ಲಕ್ಷ್ಮೇಶ್ವರ: ದೇವಸ್ಥಾನಗಳು ಧರ್ಮ, ನಂಬಿಕೆ, ಭಕ್ತಿ ಮತ್ತು ಸಂಸ್ಕೃತಿಯ ಪ್ರತೀಕವಾಗಿದ್ದು ದೇವಸ್ಥಾನ ನಿರ್ಮಿಸುವ ಜವಾಬ್ದಾರಿ ಜತೆಗೆ ಇಲ್ಲಿ ನಿರಂತರ ಪೂಜೆ, ಪ್ರಾರ್ಥನೆ, ಪಾವಿತ್ರ್ಯತೆ ಕಾಪಾಡುವಂತಾಗಬೇಕು ಎಂದು ಹುಬ್ಬಳ್ಳಿ ಅದ್ವೈತ ವಿದ್ಯಾಶ್ರಮದ ಶ್ರೀ ಪ್ರಣವಾನಂದ ತೀರ್ಥ ಶ್ರೀಗಳು ಹೇಳಿದರು.
ಪಟ್ಟಣದಲ್ಲಿ ನಿರ್ಮಾಣಗೊಂಡ ಶ್ರೀ ಅಂಬಾಭವಾನಿ ನೂತನ ದೇವಸ್ಥಾನ ಲೋಕಾರ್ಪಣೆ ಮತ್ತು ದೇವಿ ಮೂರ್ತಿ ಪುನರ್ ಪ್ರಾಣ ಪ್ರತಿಷ್ಠಾಪನೆ ಮತ್ತು ಧರ್ಮಸಭೆ ಸಮಾರಂಭದಲ್ಲಿ ಸೋಮವಾರ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇವಸ್ಥಾನಗಳು ಶ್ರದ್ಧೆ, ಭಕ್ತಿ, ಧರ್ಮ ಮಾರ್ಗ ತೋರುವ ದೀವಿಗೆ ಮತ್ತು ಶಕ್ತಿ ಕೇಂದ್ರಗಳಾಗಿವೆ. ನ್ಯಾಯ, ನೀತಿ, ಧರ್ಮ, ಕಾಯಕದಿಂದ ಕೂಡಿದ ಎಸ್‌ಎಸ್‌ಕೆ ಸಮಾಜ ಎಲ್ಲ ಸಮಾಜದವರೊಂದಿಗೆ ಅನ್ಯೋನ್ಯ ಬಾಂಧವ್ಯ ಹೊಂದಿ ಸುಂದರ ದೇವಸ್ಥಾನ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಸಮಾಜ ಬಾಂಧವರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕಲ್ಪಿಸಬೇಕು ಎಂದರು.
ರಾಮಚಂದ್ರಸಾ ಕಬಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಭಿವೃದ್ಧಿ ಮತ್ತು ಚಿಂತನಶೀಲ ಸಮಾಜ ಮುಖ್ಯ ಧ್ಯೇಯೋದ್ದೇಶ ಶಿಕ್ಷಣ ಕಲ್ಪಿಸುವುದಾಗಿದೆ. ಸಮಾಜ ಬಾಂಧವರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು. ಸಮಾಜಮುಖೀಯಾಗಿ ಬದುಕಿದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ. ಸಮಾಜ ಚಿಕ್ಕದೆಂಬ ಭಾವನೆ ಬೇಡ, ಇತರೆಲ್ಲ ಸಮಾಜದೊಂದಿಗೆ ಒಂದಾಗಿ ಒಗ್ಗಟ್ಟಿನಿಂದ ಬಾಳಬೇಕು ಎಂದರು.
ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ವಿಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಹು-ಧಾ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಅಶ್ವಿನಿ ಅಂಕಲಕೋಟಿ, ಟಿ.ಎಂ. ಮೆಹರವಾಡೆ, ಡಾ| ಶಶಿಕುಮಾರ ಮೆಹರವಾಡೆ, ಶ್ರೀಕಾಂತಸಾ ಖಟವಟೆ, ಹನುಮಂತಸಾ ಕಾಟವಾ, ಪ್ರಕಾಶ ಬಾಕಳೆ ಮಾತನಾಡಿದರು.
ಟಿ.ಎಂ. ಮೆಹರವಾಡೆ, ಸರಳಾ ಭಾಂಡಗೆ, ಎಸ್‌ಎಸ್ ಕೆ ಸಮಾಜದ ಹಿರಿಯರು, ಪಂಚ ಟ್ರಸ್ಟ್ ಕಮಿಟಿ, ಎಸ್‌ಎಸ್ ಕೆ ಮಹಿಳಾ ಮಂಡಳ, ಸೋಮೇಶ್ವರ ದೇವಸ್ಥಾನ ಕಮಿಟಿ, ಭಾವಸಾರ ಮತ್ತು ಗೋಂದಳಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಪರಶುರಾಮಸಾ ಬದಿ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ನಾರಾಯಣಸಾ ಪವಾರ ಪ್ರಾಸ್ತಾವಿಕ ಮಾತನಾಡಿದರು. ಈಶ್ವರ ಮೆಡ್ಲೇರಿ, ಸಂಕೇತಾ ಶಿಗ್ಲಿಂಗ ನಿರೂಪಿಸಿದರು. ಜೂ.17, 18, 19ರಂದು ದೇವಸ್ಥಾನದಲ್ಲಿ ನಿತ್ಯ ಪೂಜೆ, ಹೋಮ-ಹವನ, ಪಾರಾಯಣ, ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
ಜೂ.20ರಂದು ಬ್ರಾಹ್ಮೀ ಶ್ರೀ ದೇವಿಯ ಮೂರ್ತಿ ಉತ್ಥಾಪನ, ಪ್ರಾಣ ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮ ನಂತರ ಬೆಳಗ್ಗೆ 10 ಗಂಟೆಗೆ ಧರ್ಮಸಭೆ ನಡೆಯಿತು.
ಸಮಾಜ ಬಾಂಧವರು ಒಗ್ಗಟ್ಟಿನಿಂದ ಸುಂದರ ದೇವಸ್ಥಾನ, ಸಮುದಾಯ ಭವನ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಜೂ.25ರಂದು ಹುಬ್ಬಳ್ಳಿಯಲ್ಲಿ ಕ್ಷತ್ರೀಯ ಸಮಾಜದ ಯುವ ಸಮಾವೇಶ ಜರುಗಲಿದ್ದು, ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಬೇಕು. –
ಅಶೋಕ ಕಾಟವೆ, ಮಾಜಿ ಶಾಸಕ