Advertisement

ವರವಿನ ಮಲ್ಲೇಶರ ದೇವಾಲಯ ಬಿರುಕು

02:22 PM Jul 06, 2017 | |

ಸಿರುಗುಪ್ಪ: ಕಲ್ಲು ಗಣಿಗಾರಿಕೆಯಿಂದ ತಾಲೂಕಿನ ತೆಕ್ಕಲಕೋಟೆಯ ಕಲ್ಲು ಬೆಟ್ಟದ ಸಾಲುಗಳಲ್ಲಿರುವ ಐತಿಹಾಸಿಕ ವರವಿನ ಮಲ್ಲೇಶ್ವರ ದೇವಸ್ಥಾನ ಬಿರುಕು ಬಿಟ್ಟಿದೆ. ಇದರಿಂದ ಭಕ್ತರಲ್ಲಿ ಆತಂಕ ಮೂಡಿಸಿದೆ.

Advertisement

ತಾಲೂಕಿನ ಪ್ರಮುಖ ದೇವಸ್ಥಾನವಾಗಿರುವ ವರವಿನ ಮಲ್ಲೇಶ್ವರ ದೇವಾಲಯ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ. ಕಲಾ ಶೈಲಿ ಹೊಂದಿರುವ ಶೈವ ದೇವಾಲಯವಾಗಿದ್ದು, ಕಲ್ಯಾಣಿ ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯ ವಿಶಾಲವಾದ ಪ್ರಾಂಗಣ ಹೊಂದಿದೆ. ಐತಿಹಾಸಿಕ ಮಹತ್ವ ಹೊಂದಿರುವ ಈ ದೇವಸ್ಥಾನದ ಗೋಪುರ ಮತ್ತಿತರ ಕಡೆ ಅಕ್ಕಪಕ್ಕದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಬಿರುಕು ಕಾಣಿಸಿಕೊಂಡಿದೆ. ಈ ಗೋಪುರ ನಾಲ್ಕು ಅಂತಸ್ತುಗಳಿದ್ದು, ದೇವಾಲಯ ನಿರ್ಮಿಸಲು ಸುಟ್ಟ ಇಟ್ಟಿಗೆ ಬಳಸಲಾಗಿದೆ. ಈ ಗೋಪುರದ ಮೇಲೆ ಅನೇಕ
ಸುಂದರವಾದ ಸೂಕ್ಷ್ಮ ಶಿಲ್ಪಗಳನ್ನು ರಚಿಸಲಾಗಿದೆ. ದಕ್ಷಿಣ ಭಾಗದಲ್ಲಿ ಅನೇಕ ಮಂಟಪಗಳು, ವೀರಗಲ್ಲುಗಳು, ಶಿವಲಿಂಗಗಳು, ನಂದಿ ಸೇರಿದಂತೆ ಇತರೆ ಶಿಲ್ಪಗಳಿವೆ. ಒಟ್ಟಿನಲ್ಲಿ ಮಲ್ಲೇಶ್ವರನ ದೇವಸ್ಥಾನ ಶಿಲ್ಪಾ ಕಲೆಗಳಿಂದ
ಕಂಗೊಳಿಸುತ್ತಿದ್ದು, ದೇವಸ್ಥಾನದ ಪಕ್ಕದಲ್ಲೇ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ದೇವಸ್ಥಾನಕ್ಕೆ ಹಾನಿ ಉಂಟಾಗುತ್ತಿದೆ. ಈಗಾಗಲೇ ನಿತ್ಯವೂ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಸ್ಫೋಟದಿಂದ ಮುಖ್ಯ ಗೋಪುರದ ಕೆಲವು ಕಡೆ ಬಿರುಕು ಕಾಣಿಸಿಕೊಂಡಿದೆ. ಇನ್ನೂ ಕೆಲವು ಕಡೆ ಶಿಲ್ಪಗಳು ಮುಕ್ಕಾಗಿದೆ. ಕಲ್ಲುಗಣಿಗಾರಿಕೆಯ ಸ್ಫೋಟದ
ಆರ್ಭಟಕ್ಕೆ ದೇವಸ್ಥಾನದ ಪ್ರಾಂಗಣದಲ್ಲಿ ಕೆಲ ಹೊತ್ತು ಕಂಪನ ಕಾಣಿಸಿಕೊಳ್ಳುತ್ತಿದ್ದು, ದೇವಸ್ಥಾನಕ್ಕೆ ಧಕ್ಕೆ ಉಂಟಾಗುತ್ತದೆ ಎನ್ನುವ ಆತಂಕ ಭಕ್ತರಲ್ಲಿದೆ.

ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಹೊಂದಿರುವ ಈ ಕ್ಷೇತ್ರದ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆ
ತಡೆಯದಿದ್ದರೆ ದೇವಸ್ಥಾನ ಹಾಳಾಗಲಿದ್ದು, ಅದನ್ನು ಮತ್ತೆ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಇಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸರ್ಕಾರ ನಿಷೇಧಿಸಬೇಕೆಂದು ಎಂಬುದು ಭಕ್ತರ ಒತ್ತಾಯವಾಗಿದೆ. 

ಐತಿಹಾಸಿಕ ಮಹತ್ವ ಹೊಂದಿರುವ ದೇವಸ್ಥಾನದ ಬಳಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದರಿಂದ ದೇವಸ್ಥಾನಕ್ಕೆ ಅಲ್ಲಲ್ಲಿ ಹಾನಿಯಾಗಿದೆ. ಗಣಿಗಾರಿಕೆ ಹೀಗೆ ಮುಂದುವರಿದರೆ ದೇವಸ್ಥಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಇಲ್ಲಿನ ಕಲ್ಲು ಗಣಿಗಾರಿಕೆ ತಡೆಯಲು ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ರಾಮಕೃಷ್ಣಯ್ಯ, ಇತಿಹಾಸ ಸಂಶೋಧಕ. 

ಐತಿಹಾಸಿಕ ವರವಿನ ಮಲ್ಲೇಶ್ವರ ದೇವಸ್ಥಾನದ ಪಕ್ಕದಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ
ಕೇಳಿ ಬರುತ್ತಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
ಎಂ.ಸುನೀತಾ, ತಹಶೀಲ್ದಾರ್‌. 

Advertisement
Advertisement

Udayavani is now on Telegram. Click here to join our channel and stay updated with the latest news.

Next