Advertisement

ಅಧಿಕಾರಿಗಳ ಕಾರ್ಯ ವೈಖರಿಗೆ ಸದಸ್ಯರ ಕಿಡಿ

07:22 AM Jan 25, 2019 | Team Udayavani |

ಬಳ್ಳಾರಿ: ಖಾಸಗಿಯವರಿಂದ ಪಾಲಿಕೆ ಆಸ್ತಿ ಕಬಳಿಕೆಯಾದರೂ ಕ್ರಮ ಕೈಗೊಳ್ಳದ ಪಾಲಿಕೆ ಅಧಿಕಾರಿಗಳ ವಿರುದ್ಧ ಸದಸ್ಯರ ಆಕ್ರೋಶ…. ಜನರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳ ಅಸಹಕಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು… ಇದರಿಂದ ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿರುವ ಬಹುತೇಕ ಸದಸ್ಯರು…….

Advertisement

ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಗುರುವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯರು ವ್ಯಕ್ತಪಡಿಸಿದ ಅಸಮಾಧಾನ ಮತ್ತು ಆಕ್ರೋಶದ ಮಾತುಗಳಿವು.

ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಸದಸ್ಯ ಕುಮಾರಸ್ವಾಮಿ, ನಗರದ ರೂಪನಗುಡಿ ರಸ್ತೆಯಲ್ಲಿ ಪಾಲಿಕೆಗೆ ಸೇರಿದ್ದ ಆಸ್ತಿಯಲ್ಲಿ 8.28 ಎಕರೆ ಜಾಗವನ್ನು ದೀಪಾ ಎನ್ನುವವರ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಯತ್ನಿಸಲಾಗಿದೆ. ಸಹಾಯಕ ಭೂ ಮಾಪನ ಇಲಾಖೆ ಅಧಿಕಾರಿ ಈ ಕುರಿತು ಪಾಲಿಕೆ ಅಧಿಕಾರಿಗಳ ಗಮನ ಸೆಳೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಜ.9ರಂದು ಈ ಪ್ರಕರಣ ಬಯಲಾಗಿದೆ. ಪ್ರಕರಣದಲ್ಲಿ ಜಾಗ ಕಬಳಿಕೆಗೆ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ಸಹ ಸಹಕಾರ ನೀಡಿರುವುದು ತಿಳಿದು ಬಂದಿದೆ. ಆದರೂ, ಈವರೆಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಜಾಗವನ್ನೇ ಕಬಳಿಸುವಂತಹವರು ಇದ್ದಾರೆ ಎಂಬುದು ಇದೀಗ ಬಯಲಿಗೆ ಬಂದಿದೆ. ಇದು ಅಧಿಕಾರಿಗಳ ಸಹಾಯ ಇಲ್ಲದೆ ಆಗಲ್ಲ. ಪ್ರಕರಣದಲ್ಲಿ ಭೂ ಕಬಳಿಕೆ ಯತ್ನಕ್ಕೆ ಸಹಕಾರ ನೀಡಿದ ಅಧಿಕಾರಿ ಯಾರು? ಆತನ ವಿರುದ್ಧ ಯಾವ ಕ್ರಮ ಜರುಗುಸುತ್ತೀರಾ? ಎಂದು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ದನಿಗೂಡಿಸಿದ ಮತ್ತೂಬ್ಬ ಸದಸ್ಯ, ಮಾಜಿ ಮೇಯರ್‌ ಜಿ.ವೆಂಕಟರಮಣ, ಸರ್ಕಾರಿ ಜಾಗವನ್ನೇ ಈ ರೀತಿ ಕಬಳಿಕೆ ಮಾಡುತ್ತಾರೆ ಎಂದಾದರೆ ಖಾಸಗಿಯವರ ಪಾಡೇನು? ಇದನ್ನು ಹೀಗೆ ಬಿಡಬಾರದು. ಆಸ್ತಿ ಕಬಳಿಸಲು ಮುಂದಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಮಹ್ಮದ್‌ ಮುನೀರ್‌, ಪ್ರಕರಣಕ್ಕೆ ಸಂಬಂಧಪಟ್ಟಂತೆ ಭೂ ಕಬಳಿಕಗೆ ಯತ್ನಿಸಿದವರಿಗೆ ನೋಟಿಸ್‌ ನೀಡಲಾಗಿದೆ. ಅವರು ಸುಳ್ಳು ದಾಖಲೆ ಸೃಷ್ಟಿಸಿದ್ದರ ಕುರಿತು ವಿವರವಾಗಿ ತಿಳಿಸಲಾಗಿದೆ. ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಕ್ರಮ ವಹಿಸಲಾಗುವುದು ಎಂದರು. ಆದರೆ, ಸಭೆಯಲ್ಲಿ ಮೇಯರ್‌ ಆರ್‌.ಸುಶೀಲಾಬಾಯಿ, ಉಪಮೇಯರ್‌ ದಿವ್ಯಕುಮಾರಿ, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರೂ, ಭೂ ಕಬಳಿಕೆಗೆ ಯತ್ನಿಸಿದವರ ವಿರುದ್ಧ ದೂರು ದಾಖಲಿಸುವ ಕುರಿತು ಯಾರೊಬ್ಬರೂ ಪ್ರಸ್ತಾಪಿಸದಿರುವುದು ಗಮನಾರ್ಹ.

Advertisement

ಸ್ಪರ್ಧೆಯಿಂದ ದೂರ: ಪಾಲಿಕೆ ಸದಸ್ಯರು ಅಧಿಕಾರಿಗಳ ವಿರುದ್ಧ ಸಭೆಯುದ್ದಕ್ಕೂ ಹರಿಹಾಯ್ದರು. ಆಯುಕ್ತರನ್ನು ಹೊರತುಪಡಿಸಿ, ಯಾವುದೇ ಅಧಿಕಾರಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಸಣ್ಣಪುಟ್ಟ ಸಮಸ್ಯೆಗಳಿಗೂ ಅಧಿಕಾರಿಗಳು ಕ್ಯಾರೇ ಎನ್ನುವುದಿಲ್ಲ. ಎಲ್ಲವನ್ನೂ ಆಯುಕ್ತರೇ ಮಾಡಬೇಕಾದ ಸ್ಥಿತಿ ಇದೆ ಎಂದು ಮಾಜಿ ಮೇಯರ್‌ ವೆಂಕಟರಮಣ, ಸದಸ್ಯ ವಿ.ಎಸ್‌.ಮರಿದೇವಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಪಾಲಿಕೆ ಅಧಿಕಾರಿಗಳ ಅಸಹಕಾರದಿಂದಾಗಿ ಮುಂದಿನ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಿದ್ದ ಬಹುತೇಕ ಸದಸ್ಯರು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರೆ. ಮಹಿಳೆಯರ ಸಾರ್ವಜನಿಕ ಶೌಚಾಲಯದ ಬಳಿ ಬೋರ್‌ ಹಾಕಿಲ್ಲ. ಸ್ವಂತ ಖರ್ಚಿನಿಂದ ಬೋರ್‌ ಹಾಕಿಸಿದ್ದೇನೆ. ಬ್ರೂಸ್‌ಪೇಟೆ ವ್ಯಾಪ್ತಿಯ ಎಲ್ಲ ಪ್ರದೇಶದಲ್ಲೂ ಚರಂಡಿ ನೀರು ಮಿಶ್ರಿತ ಕುಡಿವ ನೀರು ಸರಬರಾಜು ಆಗುತ್ತಿದೆ. ಕೇವಲ ಎರಡು ಪೈಪ್‌ಲೈನ್‌ ಹಾಕಿಸಲು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ. ಅದಕ್ಕೂ ನಾವೇ ಸ್ವಂತ ಹಣವನ್ನು ಖರ್ಚು ಮಾಡಿಕೊಳ್ಳಬೇಕು. ಕೇವಲ ಅಜೆಂಡಾ ಪಾಸ್‌ ಮಾಡಲು ಮಾತ್ರ ಸದಸ್ಯರು ಸಭೆಗೆ ಆಗಮಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಮಾಜಿ ಮೇಯರ್‌ ವೆಂಕಟರಮಣ, ಏರ್‌ಪೋರ್ಟ್‌ ರಸ್ತೆಯಲ್ಲಿ ಮಾಂಸವನ್ನು ರಸ್ತೆಯಲ್ಲೇ ಕಡಿದು ಅದರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಈ ಕುರಿತು ಸಾರ್ವಜನಿಕರೇ ಅಧಿಕಾರಿಗಳಿಗೆ ದೂರು ಸಲ್ಲಿಸಿದರೆ, ರಾಜಕೀಯ ಒತ್ತಡದಿಂದ ಆ ಸ್ಟಾಲ್‌ ತೆಗೆಸಲಾಗುವುದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಆದರೆ, ಯಾರೊಬ್ಬರೂ ಒತ್ತಡ ಹೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನೂ ಕೆಲ ಸದಸ್ಯರು ಕಸ, ಚರಂಡಿ, ನೀರು ಪೋಲಾಗುವ ಕುರಿತು ದೂರು ಸಲ್ಲಿಸಿದ್ದು ಮಾತ್ರವಲ್ಲದೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕೆಂಡಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಮಹ್ಮದ್‌ ಮುನೀರ್‌, ಅಂದಿನ ಕೆಲಸವನ್ನು ಅಂದೇ ಮಾಡಿದರೆ ಯಾವುದೇ ಸಮಸ್ಯೆಯಾಗಲ್ಲ. ಪ್ರತಿಯೊಬ್ಬ ಇಂಜೀಯರ್‌ಗಳು ಪ್ರತಿದಿನ ಕೈಗೊಳ್ಳುವ ಕೆಲಸಗಳ ಬಗ್ಗೆ ನಿಯಮದಂತೆ ಮಾಡಬೇಕು. ಆದರೆ, ಬಳ್ಳಾರಿಯಲ್ಲಿ ಯಾರೊಬ್ಬರೂ ಆರೀತಿ ಮಾಡಲ್ಲ. ಇದರಿಂದ ಪದೇ ಪದೇ ಈ ಸಮಸ್ಯೆ ತಲೆದೋರುತ್ತದೆ. ಹಾಗಾಗಿ ನೀರುಗಂಟಿಗಳ ಆರು ತಿಂಗಳ ಬಾಕಿ ವೇತನ ಸೇರಿ ಎಲ್ಲ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದರು.

ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡ ಮೇಯರ್‌ ಆರ್‌. ಸುಶೀಲ ಬಾಯಿ, ಉಪ ಮೇಯರ್‌ ದಿವ್ಯಕುಮಾರಿ ಇಡೀ ಸಭೆಯಲ್ಲಿ ಮೌನವಾಗಿಯೇ ಕುಳಿತಿದ್ದು. ಸದಸ್ಯರು, ಪಾಲಿಕೆ ಆಯುಕ್ತ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರೂ, ಸದಸ್ಯರ ಪರ ಒಂದೂ ಮಾತನಾಡದೆ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳದೆ, ಇಬ್ಬರೂ ತುಟಿ ಬಿಚ್ಚಲಿಲ್ಲ. ಒಂದೂವರೆ ತಾಸು ನಡೆದ ಸಭೆಯಲ್ಲಿ ಚರ್ಚೆ ಇಲ್ಲದೆ ಹಲವಾರು ವಿಷಯಗಳಿಗೆ ಬೆಂಚು ಕುಟ್ಟಿ ಪಾಸ್‌ ಪಾಸ್‌ ಎನ್ನುವ ಮೂಲಕ ಸದಸ್ಯರು ಅನುಮೋದನೆ ನೀಡಿದರು.

ಪ್ರಮುಖಾಂಶಗಳು

••ಅಧಿಕಾರಿಗಳ ಅಸಹಕಾರದಿಂದ ಚುನಾವಣೆಯಿಂದ ಹಿಂದೆಸರಿದ ಸದಸ್ಯರು

••ಖಾಸಗಿಯವರಿಂದ ಪಾಲಿಕೆಯ 8.24 ಎಕರೆ ಆಸ್ತಿ ಕಬಳಿಕೆ

••ಅಕ್ರಮಕ್ಕೆ ಅಧಿಕಾರಿಗಳ ಸಹಕಾರ; ಸದಸ್ಯರ ಆರೋಪ

••ಆಸ್ತಿ ಕಬಳಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಪಾಲಿಕೆ

ಮೇಯರ್‌-ಉಪ ಮೇಯರ್‌ ಮೌನ

ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡ ಮೇಯರ್‌ ಆರ್‌. ಸುಶೀಲ ಬಾಯಿ, ಉಪ ಮೇಯರ್‌ ದಿವ್ಯಕುಮಾರಿ ಇಡೀ ಸಭೆಯಲ್ಲಿ ಮೌನವಾಗಿಯೇ ಕುಳಿತಿದ್ದು. ಸದಸ್ಯರು, ಪಾಲಿಕೆ ಆಯುಕ್ತ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರೂ, ಸದಸ್ಯರ ಪರ ಒಂದೂ ಮಾತನಾಡದೆ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳದೆ, ಇಬ್ಬರೂ ತುಟಿ ಬಿಚ್ಚಲಿಲ್ಲ. ಒಂದೂವರೆ ತಾಸು ನಡೆದ ಸಭೆಯಲ್ಲಿ ಚರ್ಚೆ ಇಲ್ಲದೆ ಹಲವಾರು ವಿಷಯಗಳಿಗೆ ಬೆಂಚು ಕುಟ್ಟಿ ಪಾಸ್‌ ಪಾಸ್‌ ಎನ್ನುವ ಮೂಲಕ ಸದಸ್ಯರು ಅನುಮೋದನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next