Advertisement

ಪದಯುಗ

08:15 AM Feb 18, 2018 | |

ಅಮ್ಮ ಮತ್ತು ಪುಟ್ಟ ಮಗ ಬಾಹುಬಲಿಯ ಮೂರ್ತಿ ನೋಡಲೆಂದು ಹೋಗಿದ್ದರು. ದೂರದಿಂದ ಬಾಹುಬಲಿಯ ಭವ್ಯಾಕಾರವನ್ನು ನೋಡಿದ ಮಗ ಹೇಳಿದ, “”ಭಯವಾಗುತ್ತಮ್ಮ, ನಾನು ಬರೋಲ್ಲ ” ಅಮ್ಮ “ಬಾರೋ’ ಮಗನನ್ನು ಗದರಿಸಿದಳು. ಕರಿಕಲ್ಲಲ್ಲಿ ಕಡೆದ ಎತ್ತರ ವಿಗ್ರಹವನ್ನು ನೋಡಿ ಮಗ ಬಿಲ್‌ಕುಲ್‌ ಮೇಲೆ ಬರಲು ಕೇಳಲಿಲ್ಲ. ಅಮ್ಮನಿಗೆ ಮಗನ ಸ್ಥಿತಿಯನ್ನು ನೋಡಿ ನಗುವೇ ಬಂತು. ದೇವರಲ್ಲಿಗೆ ಹೋಗುವಾಗ ಭಯಪಡುವುದುಂಟೆ? ಹಾಗೆಂದು, ದೇವರೆಂದರೆ ಯಾರು? ಎಂದು ಬಾಲಕನಿಗೆ ಹೇಗೆ ಗೊತ್ತಾಗಬಹುದು ! 

Advertisement

ಅಮ್ಮ ಹೇಳಿದಳು, “”ಭಯವೆ ಮಗಾ? ಏತಕ್ಕೆ ಭಯ? ನಿನಗೊಂದು ಕತೆ ಹೇಳುತ್ತೇನೆ” ಎನ್ನುತ್ತ ಒಂದು ಕತೆ ಹೇಳಲಾರಂಭಿಸಿ ಮೆಲ್ಲನೆ ಗೊಮ್ಮಟಬೆಟ್ಟವನ್ನು ಏರತೊಡಗಿದಳು. ವಿಷ್ಣು ದೇವರು ಪ್ರಹ್ಲಾದನ ಭಕ್ತಿಗೆ ಒಲಿದು ನರಸಿಂಹಾವತಾರ ತಾಳಿ ಕಂಬವನ್ನೊಡೆದು ಬಂದರು. ಹಿರಣ್ಯಕಶ್ಯಪುವಿನ ಹೊಟ್ಟೆಯನ್ನು ಬಗೆದರು. ಭೀಕರಾಕೃತಿಯಲ್ಲಿ ನಿಂತಿದ್ದ ನರಸಿಂಹ ದೇವರನ್ನು ನೋಡಿ ಇಡೀ ಲೋಕವೇ ಭಯಗೊಂಡಿತು. ದೇವತೆಗಳೂ ಭೀತಿಯಿಂದ ತತ್ತರಿಸಿದರು. “”ಮಹಾವಿಷ್ಣುವೇನೋ ಹೌದು, ಆದರೆ, ಇವನನ್ನು ದಿಟ್ಟಿಸುವ ಬಗೆಯೆಂತು?” ಎಂದು ಎಲ್ಲರೂ ಒಬ್ಬರನೊಬ್ಬರು ಪ್ರಶ್ನಿಸತೊಡಗಿದರು. 

ಆಗ ಬಾಲಕ ಪ್ರಹ್ಲಾದ ನಗುತ್ತ ಹೇಳಿದ, “”ಹೆದರಿಕೆಯೆ ನಿಮಗೆ? ಭೀಕರವಾದ ಮುಖ ನೋಡಿದರೆ ಭಯವಾಗುತ್ತದಲ್ಲವೆ? ಮುಖವನ್ನು ಯಾಕೆ ನೋಡುತ್ತೀರಿ. ದೇವರ ಪಾದಗಳನ್ನೇ ನೋಡಿ. ಪಾದಗಳನ್ನು ನೋಡುತ್ತ ಸ್ತುತಿ ಮಾಡಿ”. ದೇವತೆಗಳು ಹಾಗೆಯೇ ಮಾಡಿದರು. ನರಸಿಂಹದೇವರು ಪ್ರಸನ್ನವದನರಾದರು. ಕತೆ ಮುಗಿಯುವಾಗ ಇಬ್ಬರೂ ಬೆಟ್ಟವೇರಿದ್ದರು. ಅಮ್ಮನೂ ಮಗನೂ ಬಾಹುಬಲಿಯ ಪಾದಗಳನ್ನೇ ದಿಟ್ಟಿಸತೊಡಗಿದರು.

ವಿಶ್ವ

Advertisement

Udayavani is now on Telegram. Click here to join our channel and stay updated with the latest news.

Next