ಬೆಳಗಾವಿ: ಬಿಸಿಲಿನ ಧಗೆಯಿಂದ ತತ್ತರಿಸಿರುವ ಬೆಳಗಾವಿಯಲ್ಲಿ ಈಗ ತಾಪಮಾನ 39ರ ಗಡಿ ದಾಟಿದ್ದು, ಉಸ್ಸಪ್ಪ ಉಸ್ಸೋ ಎಂದು ಜನ ನಿಟ್ಟುಸಿರು ಬಿಡುತ್ತಿದ್ದಾರೆ. ಬಿಸಿಲಿನ ಪ್ರಖರತೆಗೆ ಜನ-ಜಾನುವಾರುಗಳು ತ್ತರಿಸಿ ಹೋಗುತ್ತಿವೆ. ಈ ವರ್ಷ ಗಡಿ ಜಿಲ್ಲೆಯಲ್ಲಿ ಅತಿ ಹೆಚ್ಚಿನ ತಾಪಮಾನ ಕಂಡು ಬಂದಿದ್ದರಿಂದ ನೀರಿಗೆ ಪರಿತಪಿಸುವಂಥ ಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಬೆಳಗಾವಿಯಲ್ಲಿ ಏ. 26ರಂದು ಉಷ್ಣಾಂಶ 39.4 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಏ. 25ರಂದು 39.2, ಏ. 27ರಂದು 38.8 ಹಾಗೂ ಏ. 28ರಂದು 37.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು. ಬೆಳಗಿನಿಂದಲೇ ನೆತ್ತಿ ಸುಡುವ ಬಿಸಿಲು ಮುಂದುವರಿದಿದ್ದು, ಕೆಂಡ ಮೈಮೇಲೆ ಬಿದ್ದಂತಹ ಅನುಭವ ಉಂಟಾಗುತ್ತಿದೆ. ಬಿಸಿಲಿನಿಂದ ತಾಪದಿಂದ ರಕ್ಷಿಸಿಕೊಳ್ಳಲು ಒಂದು ಕಡೆ ಜನ ಕಸರತ್ತು ನಡೆಸುತ್ತಿದ್ದರೆ, ಇನ್ನೊಂದೆಡೆ ಜಾನುವಾರುಗಳು ತಂಪಿಗಾಗಿ ಪರಿತಪಿಸುತ್ತಿವೆ. ಇಡೀ ಜಿಲ್ಲೆಯಲ್ಲಿ ಬಿಸಿಲಿನ ಧಗೆಗೆ ರಕ್ಷಿಸಿಕೊಳ್ಳಲು ಸಾಹಸವೇ ಮುಂದುವರಿದಿದೆ.
ಗ್ರಾಮೀಣ ಭಾಗದ ಬಹುತೇಕ ಕೆರೆ, ಬಾವಿ, ಹಳ್ಳ-ಕೊಳ್ಳಗಳು ಖಾಲಿಯಾಗಿವೆ. ಅಂತರ್ಜಲ ಮಟ್ಟ ಕುಸಿತದಿಂದ ಬೋರ್‌ವೆಲ್ಗಳಲ್ಲಿ ನೀರಿಲ್ಲದೇ ಬತ್ತಿ ಹೋಗಿವೆ. ಮೇವು-ನೀರಿಗಾಗಿ ಜಾನುವಾರುಗಳು ಪರಿತಪಿಸುತ್ತಿವೆ. ಬರಗಾಲದಿಂದ ಬಸವಳಿದಿರುವ ಎಲ್ಲ ತಾಲೂಕುಗಳಲ್ಲಿಯೂ ಕುಡಿಯಲು ನೀರಿಲ್ಲದೇ ಜನರೂ ಪರದಾಡುತ್ತಿದ್ದಾರೆ. ಮೇವಿನ ಕೊರತೆಯಿಂದ ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟ ಮೇವು ಕೂಡ ಖಾಲಿಯಾಗಿದ್ದು, ಸರ್ಕಾರ ತೆರೆದಿರುವ ಮೇವು ಬ್ಯಾಂಕುಗಳಲ್ಲಿ ರೈತರು ಖರೀದಿಸುತ್ತಿದ್ದಾರೆ. ಇನ್ನುಳಿದಂತೆ ದನಕರುಗಳು ನೀರಿಲ್ಲದೇ ಬೀದಿಪಾಲಾಗುತ್ತಿವೆ.
ಗ್ರಾಮೀಣ ಭಾಗದಲ್ಲಿ ಜನ ನಸುಕಿನ ಜಾವದಲ್ಲಿಯೇ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಮಧ್ಯಾಹ್ನದ ಹೊತ್ತಿಗೆ ಮನೆ ಸೇರುತ್ತಿದ್ದಾರೆ. ಕೃಷಿಕರು ನಸುಕಿನ ಹೊತ್ತು 5 ಗಂಟೆ ಸುಮಾರಿಗೆ ಉಳುಮೆ ಮಾಡಲು ಹೊರಟಿದ್ದಾರೆ. 11 ಗಂಟೆಯೊಳಗೆ ಮನೆಗೆ ವಾಪಸ್ಸು ಬರುತ್ತಿದ್ದಾರೆ. ಕಟ್ಟಡ ಕಾರ್ಮಿಕರು, ಕಲ್ಲು ಒಡೆಯುವವರು, ರಸ್ತೆ ನಿರ್ಮಿಸುವ ಕಾರ್ಮಿಕರು ಬೆಳಗಿನ ಹೊತ್ತು ಬೇಗ ಕೆಲಸಕ್ಕೆ ಹೋಗುತ್ತಿದ್ದಾರೆ.
ನಗರ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳ ಸವಾರರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಅನೇಕ ಕಸರತ್ತು ನಡೆಸಿದ್ದಾರೆ. ಮುಖಕ್ಕೆ ಮಾಸ್ಕ್, ಬಟ್ಟೆ ಕಟ್ಟಿಕೊಂಡು ತಾಪಮಾನದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ. ಜನರು ಸಿಕ್ಕ ನೆರಳನ್ನೇ ಆಸರೆಯಾಗಿಟ್ಟುಕೊಂಡು ಗಿಡದ ನೆರಳು, ಕಟ್ಟೆಗಳ ಮೇಲೆ ಕುಳಿತು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
Advertisement
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನ ರುದ್ರನರ್ತನ ಜೋರಾಗಿದೆ. ಬೆಳಗ್ಗೆ 8ರಿಂದ ಆರಂಭವಾಗುವ ಬಿಸಿಲು ಸಂಜೆ 5 ಗಂಟೆವರೆಗೂ ಇರುತ್ತದೆ. ಮಧ್ಯಾಹ್ನ ಆಗುತ್ತಿದ್ದಂತೆ ಭೂಮಿ ಕಾದ ಕಾವಲಿಯಂತಾಗುತ್ತಿದೆ. ಮೂರ್‍ನಾಲ್ಕು ದಿನಗಳಿಂದ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದರಿಂದ ಜನ ಮನೆ ಬಿಟ್ಟು ಹೊರಗೆ ಬರಲಾರದಂಥ ಸ್ಥಿತಿ ಇದೆ.
Related Articles
Advertisement
• ಭೈರೋಬಾ ಕಾಂಬಳೆ