Advertisement

ನನ್ನೂರಿನ ದೇಗುಲವೂ ಗಂಗಾ ತೀರವೂ

09:26 PM Mar 15, 2020 | Sriram |

ನನಗೆ ಮನಸ್ಸಿಗೆ ಬೇಸರವಾದಾಗಲೆಲ್ಲಾ ದೇಗುಲಕ್ಕೆ ಹೋಗುವ ಅಭ್ಯಾಸವಿದೆ. ನಮ್ಮ ಮನೆಯವರಲ್ಲದೇ, ಸುತ್ತಲಿನವರೂ ಸಹ ನನ್ನನ್ನು ಕಂಡು, ಯಾವಾಗಲೂ ದೇವಸ್ಥಾನದಲ್ಲೇ ಇರುತ್ತೀಯಲ್ಲಾ, ಸ್ವಾಮಿ ಆಗಿಬಿಡು ಎಂದು ಛೇಡಿಸಿದ್ದೂ ಇದೆ. ಅಂಥ ಹೊತ್ತಿನಲ್ಲಿ ಎಷ್ಟೊ ಬಾರಿ ಅದೇ ಸರಿ ಎನ್ನಿಸುವುದಿದೆ. ಆದರೂ ಯಾರ ಮಾತಿಗೂ ನನಗೆ ಉತ್ತರ ಕೊಟ್ಟು ಅಭ್ಯಾಸವಿಲ್ಲ.

Advertisement

ನನ್ನ ಮನೆ ಬಳಿಯೇ ಇರುವ ದೇವಸ್ಥಾನವದು. ಅದರಲ್ಲೂ ಸಂಜೆಯ ಹೊತ್ತಿಗೆ ಹೋಗಿ ಒಂದಿಷ್ಟು ಹೊತ್ತು ಕಳೆಯುತ್ತೇನೆ. ಆ ಹೊತ್ತಿನಲ್ಲಿ ಪೂಜೆಗೆ ಇನ್ನೂ ಸಿದ್ಧವಾಗಿರುವುದಿಲ್ಲ ; ಜನರಾರೂ ಬಂದಿರುವುದಿಲ್ಲ. ಅದು ಹಳೆಯ ದೇವಸ್ಥಾನ.

ಸಂಜೆಯ ಹೊತ್ತಿಗೆ ಹೋಗಿ ಕುಳಿತಾಗ ಆ ದಿವ್ಯ ಮೌನ ಪಾಸಿಟಿವ್‌ ಎನಿಸುವುದುಂಟು. ಅದಕ್ಕೇ ಅದು ಖುಷಿ. ಸಂಪೂರ್ಣ ದಿವ್ಯ ಮೌನದಲ್ಲಿ ಬೀಸಿ ಬರುವ ಗಾಳಿಯ ಶಬ್ದವೂ ಕೇಳಲಾಗುತ್ತದೆ. ಹಲವು ಬಾರಿ, ಹಾಗೆಯೇ ಗೋಡೆಗೆ ಒರಗಿದ್ದುಂಟು. ಎಂಥದ್ದೇ ಮನೆಯಲ್ಲಿ ಗಲಾಟೆ ಇದ್ದರೂ, ಕೆಲಸದ ಒತ್ತಡವಿದ್ದರೂ ಆ ಮೌನದಲ್ಲಿ ಖುಷಿ ಸಿಗುತ್ತದೆ.
ಇದೇ ಖುಷಿ ನನಗೆ ಸಿಕ್ಕಿದ್ದು ಕಾಶಿಯಲ್ಲಿ. ಅಂದು ಬೆಳಗ್ಗೆ. ಗಂಗಾ ನದಿಯ ವಿಹಾರಕ್ಕೆಂದು ಹೊರಟಿದ್ದೆ. ಬೆಳಗ್ಗೆ 5.30 ಸಮಯ. ಒಂದು ಘಾಟ್‌ ಬಳಿ ನಡೆದು ಹೋಗುತ್ತಿದ್ದೆ ; ಕುಳಿತುಕೊಳ್ಳಬೇಕೆನಿಸಿತು. ಕುಳಿತುಕೊಂಡೆ. ಸುತ್ತಲೂ ಕತ್ತಲು, ಸಣ್ಣಗಿರುವ ದಾರಿದೀಪದ ಬೆಳಕಷ್ಟೇ. ಗಾಳಿಯೂ ಚೆನ್ನಾಗಿ ಬೀಸುತ್ತಿತ್ತು. ಒಮ್ಮೆ ಕುಳಿತವನಿಗೆ ಮತ್ತೆಲ್ಲೂ ಹೋಗಬೇಕೆನಿಸಲೇ ಇಲ್ಲ. ಥೇಟ್‌ ನನ್ನ ಊರಿನ ದೇವಸ್ಥಾನದ ಸುಖವೇ ಅಲ್ಲೂ ಸಿಕ್ಕಿತು. ಆ ದಿವ್ಯ ಮೌನ, ಆ ಪಾಸಿಟಿವ್‌ನೆಸ್‌.

ಇದು ಐದು ವರ್ಷದ ಹಿಂದಿನ ಕಥೆ. ಈಗ ಕಷ್ಟಪಟ್ಟಾದರೂ ವರ್ಷಕ್ಕೊಮ್ಮೆ ಕಾಶಿಗೆ ಭೇಟಿ ಮಾಡುತ್ತೇನೆ, ಗಂಗಾ ತೀರದಲ್ಲಿ ಕುಳಿತುಕೊಳ್ಳಲಿಕ್ಕೆ. ಒಮ್ಮೆ ಮಾತ್ರ ಕೆಲಸದ ಒತ್ತಡದಿಂದ ತಪ್ಪಿ ಹೋಯಿತು. ಅದಕ್ಕೆ ವರ್ಷವಿಡೀ ಪರಿತಪಿಸಿದ್ದಿದೆ. ತೀರ್ಥಕ್ಷೇತ್ರ ಸುಮ್ಮನಲ್ಲ ಎಂದೆನಿಸಿದ್ದು ಆಗಲೇ.

- ಪರಶುರಾಮ್‌, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next