Advertisement
ಸೋಮವಾರ ಸಂಜೆ ಪತ್ರಕರ್ತರು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಭೇಟಿಯಾಗಿ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆಯುತ್ತಿದ್ದಾಗ ಟ್ಯಾಂಕರ್ ನೀರಿನ ಟೆಂಡರ್ ಪ್ರಕ್ರಿಯೆ ಬಗ್ಗೆಯೂ ಪ್ರಶ್ನಿಸಿದರು. ಆಗ ಜಿಲ್ಲಾಧಿಕಾರಿಯವರು ಪೌರಾಯುಕ್ತ ಆನಂದ ಕಲ್ಲೋಳಿಕರ್ ಅವರಿಗೆ ಪತ್ರಕರ್ತರ ಎದುರೇ ಮೊಬೈಲ್ ಕರೆ ಮಾಡಿ ಟೆಂಡರ್ ಪ್ರಕ್ರಿಯೆ ಬಗ್ಗೆ ವಿಚಾರಿಸಿದರು. ಟೆಂಡರ್ ಕರೆಯಲಾಗಿದೆಯೇ? ಎಂದು ಪ್ರಶ್ನಿಸಿದಾಗ ಅದರ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಜಿಲ್ಲಾಧಿಕಾರಿಯವರಿಗೆ ತಿಳಿಯಿತು. ಕೂಡಲೇ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನ್ನ ಕಚೇರಿಗೆ ತರುವಂತೆ ಜಿಲ್ಲಾಧಿಕಾರಿಯವರು ಪೌರಾಯುಕ್ತರಿಗೆ ಸೂಚಿಸಿದರು.
ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ಚುನಾವಣಾ ನೀತಿಸಂಹಿತೆ ಅಡ್ಡಿಯಾಗಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈ ಹಿಂದೆಯೇ ಸೂಚಿಸಿದ್ದೆ. ಯಾಕೆ ಟೆಂಡರ್ ಆಗಿಲ್ಲ ಎಂಬುದನ್ನು ಪರಿಶೀಲಿಸುತ್ತೇನೆ. ಗ್ರಾ.ಪಂ.ಗಳಿಗೂ ಇದೇ ರೀತಿ ಸೂಚನೆ ನೀಡಿದ್ದು ಅಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ಟೆಂಡರ್ ಆಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ರಾತ್ರಿ ಬಜೆಯಲ್ಲೇ ಇರಿ…
“ನೀವು ರಾತ್ರಿ ಬಜೆಯಲ್ಲಿಯೇ ಇದ್ದು ಅಲ್ಲಿ ನೀರು ಕೊಡಲು ವ್ಯವಸ್ಥೆ ಮಾಡಿ…’ ಎಂದು ಜಿಲ್ಲಾಧಿಕಾರಿಯವರು ಪೌರಾಯುಕ್ತರಿಗೆ ಸೂಚಿಸಿದರು.