ಮುಂಬೈ: ಗುರುವಾರದಿಂದ ಕೋವಿಡ್ ಒಡ್ಡಿರುವ ಅಡೆತಡೆಗಳನ್ನು ಮೀರಿ ಸೈಯದ್ ಮುಷ್ತಾಖ್ ಅಲಿ ಟಿ20 ಕ್ರಿಕೆಟ್ ಕೂಟ ಆರಂಭವಾಗಲಿದೆ.
ಇದು ಭಾರತದ ಬಹುಮುಖ್ಯ ದೇಶೀಯ ಟಿ20 ಕೂಟಗಳಲ್ಲೊಂದು. ಇಲ್ಲಿನ ಪ್ರದರ್ಶನ ಆಟಗಾರರ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಬಹಳ ನೆರವಾಗುತ್ತದೆ. ಆದ್ದರಿಂದ ಆಟಗಾರರೆಲ್ಲ ಕುತೂಹಲದಿಂದ ಕಾಯುತ್ತಿದ್ದಾರೆ. ಗುರುವಾರ ಕರ್ನಾಟಕ ತಂಡ ಬಲಿಷ್ಠ ಮುಂಬೈ ವಿರುದ್ಧ ಪಂದ್ಯವಾಡಲಿದೆ.
ಎರಡೂ ತಂಡಗಳ ಪಾಲಿಗೆ ಇದು ಬಹುಮುಖ್ಯವಾದ ಪಂದ್ಯ. ಎರಡರಲ್ಲೂ ಖ್ಯಾತ ಅಂತಾರಾಷ್ಟ್ರೀಯ ತಾರೆಯರಿದ್ದಾರೆ. ಇಲ್ಲಿ ಎರಡು ರೀತಿಯ ಲಾಭಗಳಿವೆ. ಕೆಲವರು ಉದಯೋನ್ಮುಖ, ಛಾಪು ಮೂಡಿಸಿರುವ ಅಂತಾರಾಷ್ಟ್ರೀಯ ಆಟಗಾರರು ಇಲ್ಲಿದ್ದಾರೆ. ಇವರಿಗೆ ಅಂತಾರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶ. ಇನ್ನೊಂದು ಕಡೆ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟಿ20 ಆಡುವುದು ಸಾಧ್ಯವಿಲ್ಲದ ಮಾತು. ಆದರೆ ಅದ್ಭುತ ಪ್ರತಿಭಾವಂತರಾದ ಅವರಿಂದ ಯುವ ಆಟಗಾರರು ಕಲಿಯಲು ಸಾಕಷ್ಟು ವಿಷಯಗಳಿವೆ. ಉದಾಹರಣೆಗೆ ಅಜಿಂಕ್ಯ ರಹಾನೆ ವಿಶ್ವಶ್ರೇಷ್ಠ ಟೆಸ್ಟ್ ಆಟಗಾರ. ಅವರು ಅಂತಾರಾಷ್ಟ್ರೀಯ ಟಿ20 ತಂಡದಲ್ಲಿ ಆಡುವುದು ಬಹಳ ಕಷ್ಟ. ಆದರೆ ಅವರ ಬ್ಯಾಟಿಂಗ್ ಪರಿಣತಿ, ಅನುಭವ ಇತರೆ ಆಟಗಾರರ ಕಲಿಕೆಗೆ ಬಹಳ ನೆರವಾಗುತ್ತದೆ.
ಇದನ್ನೂ ಓದಿ:ಟಿ20 ವಿಶ್ವಕಪ್: ಸೆಮಿಫೈನಲ್‌ನತ್ತ ಕಿವೀಸ್ ದಾಪುಗಾಲು
ಕರ್ನಾಟಕ ತಂಡದಲ್ಲಿರುವ ಮನೀಷ್ ಪಾಂಡೆ, ದೇವದತ್ತ ಪಡಿಕ್ಕಲ್, ಮಾಯಾಂಕ್ ಅಗರ್ವಾಲ್, ಕೆ.ಗೌತಮ್, ಪ್ರಸಿದ್ಧಕೃಷ್ಣ ಅಂತಾರಾಷ್ಟ್ರೀಯ ಆಟಗಾರರು. ಅವರಿಗೆಲ್ಲ ಈ ಕೂಟ, ಅಂತಾರಾಷ್ಟ್ರೀಯ ತಂಡಕ್ಕೆ ತಮ್ಮ ಅಗತ್ಯವಿದೆ ಎಂದು ತೋರಿಸಿಕೊಳ್ಳಲು ವೇದಿಕೆಯಾಗಿದೆ. ಪಡಿಕ್ಕಲ್, ಮಾಯಾಂಕ್ ಇವರೆಲ್ಲ ಇನ್ನೂ ಅಂತಾರಾಷ್ಟ್ರೀಯ ತಂಡದಲ್ಲಿ ಭದ್ರ ನೆಲೆ ಕಂಡುಕೊಂಡಿಲ್ಲ. ಪಡಿಕ್ಕಲ್‌ಗಂತೂ ಬಹಳ ಅವಕಾಶಗಳೇ ಸಿಕ್ಕಿಲ್ಲ. ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆಗೆ ಟಿ20 ವೇಗಕ್ಕೆ ಹೊಂದಿಕೊಳ್ಳಲು ಉತ್ತಮ ಅವಕಾಶವಾಗಿದೆ. ಕನಿಷ್ಠ ಪಕ್ಷ ಐಪಿಎಲ್‌ನಲ್ಲಾದರೂ ಅವರಿಗೆ ಇದು ಉಪಯೋಗಕ್ಕೆ ಬರುತ್ತದೆ.
ಮುಂಬೈ ಉಪನಾಯಕ ಪೃಥ್ವಿ ಶಾ ಆಕ್ರಮಣಕಾರಿ ಆಟಗಾರ, ಪ್ರತಿಭಾವಂತ ಎನ್ನುವುದೇನೋ ಸತ್ಯ. ಆದರೆ ಅದೇಕೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರೀಕ್ಷೆಗೆ ತಕ್ಕ ಸಾಧನೆ ಮಾಡಿಲ್ಲ. ಜೊತೆಗೆ ಅನಗತ್ಯ ವಿವಾದಗಳಿಗೂ ಕಾರಣವಾಗಿದ್ದಾರೆ. ಅವರೊಮ್ಮೆ ಭಾರತೀಯ ತಂಡದಿಂದ ಬೇರ್ಪಡಲು ಅಶಿಸ್ತೇ ಕಾರಣ ಎಂಬ ಮಾತುಗಳೂ ಇವೆ. ಅವರಿಗಂತೂ ಈ ಕೂಟ ಮಹತ್ವದ್ದಾಗಿದೆ. ಎರಡೂ ತಂಡಗಳ ಬೌಲಿಂಗ್, ಬ್ಯಾಟಿಂಗ್ ಅತ್ಯುತ್ತಮವಾಗಿದೆ. ಪ್ರತಿಭಾವಂತ ವೇಗಿಗಳಿದ್ದಾರೆ. ಇವರೆಲ್ಲರಿಗೂ ಪ್ರತೀ ಪಂದ್ಯವೂ ಮುಖ್ಯವಾಗಿದೆ.
ಕರ್ನಾಟಕ-ಮುಂಬೈ
ಪಂದ್ಯಾರಂಭ: ಮ.12.30
ಸ್ಥಳ: ಗುವಾಹಟಿ, ಅಸ್ಸಾಂ