 23 ಶೂಟೌಟ್‌ ಪ್ರಕರಣಗಳು ನಡೆದಿದ್ದು, ಕುಖ್ಯಾತ ರೌಡಿಶೀಟರ್‌ ಸೈಕಲ್‌ ರವಿ, ನಟೋರಿಯಸ್‌ ಸರಚೋರ ಅಚ್ಯುತ್‌ಕುಮಾರ್‌, ಬವೇರಿಯಾ ಗ್ಯಾಂಗ್‌ನ ರಾಮ್‌ಸಿಂಗ್‌, ಸಿರಪುರ್‌ ಶ್ರೀನಿವಾಸ್‌ ಸೇರಿ 20ಕ್ಕೂ ಹೆಚ್ಚು ರೌಡಿಗಳು ಗುಂಡೇಟು ತಿಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next