Advertisement

ಶಿಕ್ಷಕಿ ಎಂಬ ಅಮ್ಮ 

12:30 AM Jan 25, 2019 | Team Udayavani |

ಗುರುಗಳು ಎಂದರೆ ನೆನಪಾಗುವುದೇ ಶಿಕ್ಷಣ. ನಮ್ಮನ್ನು ತಿದ್ದಿ-ತೀಡಿ ಸರಿಯಾದ ದಾರಿಗೆ ತರುವವರು ಗುರುಗಳಾಗಿರುತ್ತಾರೆ. ನಮಗೆ ಒಳ್ಳೆಯ ಪಾಠಗಳನ್ನು ಕಲಿಸಿ, ಒಳ್ಳೆಯ ಗುಣವನ್ನು ಬೆಳೆಸಿ ನಮಗೆ ಸರಿಯಾದ ಮಾರ್ಗದರ್ಶನವನ್ನು ನೀಡುವವರು ನಮ್ಮ ಗುರುಗಳು.

Advertisement

“ತಾಯಿಯೇ ಮೊದಲ ಗುರು’ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಮನೆಯೇ ಮೊದಲ ಪಾಠಶಾಲೆ. ಆ ಶಾಲೆಯ ಶಿಕ್ಷಕಿಯೇ ತಾಯಿ. ಮನೆಯಲ್ಲಿ ಅಮ್ಮ ಶಿಕ್ಷಕಿಯಾದ ರೆ, ಶಾಲೆಯಲ್ಲಿ ಶಿಕ್ಷಕಿಯೇ ನಮಗೆ ಅಮ್ಮ. ಮಕ್ಕಳ ಪಾಲಿಗೆ ಎರಡನೇ ತಾಯಿಯವಳು. ಅಮ್ಮ ಮನೆಯಲ್ಲಿ ತನ್ನ ಮಕ್ಕಳಿಗೆ ಹೇಗೆ ಪ್ರೀತಿ ತೋರಿಸಿ ಸರಿಯಾದ ದಾರಿಯಲ್ಲಿ ನಡೆಯಲು ಸಹಾಯ ಮಾಡುತ್ತಾಳ್ಳೋ ಹಾಗೆಯೇ ಶಾಲೆಯಲ್ಲಿ ಶಿಕ್ಷಕ-ಶಿಕ್ಷಕಿಯರೂ ಅಮ್ಮನಂತೆಯೇ ನಮ್ಮ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾರೆ. ಇಂತಹ ಶಿಕ್ಷಕಿಯರಲ್ಲಿ ನನ್ನ ಅಚ್ಚುಮೆಚ್ಚಿನ ಶಿಕ್ಷಕಿಯೊಬ್ಬರ ಬಗ್ಗೆ ಈಗ ನಾನು ಹೇಳಹೊರಟಿರುವುದು. ಅವರೇ ನನ್ನ ಪ್ರೀತಿಯ ಸರಸ್ವತಿ ಟೀಚರ್‌.

ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಅವರು ನಮ್ಮ ಶಾಲೆಯ ಎಲ್ಲ ತರಗತಿಗಳಿಗೂ ಪಾಠ ಮಾಡುತ್ತಿದ್ದರು. ಕನ್ನಡ ಶಿಕ್ಷಕಿಯಾಗಿದ್ದ ಅವರು ಚೆನ್ನಾಗಿ ಪಾಠವನ್ನೂ ಮಾಡುತ್ತಿದ್ದರು. ಜತೆಗೆ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದರು. ಎಲ್ಲ ವಿದ್ಯಾರ್ಥಿಗಳ ಮೇಲೂ ಅವರಿಗೆ ಪ್ರೀತಿ ಇತ್ತು. ಆದರೆ, ಇತರ ವಿದ್ಯಾರ್ಥಿಗಳಿಗಿಂತ ನನ್ನ ಮೇಲೆ ಯಾಕೋ ಸ್ವಲ್ಪ ಹೆಚ್ಚೇ ಅಕ್ಕರೆ ಇರುವಂತೆ ತೋರುತ್ತಿತ್ತು. ಅವರಿಗೆ ಮಕ್ಕಳಿರಲಿಲ್ಲವೆಂದು ನಾನು ಕೇಳಿದ್ದೆ. ಹಾಗಾಗಿಯೇ ಇರಬಹುದೇನೋ ಅವರು ನನ್ನನ್ನು ಅವರ ಸ್ವಂತ ಮಗಳಂತೆ ಭಾವಿಸಿದ್ದರೋ  ಏನೋ. ಅವರಿಗೆ ಏನೇ ದೊರೆತರೂ ಅದನ್ನು ನನಗೆ ಬಂದು ನೀಡುತ್ತಿದ್ದರು.

ಒಮ್ಮೆ ದೇವಸ್ಥಾನದಲ್ಲಿ ಅವರಿಗೆ ಸನ್ಮಾನ ಮಾಡಿದ್ದರು. ಆಗ ಆ ಸನ್ಮಾನದ ಶಾಲನ್ನು ನನಗೆ ನೀಡಿ, “ನೀನು ಇದರಿಂದ ಏನಾದರೂ ಡ್ರೆಸ್‌ ಹೊಲಿಸಿಕೋ’ ಎಂದು ಹೇಳಿದ್ದರು. ಅವರ ಶಿಷ್ಯ ವಾತ್ಸಲ್ಯ ಹೇಗಿತ್ತೆಂದರೆ, ಅವರಿಗೆ ಸಿಕ್ಕ ಹಣವನ್ನೂ ಒಮ್ಮೊಮ್ಮೆ ನನಗೆ ನೀಡುತ್ತಿದ್ದರು.

ಒಂದು ಸಲ ನಾನು ತರಗತಿಗೆ ಮೊದಲಿಗಳಾದೆ ಎಂದು ನನ್ನಲ್ಲಿ ಇತರ ಮಕ್ಕಳ ಕಾಪಿಯನ್ನು ತಿದ್ದಲು ನನಗೆ ನೀಡಿದ್ದರು. ನನಗಾಗ 10 ವರ್ಷ. ಶಿಕ್ಷಕರು ಮಾಡುವ ಕೆಲಸವನ್ನು ಮಕ್ಕಳು ಮಾಡಿದರೆ ಅದು ತಪ್ಪಲ್ಲವೆ? ಎಂದು ಭಾವಿಸಿದ ನಾನು ಆ ಕೆಲಸವನ್ನು ಮಾಡಲು ನಿರಾಕರಿಸಿದ್ದೆ. ಅದು ಅವರಿಗೆ ಬಹಳಷ್ಟು ನೋವುಂಟುಮಾಡಿತು. ಅಂದಿನಿಂದ ನನ್ನಲ್ಲಿ ಯಾವುದೇ ಕೆಲಸ ಹೇಳುವುದನ್ನೇ ಬಿಟ್ಟರು. ಆದರೆ, ಸ್ವಲ್ಪ ದಿನ ಕಳೆದ ಬಳಿಕ ಅದನ್ನೆಲ್ಲ ಮರೆತುಬಿಟ್ಟರು.

Advertisement

ಮತ್ತೆ ನಾನು ಯಾವುದೋ ಕಾರಣದಿಂದ ಅವರನ್ನು ಬಿಟ್ಟು ದೂರದೂರಿಗೆ ಹೋಗಬೇಕಾಗಿ ಬಂತು. ಆ ಹೊತ್ತಿಗೆ ಅವರು, “ನೀನು ನಮ್ಮ ಜೊತೆಯೇ ಇರು, ಅಲ್ಲಿಗೆ ಹೋಗಬೇಡ’ ಎಂದು ಬೇಸರ ತೋಡಿಕೊಂಡರು. ನನಗೂ ಅವರನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. 

ಸುಮಾರು ಎರಡು ವರ್ಷಗಳ ಬಳಿಕ ಅವರನ್ನು ಮತ್ತೆ ಭೇಟಿಯಾದೆ. ಆಗ ನನಗಾದ ಖುಷಿ ಅಷ್ಟಿಷ್ಟಲ್ಲ. ಅವರಿಗೂ ತುಂಬಾ ಸಂತೋಷವಾಯಿತು. ಮುಂದೆ ನಮ್ಮ ಈ ಸಂಬಂಧ ಮತ್ತೂ ಆತ್ಮೀಯವಾಯಿತು. ಇವತ್ತಿಗೂ ನನ್ನ ಬಾಳಿನಲ್ಲಿ  ಅವರು ಸದಾ ಅಚ್ಚಳಿಯದೆ ಉಳಿದು ಬಿಟ್ಟಿದ್ದಾರೆ. ಎಲ್ಲರಿಗೂ ವಿದ್ಯಾರ್ಥಿಗಳಿಗೂ ಇಂತಹ  ಶಿಕ್ಷಕರೆ ದೊರಕಲಿ ಎನ್ನುವುದೇ ನನ್ನ ಆಸೆ.

ಚೈತ್ರಾ
ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜು, ಕಟೀಲು

Advertisement

Udayavani is now on Telegram. Click here to join our channel and stay updated with the latest news.

Next