ಪ್ರೊ.ಸಿ.ವಿ. ರಾಮನ್ ಅವರು, ನಿವೃತ್ತಿಯ ನಂತರ ಬೆಂಗಳೂರಲ್ಲಿ ಒಂದು ಸಂಶೋಧನಾ ಕೇಂದ್ರ ತೆರೆದರು. ಅದಕ್ಕೆ ಮೂವರು ವಿಜ್ಞಾನಿಗಳ ಅಗತ್ಯವಿತ್ತು. ಹಾಗಾಗಿ, ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟರು. ಸುಮಾರು ಜನ ಅರ್ಜಿ ಹಾಕಿದರು. ಅದರಲ್ಲಿ ಒಬ್ಬ ವ್ಯಕ್ತಿ, ನನಗೆ ಇಂಥ ಕೆಲಸ ಸಿಗೋಲ್ಲ. ಆದರೆ, ಸಂದರ್ಶನದ ನೆಪದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರನ್ನು ಭೇಟಿ ಮಾಡಬಹುದಲ್ಲ? ಅನ್ನೋ ಆಸೆಯಲ್ಲಿ ಅರ್ಜಿ ಹಾಕಿದ್ದರು. ಸಂದರ್ಶನಕ್ಕೆ ಕರೆ ಬಂತು.
ಆದರೆ, ಇವರು ಆಯ್ಕೆ ಆಗಲಿಲ್ಲ. ಸಂದರ್ಶನ ಮುಗಿಸಿ ರಾಮನ್ ನಡೆದು ಹೋಗುತ್ತಿದ್ದರು. ದೂರದಲ್ಲಿ ಈ ವ್ಯಕ್ತಿ ಅವರಿಗಾಗಿ ಕಾಯುತ್ತಿದ್ದರು. ಇದನ್ನು ಗಮನಿಸಿದ ರಾಮನ್- “ನೀವು ಸಂದರ್ಶನದಲ್ಲಿ ಉತ್ತೀರ್ಣರಾಗಿಲ್ವಲ್ಲ?’ ಅಂದರು. “ಹೌದು ಸರ್. ಆದರೆ, ನನಗೆ 7 ರೂ.ಗಳನ್ನು ಹೆಚ್ಚುವರಿಯಾಗಿ ಅಲೋಯನ್ಸ್ ಕೊಟ್ಟಿದ್ದೀರಿ. ಆ ಹಣವನ್ನು ಹಿಂದಿರುಗಿಸೋಣ ಅಂತ ನೋಡಿದೆ. ಆದರೆ ಲೆಕ್ಕಪತ್ರ ವಿಭಾಗದವರು ಯಾರೂ ಇಲ್ಲ’ ಅಂದರು.
“ಹೌದಾ… ಅದು ನಿಮಗೆ, ಖರ್ಚು ಮಾಡಿಕೊಳ್ಳಿ ಪರವಾಗಿಲ್ಲ’ ಅಂದರು ರಾಮನ್. “ಇಲ್ಲ, ಇಲ್ಲ. ನನ್ನದಲ್ಲದ ಹಣವನ್ನು ನಾನು ಬಳಕೆ ಮಾಡೋಲ್ಲ’ ಅಂದುಬಿಟ್ಟರು ಈ ವ್ಯಕ್ತಿ. ಕೊನೆಗೆ, ರಾಮನ್- “ಒಂದು ಕೆಲಸ ಮಾಡಿ, ನಾಳೆ ಬೆಳಗ್ಗೆ 10.30ಕ್ಕೆ ಬನ್ನಿ’ ಅಂತ ಹೇಳಿದರು. ಆ ವ್ಯಕ್ತಿಗೆ ಮತ್ತೆ ರಾಮನ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತಲ್ಲ ಅನ್ನೋ ಖುಷಿ. ಮಾರನೇ ದಿನ ಆ ವ್ಯಕ್ತಿ ಬಂದು ರಾಮನ್ ಅವರ ಮುಂದೆ ನಿಂತರು. ರಾಮನ್ ಒಂದು ಪತ್ರ ಕೊಟ್ಟರು. ತೆರೆದು ನೋಡಿದರೆ ಅಪಾಯಿಂಟ್‌ಮೆಂಟ್ ಆರ್ಡರ್! “ಸಾರ್, ಇದೇನು? ನಾನು ನಿಮ್ಮ ಸಂದರ್ಶನದಲ್ಲಿ ಉತ್ತೀರ್ಣನಾಗಿಲ್ಲ’- ಅಂದರು ಈ ವ್ಯಕ್ತಿ.
“ಹೌದು, ನೀವು ಆ ಸಂದರ್ಶನದಲ್ಲಿ ಫೇಲಾಗಿದ್ದೀರಿ, ಆದರೆ, ಈ ನಿಯತ್ತಿನ ಸಂದರ್ಶನದಲ್ಲಿ ರ್‍ಯಾಂಕ್ ಬಂದಿದ್ದೀರಿ. ಹೀಗಾಗಿ, ನಿಮಗಾಗಿಯೇ ಒಂದು ಹುದ್ದೆ ಸೃಷ್ಟಿ ಮಾಡುತ್ತಿದ್ದೇನೆ’ ಅಂದರು ರಾಮನ್. ಆ ವ್ಯಕ್ತಿಗೆ ತಡೆಯಲಾರದ ಖುಷಿಯಾಯಿತು. ಆ 7 ರೂ. ಅವರ ಬದುಕನ್ನೇ ಬದಲಿಸಿತು. ಆ ವ್ಯಕ್ತಿ ಯಾರು ಗೊತ್ತಾ? ಪ್ರೊ. ಸುಬ್ರಮಣ್ಯನ್ ಚಂದ್ರಶೇಖರ. ಮುಂದೆ ಇವರಿಗೂ ನೊಬೆಲ್ ಪ್ರಶಸ್ತಿ ಬಂತು.