Advertisement

ಅಲ್ಲಲ್ಲಿ ಇದ್ದ “ಥಿಯೇಟರ್‌’ಗಳು ಈಗ ಅಲ್ಲೊಂದು-ಇಲ್ಲೊಂದು!

12:54 AM Jun 02, 2024 | Team Udayavani |

ಮಂಗಳೂರು: “ಚಿತ್ರಮಂದಿರ ತುಂಬಿದೆ’ ಎನ್ನುವ ಫ‌ಲಕದೊಂದಿಗೆ ಭರ್ಜರಿ ಸಿನೆಮಾ ಪ್ರದರ್ಶನ ಕಾಣುವ ಆ ದಿನಗಳ ನಡುವೆಯೇ “ಚಿತ್ರವೇ ಇಲ್ಲದೆ-ಜನರೂ ಬಾರದೆ’ ಒಂಟಿ ಥಿಯೇಟರ್‌ಗಳೀಗ ಒಂದೊಂದಾಗಿ ಬಾಗಿಲು ಹಾಕುತ್ತಿವೆ !

Advertisement

ಕರಾವಳಿಯಲ್ಲಿ ಸಿನೆಮಾ ನೋಡುವವರ ಸಂಖ್ಯೆ ಸಾಕಷ್ಟಿದೆ. ಇದೇ ಕಾರಣದಿಂದ ಒಂಟಿ ಥಿಯೇಟರ್‌ಗಳು ಕೂಡ 35ಕ್ಕೂ ಅಧಿಕವಿತ್ತು. ಜತೆಗೆ ಮಲ್ಟಿಪ್ಲೆಕ್ಸ್‌ಗಳು ಕೂಡ ಪ್ರವೇಶವಾಯಿತು. ಕಾಲ ಕಳೆದಂತೆ ಥಿಯೇಟರ್‌ಗಳು ಒಂದೊಂದಾಗಿ ಬಾಗಿಲು ಹಾಕುತ್ತ ಬಂದಿದ್ದು, ಈಗ 12ಕ್ಕೆ ಬಂದು ನಿಂತಿದೆ.

ಸದ್ಯ “ಒಳ್ಳೆ ಸಿನೆಮಾ ಬರುತ್ತಿಲ್ಲ-ಜನರು ಒಂಟಿ ಥಿಯೇಟರ್‌ ಕಡೆಗೆ ಬರುತ್ತಿಲ್ಲ’ ಎಂಬ ಕಾರಣ ಒಂದೆಡೆಯಾದರೆ ಒಟಿಟಿ ಸ್ವರೂಪದಲ್ಲಿ ಹೊಸ ಸಿನೆಮಾವನ್ನೂ ಕೆಲವೇ ದಿನದಲ್ಲಿ ಮನೆಯಲ್ಲಿಯೇ ನೋಡಲು ಸಾಧ್ಯ ಇರುವ ಕಾರಣದಿಂದ ಥಿಯೇಟರ್‌ಗಳು ಒಂದೊಂದಾಗಿ ಬಾಗಿಲು ಎಳೆಯುತ್ತಿವೆ.

ಕುಂದಾಪುರದಲ್ಲಿ ವಿನಾಯಕ ಹಾಗೂ ಸುಳ್ಯದಲ್ಲಿ ಸಂತೋಷ್‌ ಥಿಯೇಟರ್‌ ಮೊನ್ನೆ ಮೊನ್ನೆಯಷ್ಟೇ ಬಾಗಿಲು ಹಾಕಿದ್ದರೆ ಇನ್ನೂ ಒಂದೆರಡು ಥಿಯೇಟರ್‌ಗಳು ರಿಪೇರಿಯ ನೆಪದಲ್ಲಿ ಬಾಗಿಲು ಹಾಕುವ ದಾರಿಯಲ್ಲಿವೆ. ಕೆಲವು ವರ್ಷದ ಮೊದಲು ಮಂಗಳೂರಿನ 6-8 ಕಿ.ಮೀ. ವ್ಯಾಪ್ತಿಯಲ್ಲೇ ಸುಮಾರು 10 ಥಿಯೇಟರ್‌ಗಳಿದ್ದವು. ಅದರಲ್ಲಿ ಪಾಂಡೇಶ್ವರದ ಅಮೃತ್‌, ಫಳ್ನೀರ್‌ನ ಪ್ಲಾಟಿನಂ, ಕಾರ್‌ಸ್ಟ್ರೀಟ್‌ನ ನ್ಯೂಚಿತ್ರಾ, ಶ್ರೀನಿವಾಸ್‌, ಸ್ಟೇಟ್‌ಬ್ಯಾಂಕ್‌ನ ಸೆಂಟ್ರಲ್‌ ಹಾಗೂ ಅಂಬೇಡ್ಕರ್‌ ಸರ್ಕಲ್‌ನ ಜ್ಯೋತಿ ಟಾಕೀಸ್‌ ಒಂದೊಂದೇ ನೆಪದಿಂದ ಬಂದ್‌ ಆಗಿದೆ.

3 ತಾಲೂಕಲ್ಲಿ ಥಿಯೇಟರ್‌ ಇಲ್ಲ!
ಒಂದೊಂದೇ ಥಿಯೇಟರ್‌ಗಳು ಬಾಗಿಲು ಹಾಕಿದ ಪರಿಣಾಮ ಈಗ ಸುಳ್ಯ, ಬಂಟ್ವಾಳ ಹಾಗೂ ಪುತ್ತೂರಿನಲ್ಲಿ ಒಂದೇ ಒಂದು ಒಂಟಿ ಥಿಯೇಟರ್‌ ಉಳಿದಿಲ್ಲ. ಬೆಳ್ತಂಗಡಿಯಲ್ಲಿ ಭಾರತ್‌ ಮಾತ್ರ ಈಗ ಇದೆ. ಮೂಡುಬಿದಿರೆಯಲ್ಲಿ ಅಮರಶ್ರೀ ರಿಪೇರಿಯಲ್ಲಿದೆ!

Advertisement

ಸದ್ಯ ಮಂಗಳೂರಿನಲ್ಲಿ ಸುಚಿತ್ರಾ, ಪ್ರಭಾತ್‌, ರಾಮಕಾಂತಿ, ರೂಪವಾಣಿ, ಉಡುಪಿಯಲ್ಲಿ ಕಲ್ಪನಾ, ಅಲಂಕಾರ್‌, ಡಯಾನ, ಕಾರ್ಕಳದ ರಾಧಿಕ, ಪ್ಲಾನೆಟ್‌, ಬೈಂದೂರು ಶಂಕರ್‌, ಸುರತ್ಕಲ್‌ನ ನಟರಾಜ್‌, ಕಾಸರಗೋಡಿನಲ್ಲಿ ಕೃಷ್ಣ ಇದೆಯಾದರೂ, ಹೊಸ ಸಿನೆಮಾ ಇಲ್ಲದ ಕಾರಣದಿಂದ ಅವುಗಳೂ ಕಷ್ಟದಲ್ಲಿವೆ.

ಕೋಸ್ಟಲ್‌ವುಡ್‌ನ‌ಲ್ಲೂ
ಸಿನೆಮಾ ಇಲ್ಲ!
ಒಂದೊಮ್ಮೆ ಕರಾವಳಿಯಲ್ಲಿ ವರ್ಷಕ್ಕೆ 12ರಷ್ಟು ತುಳು ಸಿನೆಮಾ ಬಿಡುಗಡೆ ಆಗುತ್ತಿತ್ತು. ಈಗ ಇದೂ ಬದಲಾಗಿದೆ. ಜನವರಿಯಿಂದ ಇಲ್ಲಿಯವರೆಗಿನ 5 ತಿಂಗಳವರೆಗೆ ಮಿ.ಮದಿಮಯೆ, ಗಬ್ಬರ್‌ ಸಿಂಗ್‌, ಬಲಿಪೆ ಸಿನೆಮಾ ಮಾತ್ರ ಬಿಡುಗಡೆ ಆಗಿದೆ. ಇದೆಲ್ಲದರ ಮಧ್ಯೆ, ಸದ್ದು ಮಾಡಬೇಕಿದ್ದ ತುಳು ಸಿನೆಮಾ ಕೂಡ ಇತ್ತೀಚೆಗೆ “ಹಿಟ್‌’ ನೀಡುವಲ್ಲಿ ಎಡವುತ್ತಿದ್ದು ಥಿಯೇಟರ್‌ಗಳಿಗೆ ಸಿನೆಮಾ ಇಲ್ಲ ಎಂಬಂತಾಗಿದೆ!

ಬಾಗಿಲು ಹಾಕಿದ ಥಿಯೇಟರ್‌ಗಳೇ ಅಧಿಕ!
ಕಡಬದಲ್ಲಿ ಜಾನ್ಸನ್‌, ಉಪ್ಪಿನಂಗಡಿಯಲ್ಲಿ ಪ್ರೀತಂ, ಪುತ್ತೂರಿನಲ್ಲಿ ಸಂಗೀತಾ, ನವರಂಗ್‌, ಮಯೂರ, ಅರುಣ, ಬೆಳ್ಳಾರೆಯ ಜುಪಿಟರ್‌, ಸುಳ್ಯದಲ್ಲಿ ಪ್ರಕಾಶ್‌, ವಿಟ್ಲದಲ್ಲಿ ಕವಿತಾ, ರಾಜಹಂಸ, ಉಜಿರೆಯಲ್ಲಿ ಸಂಧ್ಯಾ, ಬಂಟ್ವಾಳದಲ್ಲಿ ವಿನಾಯಕ, ವಿಜಯಲಕ್ಷ್ಮೀ, ಕಲ್ಲಡ್ಕದಲ್ಲಿ ಮಾರುತಿ, ಪಾಣೆಮಂಗಳೂರು ಟಾಕೀಸ್‌, ಬಿ.ಸಿ.ರೋಡ್‌ನ‌ ನಕ್ಷತ್ರ, ನೆಲ್ಯಾಡಿ, ಮೂಡುಬಿದಿರೆಯಲ್ಲಿ ವಿಜಯ ಟಾಕೀಸ್‌, ಕೈಕಂಬದಲ್ಲಿ ಮಂಜುನಾಥ ಟಾಕೀಸ್‌, ಕಾರ್ಕಳದಲ್ಲಿ ಸನ್ಮಾನ, ಜೈಹಿಂದ್‌ ಟಾಕೀಸ್‌, ಕಿನ್ನಿಗೋಳಿಯಲ್ಲಿ ಅಶೋಕ ಟಾಕೀಸ್‌, ಮೂಲ್ಕಿಯಲ್ಲಿ ಭವಾನಿ ಶಂಕರ್‌, ಸುರತ್ಕಲ್‌ನಲ್ಲಿ ನವರಂಗ್‌, ಪಡುಬಿದ್ರಿಯಲ್ಲಿ ಗುರುದೇವ, ಕಾಪುವಿನಲ್ಲಿ ವೆಂಕಟೇಶ್‌ ಟಾಕೀಸ್‌, ಬ್ರಹ್ಮಾವರದಲ್ಲಿ ಜಯಭಾರತ್‌ ಟಾಕೀಸ್‌, ಸಾಸ್ತಾನದಲ್ಲಿ ನಂದಾ ಟಾಕೀಸ್‌, ಸಿದ್ಧಾಪುರ, ಬಸೂÅರು, ಹೆಬ್ರಿ, ಕೋಟೇಶ್ವರದಲ್ಲಿ ಟೂರಿಂಗ್‌ ಟಾಕೀಸ್‌, ಗಂಗೊಳ್ಳಿ, ಉಪ್ಪುಂದ, ತೊಕ್ಕೊಟ್ಟು ಶ್ರೀಕೃಷ್ಣಾ, ಉಳ್ಳಾಲ ಶಾಂತಿ ಥಿಯೇಟರ್‌, ಕುಂದಾಪುರ ಹಾಗೂ ಉಡುಪಿಯಲ್ಲಿದ್ದ ಗೀತಾಂಜಲಿ, ಕುಂದಾಪುರದಲ್ಲಿ ಪೂರ್ಣಿಮಾ, ಮಂಜೇಶ್ವರದಲ್ಲಿ ಹಿಲ್‌ಸೈಡ್‌, ಉಪ್ಪಳದಲ್ಲಿ ರಂಜಿತ್‌, ಕುಂಬ್ಳೆಯಲ್ಲಿ ಗೋಪಾಲಕೃಷ್ಣ, ಕಾಸರಗೋಡಿನಲ್ಲಿ ಗೀತಾ, ರೂಪೇಶ್‌ ಸಹಿತ ಹಲವು ಒಂಟಿ ಥಿಯೇಟರ್‌ಗಳು ಈ ಹಿಂದೆಯೇ ಬಾಗಿಲು ಹಾಕಿವೆ.

1,400 ಇದ್ದದ್ದು
ಈಗ 200ಕ್ಕೆ ಇಳಿಕೆ!
ಕರ್ನಾಟಕದಲ್ಲಿ 1,400ಕ್ಕೂ ಅಧಿಕ ಒಂಟಿ ಥಿಯೇಟರ್‌ಗಳು ಇತ್ತು. ಅದರಲ್ಲಿ 450 ಥಿಯೇಟರ್‌ ಉಳಿದುಕೊಂಡಿತ್ತು. ಇದರಲ್ಲಿ ಸುಮಾರು 250 ಥಿಯೇಟರ್‌ಗಳು ನಾನಾ ಕಾರಣದಿಂದ ಇತ್ತೀಚಿನ ಕೆಲ ವರ್ಷದಲ್ಲಿ ಬಾಗಿಲು ಹಾಕಿವೆ. ಸದ್ಯ ಸುಮಾರು 200 ಥಿಯೇಟರ್‌ಗಳು ಮಾತ್ರ ಇವೆ.

ಸಿನೆಮಾ ಇಲ್ಲದೆ ಥಿಯೇಟರ್‌ ಬಂದ್‌
ಹಿಂದೆ ಮನೆಯಲ್ಲಿ ಟಿವಿ, ಮೊಬೈಲ್‌ ಇರಲಿಲ್ಲ. ಆಗ ಮನೆ ಮಂದಿ ಸಿನೆಮಾ ನೋಡಲು ಥಿಯೇಟರ್‌ಗೆ ಬರುತ್ತಿದ್ದರು. ಆದರೆ ಈಗ ಮೊಬೈಲ್‌ ಮೂಲಕ ಒಟಿಟಿಯಲ್ಲಿ ಮನೆಯಲ್ಲಿಯೇ ಟಿವಿಗೆ ಕನೆಕ್ಟ್ ಮಾಡಿ ಸಿನೆಮಾ ನೋಡುವ ಕಾಲ ಬಂದಿದೆ. ಜತೆಗೆ ಸ್ಟಾರ್‌ ನಟರ ಸಿನೆಮಾ 3-4 ವರ್ಷಕ್ಕೆ ಒಂದು ಮಾತ್ರ ಬರುತ್ತಿದೆ. ಹೊಸ ನಟರ ಸಿನೆಮಾ ಜಾಸ್ತಿ ದಿನ ನಿಲ್ಲುವುದಿಲ್ಲ. ಹೀಗಿರುವಾಗ ಒಂಟಿ ಥಿಯೇಟರ್‌ಗೆ ಬಂದು ಸಿನೆಮಾ ನೋಡುವ ಕಾಲ ಈಗ ಇಲ್ಲ. ಸಿನೆಮಾ ಇಲ್ಲದ ಕಾರಣದಿಂದ 46 ವರ್ಷದ ಹಳೆಯ ಸುಳ್ಯದ ಸಂತೋಷ್‌ ಅನ್ನು ಬಂದ್‌ ಮಾಡುವ ಪರಿಸ್ಥಿತಿಗೆ ಬಂದಿದ್ದೇವೆ
-ಸಂತೋಷ್‌, ಪ್ರಮುಖರು, ಸಂತೋಷ್‌ ಸಿನೆಮಾ ಥಿಯೇಟರ್‌, ಸುಳ್ಯ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next