Advertisement

ಕೆನಡಾದಲ್ಲಿ ಅರಳಿದ ಪ್ರತಿಭೆ ಡಾ|ಆಚಾರ್ಯ

12:46 PM Dec 09, 2017 | Team Udayavani |

ಉಡುಪಿ: ಕೆನಡಾದ ಒಟ್ಟಾವ ಕಾರ್ಲ್ಟನ್‌ ವಿ.ವಿ. ಎಲೆಕ್ಟ್ರಾನಿಕ್ಸ್‌ ವಿಭಾಗದ ಪ್ರಾಧ್ಯಾಪಕ, ಉಡುಪಿ ತಾಲೂಕು ಹಿರಿಯಡಕ ಬಳಿಯ ಕುದಿ ಗ್ರಾಮದ ಡಾ| ರಾಮಚಂದ್ರ ಆಚಾರ್ಯ ಅವರು ಅಂತಾರಾಷ್ಟ್ರೀಯ ಸ್ತರದ “ಐಎಇಇಇ’ (ಇಂಟರ್‌ನ್ಯಾಶನಲ್‌ ಅಸೋಸಿಯೇಶನ್‌ ಆಫ್ ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರ್) ಎಲೆಕ್ಟ್ರೊ ಮ್ಯಾಗ್ನೆಟಿಕ್‌ ಕಂಪಾಟಿಬಿಲಿಟಿ ಸೊಸೈಟಿಯ ಡಿಸ್ಟಿಂಗ್ವಿಶ್‌x ಲೆಕ್ಚರರ್‌ ಪ್ರೋಗ್ರಾಮ್‌ನ ಪ್ರತಿಷ್ಠಿತ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿದ್ದಾರೆ. 

Advertisement

ಡಾ| ಆಚಾರ್ಯರು ಐಎಇಇಇಯ ಸರ್ಕ್ನೂಟ್ಸ್‌ ಆ್ಯಂಡ್‌ ಸಿಸ್ಟಮ್ಸ್‌ ಸೊಸೈಟಿ, ಎಲೆಕ್ಟ್ರೊ ಮ್ಯಾಗ್ನೆಟಿಕ್‌ ಕಂಪಾಟಿಬಿಲಿಟಿ ಸೊಸೈಟಿ ಮತ್ತು ಎಲೆಕ್ಟ್ರಾನಿಕ್‌ ಡಿವೈಸಸ್‌ ಸೊಸೈಟಿ- ಈ ಮೂರು ಸೊಸೈಟಿಗಳ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು. ಎಂಜಿನಿಯರ್ ಇನ್‌ಸ್ಟಿಟ್ಯೂಟ್‌ ಆಫ್ ಕೆನಡಾ ಮತ್ತು ಐಎಇಇಇಯ ಫೆಲೋಶಿಪ್‌ ಗೌರವ ಹೊಂದಿರುವ ಇವರು, ಈ ಸೊಸೈಟಿಗಳ ಸ್ಥಳೀಯ ವಿಭಾಗಗಳ ಆಮಂತ್ರಣದ ಮೇರೆಗೆ 30ಕ್ಕೂ ಹೆಚ್ಚು ದೇಶಗಳಲ್ಲಿ ಆಧುನಿಕ ಕಂಪ್ಯೂಟರ್‌ ಚಿಪ್‌ ವಿನ್ಯಾಸದ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. 

ಶೈಕ್ಷಣಿಕ ಸಾಧನೆಯಲ್ಲದೆ ಉಭಯ ರಾಷ್ಟ್ರಗಳ ವ್ಯಾಪಾರ ವ್ಯವಹಾರ ವೃದ್ಧಿಗಾಗಿ ಕೆನಡಾ – ಇಂಡಿಯ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಸ್ಥಾಪನೆಯಲ್ಲಿಯೂ ಡಾ| ಆಚಾರ್ಯರು ಮಹತ್ವದ ಪಾತ್ರ ವಹಿಸಿದ್ದಾರೆ. ಇದು ವಿಜ್ಞಾನ, ತಂತ್ರಜ್ಞಾನ, ವ್ಯಾಪಾರ ಮತ್ತು ನೀತಿ ಕುರಿತು ಕಾರ್ಯನಿರ್ವಹಿಸಲಿದೆ. 2014ರಲ್ಲಿ ಕಾರ್ಲ್ಟನ್‌ ವಿ.ವಿ.ಯಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ಸ್ಥಾಪಿಸುವಲ್ಲಿಯೂ ಆಚಾರ್ಯ ಸೇವೆ ಸಲ್ಲಿಸಿದ್ದರು. ಅಂತಾರಾಷ್ಟ್ರೀಯ ಸಂಶೋಧನ ನಿಯತಕಾಲಿಕಗಳಲ್ಲಿ ಇವರ 200ಕ್ಕೂ ಹೆಚ್ಚು ಅಧ್ಯಯನ ಪ್ರಬಂಧಗಳು ಪ್ರಕಟವಾಗಿವೆ.  

ಕವಿಯಾಗಿ ಆಚಾರ್ಯ
ಪ್ರೊ| ಆಚಾರ್ಯ, ಕನ್ನಡ ಕವನಗಳನ್ನೂ ಬರೆಯು ತ್ತಾರೆ. 50ಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದು, ಸಂಕಲನ ಹೊರತರುವ ತಯಾರಿಯಲ್ಲಿದ್ದಾರೆ. 

ಉನ್ನತ ಶಿಕ್ಷಣ
ಡಾ| ಆಚಾರ್ಯರು ಪದವಿಯ ಬಳಿಕ ರಾಜಸ್ಥಾನದ ಪಿಲಾನಿಯಲ್ಲಿರುವ ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಮೈಕ್ರೋ ಎಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಬಳಿಕ ಕೆನಡಾಕ್ಕೆ ತೆರಳಿ, ಹೈ ಫ್ರೀಕ್ವೆನ್ಸಿ ಕಂಪ್ಯೂಟರ್‌ ಚಿಪ್‌ (ಮಾಡೆಲಿಂಗ್‌ ಮತ್ತು ಸಿಮ್ಯುಲೇಶನ್‌) ಕುರಿತು ಪಿ.ಎಚ್‌ಡಿ. ಪದವಿ ಪಡೆದರು. 

Advertisement

ಕನ್ನಡ ಮಾಧ್ಯಮ, ಉಚಿತ ಹಾಸ್ಟೆಲ್‌ ಓದು
ಕುದಿ ಗ್ರಾಮದಲ್ಲಿ ರಾಘವೇಂದ್ರ ಆಚಾರ್ಯ ಮತ್ತು ಜಾಂಬವತಿ ಆಚಾರ್ಯ ದಂಪತಿಗೆ ಜನಿಸಿದ ರಾಮಚಂದ್ರ ಆಚಾರ್ಯರು ಬೊಮ್ಮರಬೆಟ್ಟು ಸರಕಾರಿ ಹಿ.ಪ್ರಾ. ಶಾಲೆ ಮತ್ತು ಹಿರಿಯಡಕ ಸ.ಪ.ಪೂ. ಕಾಲೇಜಿನ ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು. ಎಂಜಿಎಂ ಕಾಲೇಜಿನಲ್ಲಿ ಪಿಯು ಓದಿದ ಬಳಿಕ ಬೆಂಗಳೂರು ಆರ್‌ವಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌ ವಿಭಾಗದಲ್ಲಿ ಪದವಿ ಗಳಿಸಿದರು. ಬೆಂಗಳೂರು ವಿ.ವಿ.ಪುರಂನ ರಾಮಕೃಷ್ಣ ಸ್ಟೂಡೆಂಟ್ಸ್‌ ಹೋಮ್‌ ಉಚಿತ ಹಾಸ್ಟೆಲ್‌ನಲ್ಲಿದ್ದುದು ಜೀವನದ ಅನೇಕ ತಿರುವುಗಳಿಗೆ ಕಾರಣವಾಯಿತು ಎನ್ನುತ್ತಾರೆ ಡಾ| ಆಚಾರ್ಯ. 

Advertisement

Udayavani is now on Telegram. Click here to join our channel and stay updated with the latest news.

Next