Advertisement
ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ಕೇವಲ 9ರಿಂದ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಈರುಳ್ಳಿ ಬಿತ್ತನೆಯಾಗಿದೆ. ಕಳೆದ ವರ್ಷದಲ್ಲಿ ಬಿತ್ತನೆ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಶೇ.10ರಷ್ಟು ಸಹ ಬಿತ್ತೆನೆಯಾಗಿಲ್ಲ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ದೃಢಪಡಿಸಿದೆ.
Related Articles
Advertisement
ಮಾರುಕಟ್ಟೆ ಬೆಲೆಅತ್ಯುತ್ತಮ ದರ್ಜೆಯ ಈರುಳ್ಳಿಗೆ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ 50 (ಚೀಲ) ಕೆಜಿಗೆ 1400ರಿಂದ 1500 ರೂ.ನಂತೆ ದರವಿದೆ. ದ್ವಿತೀಯ ದರ್ಜೆಯ ಈರುಳ್ಳಿಗೆ 1250ರಿಂದ 1300 ರೂ. ಹಾಗೂ ತೃತೀಯ ದರ್ಜೆ ಈರುಳ್ಳಿಗೆ 750ರಿಂದ 800 ರೂ.ಗೆ ದರ ನಿಗದಿ ಮಾಡಲಾಗಿದೆ. ದರ್ಜೆಗೆ ತಕ್ಕಂತೆ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಕನಿಷ್ಠ 15 ಹಾಗೂ ಗರಿಷ್ಠ 30 ರೂ. ಬೆಲೆ ಇದೆ. ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 25ರಿಂದ 35ರಂತೆ ಮಾರಾಟ ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ 100 ರೂ.ಗಳಿಗೆ ಮೂರು ಕೆಜಿ, ಹೆಬ್ಟಾಳ, ಜಯನಗರ, ಮಹಾಲಕ್ಷ್ಮೀಲೇಔಟ್, ಸುಂಕದ ಕಟ್ಟೆ, ಬೊಮ್ಮನಹಳ್ಳಿ, ಯಶವಂತಪುರ, ವಿಜಯನಗರ, ಕೆಂಗೇರಿ ಸೇರಿದಂತೆ ಹಲವೆಡೆ ನಾಲ್ಕು ಕೆ.ಜಿಗೆ 100 ರೂ.ಇದ್ದರೆ, ಅಂಗಡಿಗಳಲ್ಲಿ ಕೆಜಿಗೆ 27ರಿಂದ 29ರೂ.ಗೆ ಕೆಜಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಅಧಿಕ ಬೇಡಿಕೆ
ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಸಮಯದಲ್ಲಿ ಈರುಳ್ಳಿ ಖಾಲಿಯಾಗಲಿದೆ. ಆ ಹೊತ್ತಿಗೆ, ಈಗಾಗಲೇ ರಾಜ್ಯದೆಲ್ಲೆಡೆ ಬಿತ್ತನೆಯಾಗಿರುವ ಈರುಳ್ಳಿ ಫಸಲು ಮಾರುಕಟ್ಟೆ ಪ್ರವೇಶಿಸಲಿದೆ. ಇದರಿಂದಾಗಿ ಸ್ವಲ್ಪಮಟ್ಟಿಗೆ ಗ್ರಾಹಕರ ನಿರಾಳವಾಗುವ ಸಾಧ್ಯತೆ ಇದೆ. ಆದರೆ, ದಸರಾ, ದೀಪಾವಳಿ ಹಬ್ಬಗಳ ಸಡಗರ ಇರಲಿದ್ದು, ಈರಳ್ಳಿಗೂ ಅಧಿಕ ಬೇಡಿಕೆ ಇರಲಿದೆ. ಬಹುಶಃ ಆ ಸಂದರ್ಭದಲ್ಲಿ 18 ಸಾವಿರಕ್ಕೂ ಅಧಿಕ ಟನ್ ಈರುಳ್ಳಿ ಪ್ರತಿ ದಿನ ಬೇಕಾಗುತ್ತದೆ. ಅಕ್ಟೋಬರ್ ವೇಳೆ ಬೆಂಗಳೂರಿನಿಂದ ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಪಶ್ಚಿಮ ಬಂಗಾಳ, ಇಂಡೋನೇಷಿಯಾ, ಮಲೇಷ್ಯಾ ಸೇರಿದಂತೆ ವಿವಿಧ ಕಡೆಗಳಿಗೆ ಈರುಳ್ಳಿ ರಫ್ತಾಗಲಿದೆ. ಈರುಳ್ಳಿ ಉತ್ಪಾದನೆ ಕಡಿಮೆ ಇರುವುದರ ಜತೆಗೆ ವಿವಿಧ ರಾಜ್ಯ, ದೇಶಗಳಿಗೆ ರಫ್ತಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಹಕನ ಜೇಬಿಗೆ ಕತ್ತರಿ ಬೀಳಲಿದೆ.
ರಾಜ್ಯದ ಈರುಳ್ಳಿ ಬೆಳೆ ಮಾರುಕಟ್ಟೆ ಪ್ರವೇಶಿಸುವ ವರೆಗೂ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುತ್ತದೆ. ಬಹುಶಃ ಎರಡು ತಿಂಗಳಲ್ಲಿ 85ರಿಂದ 90 ರೂ.ಗಳಿಗೆ ತಲುಪಲಿದೆ ಎಂದು ಎಪಿಎಂಸಿ ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಮಳೆ ಕೊರತೆಯಿಂದ ಬಿತ್ತನೆಯಾಗಿಲ್ಲ. ಈಗಾಗಲೇ ಮಾರುಕಟ್ಟೆಗೆ ಪೂರೈಕೆಯಾಗುವ ಈರುಳ್ಳಿಯಲ್ಲಿ ಕುಂಠಿತವಾಗಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ತರಿಸಿಕೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಗಣೇಶ, ದಸರ, ದೀಪಾವಳಿ ಹಬ್ಬಗಳು ಇದ್ದು, ಬೇಡಿಕೆ ಹೆಚ್ಚಲಿದೆ. ಪೂರೈಕೆ ಕೇವಲ ಶೇ.25ರಿಂದ 30ರಷ್ಟಿದೆ. ಇದರಿಂದ ಮುಂದಿನ ತಿಂಗಳಲ್ಲಿ ಪ್ರತಿ ಕೆಜಿಗೆ 75ರಿಂದ 80 ರೂ.ತಲುಪುವ ನಿರೀಕ್ಷೆ ಇದೆ.
-ಶ್ರೀನಿವಾಸ್, ಮಾಲೀಕರು, ರಾಮಸ್ವಾಮಿ ಆ್ಯಂಡ್ ಕಂಪನಿ, ಎಪಿಎಂಸಿ, ಯಶವಂತಪುರ. ದಿನಕ್ಕೊಂದು ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಕೇಲವೇ ದಿನಗಳ ಹಿಂದೆ ಟೊಮೆಟೋ, ಈಗ ಈರುಳ್ಳಿ. ಬಡಕುಟುಂಬದವರ ಪಾಡು ಆ ದೇವರಿಗೆ ಪ್ರೀತಿ. ಸರ್ಕಾರ ಮುಂಜಾಗ್ರತೆ ವಹಿಸಿ, ಮಾರುಕಟ್ಟೆಯಲ್ಲಿ ಈರುಳ್ಳಿ ಸೇರಿದಂತೆ ಇತರ ತರಕಾರಿಗಳ ಬೆಲೆ ಏರಿಕೆಯಾಗದಂತೆ ಪರಿಹಾರೋಪಾಯ ಕಂಡುಕೊಳ್ಳಬೇಕು. ಗ್ರಾಹಕರ ಹಿತ ಕಾಯಬೇಕು.
-ರಾಘವೇಂದ್ರ ಭಟ್, ಗ್ರಾಹಕ * ಸಂಪತ್ ತರೀಕೆರೆ