ಬೆಂಗಳೂರು: “ಇತ್ತೀಚಿನ ದಿನಗಳಲ್ಲಿ ಬೇರೆ-ಬೇರೆ ಕಾರಣಗಳಿಂದ ದೇಶವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಆ ಪ್ರವೃತ್ತಿ ಮೊದಲು ನಿಲ್ಲಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಡಾ.ಎನ್.ಸಂತೋಷ ಹೆಗ್ಡೆ ಹೇಳಿದ್ದಾರೆ.
ಭಾರತ ವಿಕಾಸ ಪರಿಷದ್ ಭಾನುವಾರ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ “ರಕ್ಷಾ ಬಂಧನ ಉತ್ಸವ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮದು ಜಾತ್ಯತೀತ ರಾಷ್ಟ್ರ. ಹಲವು ಧರ್ಮ, ಸಂಸ್ಕೃತಿಗಳು ಇಲ್ಲಿ ಮೇಳೈಸಿವೆ. ಬೇರೆ, ಬೇರೆ ಧರ್ಮಗಳಲ್ಲಿ ಹುಟ್ಟಿದರೂ ನಾವೆಲ್ಲ ಒಂದೇ ಎಂಬ ಪರಿಕಲ್ಪನೆ ಇಲ್ಲಿದೆ. ಈ ನಿಟ್ಟಿನಲ್ಲಿ ಭಾತೃತ್ವದ ಸಂದೇಶ ಸಾರುವ ರಕ್ಷಾ ಬಂಧನ ಹಬ್ಬ ಅರ್ಥಪೂರ್ಣವಾಗಿ ನಡೆಯಬೇಕು. ಹೀಗೆ ನಡೆದಾಗ ಮಾತ್ರ, ಸಹಬಾಳ್ವೆ ವಾತಾವರಣ ಮತ್ತಷ್ಟು ಗಟ್ಟಿಗೊಳ್ಳಲು ಸಾಧ್ಯ ಎಂದು ತಿಳಿಸಿದರು.
ನಾವು ಕೇವಲ ಪ್ರಾಮಾಣಿಕ, ನಿಷ್ಠಾವಂತರಾಗಿ ಇದ್ದರೆ ಸಾಲದು. ಮನುಷ್ಯತ್ವದ ಗುಣವನ್ನೂ ರೂಢಿಸಿಕೊಳ್ಳಬೇಕು. ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದು,ª ಇದಕ್ಕೆ ಹಿರಿಯರೆ ಕಾರಣರಾಗಿದ್ದಾರೆ. ಜೈಲಿಗೆ ಹೋಗಿ ಬಂದವರಿಗೆ ಹಾರಹಾಕಿ ಸತ್ಕರಿಸುವ ಕೆಟ್ಟ ಪದ್ಧತಿ ಈಗ ಹುಟ್ಟಿಕೊಂಡಿದ್ದು, ಭವಿಷ್ಯತ್ತಿನ ದೃಷ್ಟಿಯಿಂದ ಇಂತಹ ಸಂಸ್ಕೃತಿ ಒಳ್ಳೆಯದಲ್ಲ ಎಂದು ಪ್ರತಿಪಾದಿಸಿದರು.
ಹಿರಿಯ ಪತ್ರಕರ್ತ ಡಾ.ಬಾಬು ಕೃಷ್ಣಮೂರ್ತಿ ಮಾತನಾಡಿ, ಬ್ರಿಟೀಷರು ಬಂಗಾಳವನ್ನು ವಿಭಜ ಮಾಡಲು ಮುಂದಾದ ವೇಳೆ, ಐಕ್ಯತೆ ಸಂದೇಶ ಸಾರಲು ಹುಟ್ಟಿಕೊಂಡದ್ದೇ ರಕ್ಷಾ ಬಂಧನ. ಇದು ದೇಶ ಪ್ರೇಮದ ಜತೆಗೆ, ಸಹಬಾಳ್ವೆ ಬಿತ್ತುವ ಹಬ್ಬವಾಗಿದ್ದು, ಇದರ ಸಂದೇಶ ಪ್ರತಿಯೊಬ್ಬರಿಗೂ ಮುಟ್ಟಬೇಕು ಎಂದರು. ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್, ಭಾರತ ವಿಕಾಸ ಪರಿಷದ್‌ನ ಕರ್ನಾಟ ವಿಭಾಗದ ಅಧ್ಯಕ್ಷ ಬಿ.ಪಿ.ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಅತ್ಯಾಚಾರ ನಾಚಿಕೆಗೇಡಿನ ಸಂಗತಿ: ಭಾರತ ವಿಕಾಸ ಪರಿಷದ್ ಪೋಷಕ ಹಾಗೂ ನಿವೃತ್ತ ನ್ಯಾಯಮೂರ್ತಿ ಡಾ.ಮ.ರಾಮಾ ಜೋಯಿಸ್ ಮಾತನಾಡಿ, ಸ್ತ್ರೀಯರನ್ನು ಪೂಜಿಸುವ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇರುವುದು ನಾಚಿಕೆಗೇಡಿನ ಸಂಗತಿ. ದೇಶದ ಸಾಂಸ್ಕೃತಿಕ ಮೌಲ್ಯಕ್ಕೆ ಧಕ್ಕೆ ತರುವ ಕೆಲಸಗಳು ನಡೆಯುತ್ತಿದು,ª ಭವಿಷ್ಯತ್ತಿನ ಬಗ್ಗೆ ಭಯ ಕಾಡಲಾರಂಭಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.