Advertisement

ಇಂದಿನಿಂದ ಕಾಂಗ್ರೆಸ್‌ ಪ್ರಚಾರ ಆರಂಭ: ಕುರುಡುಮಲೆ ದೇವಸ್ಥಾನದಲ್ಲಿ “ಪ್ರಜಾಧ್ವನಿ-2′ ಚಾಲನೆ

12:13 AM Apr 06, 2024 | Team Udayavani |

ಬೆಂಗಳೂರು/ಕೋಲಾರ: ಲೋಕಸಭಾ ಚುನಾವಣೆಯ ಮೊದಲನೇ ಹಂತದ ಅಖಾಡ ಬಿಸಿಯೇರಿದ್ದು, ಇಂದಿನಿಂದ(ಎ.6) ಕಾಂಗ್ರೆಸ್‌ ಪಕ್ಷ ತನ್ನ ಪ್ರಚಾರ ಕಾರ್ಯಕ್ಕೆ ವಿಧ್ಯುಕ್ತ ಆರಂಭ ನೀಡುತ್ತಿದೆ. ಕೋಲಾರದ ಮುಳಬಾಗಿಲಿನಲ್ಲಿರುವ ಪುರಾಣ ಪ್ರಸಿದ್ಧ ಕುರುಡುಮಲೆ ವಿನಾಯಕ ದೇಗುಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪೂಜೆ ಸಲ್ಲಿಸುವ ಮೂಲಕ “ಪ್ರಜಾಧ್ವನಿ-2’ಕ್ಕೆ ಚಾಲನೆ ನೀಡಲಿದ್ದಾರೆ.

Advertisement

ಶನಿವಾರ ಬೆಳಗ್ಗೆ 10.30ಕ್ಕೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿರುವ ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಚುನಾವಣ ಪ್ರಚಾರಕ್ಕೆ ಕೆಪಿಸಿಸಿ ಅಧಿಕೃತ ಚಾಲನೆ ನೀಡಲಿದೆ. ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮುಳಬಾಗಿಲು ನಗರದ ಬಾಬಾ ಹೈದರ್‌ವಲ್ಲಿ ದರ್ಗಾಕ್ಕೆ ಸಿಎಂ, ಡಿಸಿಎಂ ಸಹಿತ ಕಾಂಗ್ರೆಸ್‌ ಮುಖಂಡರು ಭೇಟಿ ನೀಡಲಿದ್ದು, ನಂತರ ಡಾ| ಅಂಬೇಡ್ಕರ್‌ ವೃತ್ತದಲ್ಲಿ ಡಾ| ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.

ಪ್ರಜಾಧ್ವನಿ ಯಾತ್ರೆ ಅಂಬೇಡ್ಕರ್‌ ವೃತ್ತದಿಂದ ಹೊರಟು ಸೌಂದರ್ಯ ವೃತ್ತದವರೆಗೆ ಮೆರವಣಿಗೆ ಯಲ್ಲಿ ಸಾಗಿ ಅಲ್ಲಿ ಬಹಿರಂಗ ಪ್ರಚಾರ ನಡೆಯಲಿದೆ. ಕಾರ್ಯಕ್ರಮಕ್ಕೆ 10-15 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ತಿಳಿಸಿದ್ದಾರೆ.

ಈ ಮೊದಲು ಮಾ.29ರಂದು ಕುರುಡುಮಲೆ ಹಾಗೂ ಮಾ.30ರಂದು ಹಾಸನದ ಹೊಳೆನರಸೀಪುರದಿಂದ “ಪ್ರಜಾಧ್ವನಿ-2’ಕ್ಕೆ ಚಾಲನೆ ನೀಡಲು ಕಾಂಗ್ರೆಸ್‌ ಉದ್ದೇಶಿಸಿತ್ತು. ಈ ಸಂಬಂಧ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದವು. ಆದರೆ ಕೋಲಾರದಲ್ಲಿ ಪಕ್ಷದ ನಾಯಕರ ಭಿನ್ನಮತ ಸ್ಫೋಟಗೊಂಡು, ಅದು ರಾಜೀನಾಮೆ ಪ್ರಹಸನಕ್ಕೂ ತಲುಪಿತ್ತು. ಈ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ರಮ ಮುಂದೂಡಿಕೆಯಾಗಿತ್ತು.

ಕಳೆದ ಬಾರಿಯೂ ಇಲ್ಲಿಂದಲೇ ಪ್ರಚಾರಕ್ಕೆ ಚಾಲನೆ
ಸಾಮಾನ್ಯವಾಗಿ ಕಾಂಗ್ರೆಸ್‌ ಹಿಂದಿನಿಂದಲೂ ಕೋಲಾರದ ಕುರುಡುಮಲೆ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವುದರೊಂದಿಗೇ ಚುನಾವಣ ಪ್ರಚಾರ ಕಾರ್ಯವನ್ನು ಆರಂಭಿಸುತ್ತದೆ. ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ಇಲ್ಲಿಂದಲೇ ಪ್ರಚಾರಕ್ಕೆ ಚಾಲನೆ ನೀಡಲಾಗಿತ್ತು. ಉಳಿದ ರಾಜಕೀಯ ಪಕ್ಷಗಳು ಕೂಡ ಈ ಹಿಂದೆ ಕುರುಡುಮಲೆಗೆ ಪೂಜೆ ಸಲ್ಲಿಸಿಪ್ರಚಾರ ಆರಂಭಿಸಿದ್ದನ್ನು ಇಲ್ಲಿ ಸ್ಮರಿಸ ಬಹುದು.

Advertisement

ಯಾವುದೇ ಚುನಾವಣೆಗಳು ಬಂದರೂ ರಾಜಕಾರಣಿಗಳು ಕೂಡುಮಲೆ ವಿನಾಯಕನ ದೇಗುಲಕ್ಕೆ ಭೇಟಿ ನೀಡಿ ಪ್ರಥಮ ಪೂಜೆ ಸಲ್ಲಿಸುವುದು ವಾಡಿಕೆ. ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ಎಸ್‌.ಎಂ.ಕೃಷ್ಣ ಇಲ್ಲಿ ಪೂಜೆ ಸಲ್ಲಿಸುವ ಮೂಲಕ ಪಾಂಚಜನ್ಯ ಯಾತ್ರೆ ಕೈಗೊಂಡು ಚುನಾವಣೆ ಕಹಳೆ ಮೊಳಗಿಸಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಗದ್ದುಗೆ ಏರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next