Advertisement

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಶೀಘ್ರ ಬರಲಿದೆ ಸ್ವೈಪಿಂಗ್‌ ಮೆಶಿನ್‌

09:55 AM Nov 12, 2019 | Team Udayavani |

ಮಂಗಳೂರು: ಕೆಎಸ್ಸಾರ್ಟಿಸಿ ಡಿಜಿಟಲ್‌ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಯಿಡುತ್ತಿದ್ದು, ಶೀಘ್ರವೇ ದೂರ ಪ್ರಯಾಣದ ಬಸ್‌ಗಳಲ್ಲಿ ಸ್ವೈಪಿಂಗ್‌ ಮೆಶಿನ್‌ ಬರಲಿದೆ. ಇದರಿಂದ ಕ್ಯಾಶ್‌ಲೆಸ್‌ ಪ್ರಯಾಣ ಸಾಧ್ಯವಾಗಲಿದೆ.

Advertisement

ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಚಿಲ್ಲರೆ ಸಮಸ್ಯೆ ತೀರಾ ಸಾಮಾನ್ಯವಾಗಿದೆ. ಕೆಲ ವೊಂದು ಈ ಕುರಿತಾದ ಜಗಳ ತಾರಕಕ್ಕೆ ಏರಿದ್ದೂ ಇದೆ. ಅದೇ ಸಂದರ್ಭ ಇದು ಇತರ ಪ್ರಯಾಣಿಕರಿಗೆ ಕಿರಿಕಿರಿಯೂ ಆಗುತ್ತದೆ. ಇದಕ್ಕೆಲ್ಲ ಪರಿಹಾರ ಎಂಬಂತೆ ಸ್ವೈಪಿಂಗ್‌ ಯಂತ್ರ ಅಳವಡಿಸಿಕೊಳ್ಳಲು ಕೆಎಸ್ಸಾರ್ಟಿಸಿ ಚಿಂತಿಸಿದೆ.

ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಸ್ವೈಪ್‌ ವ್ಯವಸ್ಥೆಯನ್ನು ಪರಿಚಯಿಸಲಿದೆ. ಮೊದಲಿಗೆ ದೂರ ಪ್ರಯಾಣದ ವೋಲ್ವೊ, ಐರಾವತ, ಹೊರ ರಾಜ್ಯಗಳಿಗೆ ತೆರಳುವ ಬಸ್‌ಗಳಲ್ಲಿ ಮತ್ತು ಘಟಕಗಳ ಟಿಕೆಟ್‌ ಕೌಂಟರ್‌ಗಳಲ್ಲಿ ಸ್ಪೈಪ್‌ ಮೆಶಿನ್‌ ಅಳವಡಿಸುವ ಬಗ್ಗೆ ಚರ್ಚೆ ನಡೆಯು ತ್ತಿದೆ. ನಿಗಮ ಮಟ್ಟದಲ್ಲಿ ಈಗಾಗಲೇ ರೂಪು ರೇಷೆ ತಯಾರಾಗಿದ್ದು, ಮುಂಬರುವ ನಿಗಮ ಮಟ್ಟದ ಸಭೆಯಲ್ಲಿ ಪ್ರಸ್ತಾವಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ.

ಇಟಿಎಂ ಅಳವಡಿಕೆ
ನಿಗಮದ ಎಲ್ಲ ಬಸ್‌ ನಿರ್ವಾಹಕರ ವಿದ್ಯುನ್ಮಾನ ಟಿಕೆಟಿಂಗ್‌ ಯಂತ್ರ (ಇಟಿಎಂ)ಗಳನ್ನೂ ಡಿಜಿಟಲ್‌ ಆಗಿ ಉನ್ನತೀಕರಿಸಲಾಗುತ್ತದೆ. ಈ ವ್ಯವಸ್ಥೆ ಯನ್ನು “ಜಿಪಿಆರ್‌ಎಸ್‌ ಎನೇಬಲ್ಡ್‌ ಜಿಪಿಎಸ್‌ ಮ್ಯಾನೇಜಿಂಗ್‌ ಸಿಸ್ಟಮ್‌’ ಎಂದು ಕರೆಯ ಲಾಗುತ್ತದೆ. ಇಟಿಎಂ ಒಳಗೆ ಸಿಮ್‌ ಮಾದರಿಯ ಸಣ್ಣ ಚಿಪ್‌ ಅಳವಡಿಸಲಾಗುತ್ತದೆ. ಟಿಕೆಟ್‌ ಹಣ ಎಷ್ಟು ಸಂಗ್ರಹವಾಗುತ್ತಿದೆ ಎಂಬ ನೇರ ಮಾಹಿತಿ ಈ ಮೂಲಕ ಲಭ್ಯವಾಗಲಿದೆ. ವಿಭಾಗ ಕಚೇರಿಗಳಲ್ಲಿ, ಪ್ರಧಾನ ಕಚೇರಿಗಳಲ್ಲಿ ಅಧಿಕಾರಿಗಳು ನಿಖರ ಲೆಕ್ಕಾಚಾರ ಪಡೆಯಲು ಇದರಿಂದ ಸಾಧ್ಯವಾಗಲಿದೆ.

2004ರಿಂದ ಇಟಿಎಂ
2004ರಿಂದ ನಿಗಮದ ಎಲ್ಲ ಬಸ್‌ಗಳಲ್ಲಿ ಇಟಿಎಂ ಮೂಲಕವೇ ಟಿಕೆಟ್‌ ನೀಡಲಾಗುತ್ತಿದೆ. ಈಗ ಕರಾರು ಅವಧಿ ಪೂರ್ಣ ಗೊಳಿಸಿದ ಇಟಿಎಂಗಳನ್ನು ಅಪ್‌ಗ್ರೇಡ್ ಮಾಡಲಾಗುತ್ತಿದೆ.2 ಸಾವಿರ ಬಸ್‌ಗಳಿಗೆ ವಿಟಿಎಂಎಸ್‌ ಕೆಎಸ್ಸಾರ್ಟಿಸಿಯಲ್ಲಿ ಈಗಾಗಲೇ 84 ಘಟಕ ಗಳಿದ್ದು, 17 ವಿಭಾಗಗಳಿವೆ. ಮಂಗಳೂರು, ಪುತ್ತೂರು, ಮೈಸೂರು ಗ್ರಾಮಾಂತರ, ರಾಮನಗರ ವಿಭಾಗಗಳ ಒಟ್ಟು 2 ಸಾವಿರ ಬಸ್‌ಗಳಲ್ಲಿ ಮೊದಲನೇ ಹಂತವಾಗಿ ವೆಹಿಕಲ್‌ ಟ್ರ್ಯಾಕಿಂಗ್‌ ಆ್ಯಂಡ್‌ ಮಾನಿಟರಿಂಗ್‌ ಸಿಸ್ಟಂ (ವಿಟಿಎಂಎಸ್‌) ಅಳವಡಿಸಲಾಗಿದೆ.

Advertisement

ಕಾಮನ್‌ ಮೊಬಿಲಿಟಿ ಕಾರ್ಡ್‌
ಒಂದು ಕಡೆಯಲ್ಲಿ ಸ್ವೈಪಿಂಗ್‌ ಮೆಶಿನ್‌ ಅಳವಡಿಸಲು ನಿರ್ಧರಿಸಿದರೆ, ಇನ್ನೊಂದೆಡೆ ಕಾಮನ್‌ ಮೊಬಿಲಿಟಿ ಕಾರ್ಡ್‌ ಜಾರಿಗೊಳಿಸುವ ಪ್ರಯತ್ನವೂ ಸಾಗುತ್ತಿದೆ. ಕೆಎಸ್ಸಾರ್ಟಿಸಿಯಿಂದ ನೀಡಲಾಗುವ ಎಟಿಎಂ ಮಾದರಿಯ ಕಾರ್ಡನ್ನು ರೀಚಾರ್ಜ್‌ ಮಾಡಿದರೆ ಅದನ್ನು ವಿವಿಧೆಡೆ ಬಳಸಲು ಅನುಕೂಲವಾಗಲಿದೆ.

ನಿರ್ದಿಷ್ಟ ಬ್ಯಾಂಕ್‌ ಜತೆ ಕೆಎಸ್ಸಾರ್ಟಿಸಿ ಒಪ್ಪಂದ ಮಾಡಿಕೊಂಡು ಇದನ್ನು ಜಾರಿಗೆ ತರಲಿದೆ. ಇದೊಂದು ಬಹೂಪ ಯೋಗಿ ಕಾರ್ಡ್‌ ಆಗಿರಲಿದೆ. ಕೆಎಸ್ಸಾರ್ಟಿಸಿ ಬಸ್‌ ಮಾತ್ರವಲ್ಲದೆ ಇದೇ ಕಾರ್ಡ್‌ ಬಳಸಿ ಬಿಎಂಟಿಸಿ, ನಮ್ಮ ಮೆಟ್ರೋಗಳಲ್ಲಿಯೂ ಬಳಸಲು ಅವಕಾಶ ನೀಡಲಿದೆ. ಮಾತ್ರವಲ್ಲದೆ ಬ್ಯಾಂಕ್‌ ಜತೆ ಒಪ್ಪಂದ ಮಾಡಿಕೊಂಡಿರುವುದರಿಂದ ಈ ಕಾರ್ಡ್‌ ಅನ್ನು ಶಾಪಿಂಗ್‌ಗೆ ಕೂಡ ಬಳಸಬಹುದು. ಇದಕ್ಕೆ ಮೊಬೈಲ್‌ ರೀಚಾರ್ಜ್‌ ರೀತಿ ಹಣ ತುಂಬ ಬಹುದು. ಎಲ್ಲ ಕೆಎಸ್ಸಾರ್ಟಿಸಿ ಕಚೇರಿಗಳಲ್ಲಿಯೂ ಈ ಕಾರ್ಡ್‌ಗೆ ಹಣ ತುಂಬುವುದಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸ್ವೈಪಿಂಗ್‌ ಮೆಶಿನ್‌ ಅಳವಡಿಸುವ ಕುರಿತು ಚರ್ಚೆ ನಡೆದಿದೆ. ಮೊದಲಾಗಿ ದೂರ ಪ್ರಯಾಣದ ಬಸ್‌ಗಳಲ್ಲಿ ಇದನ್ನು ಅಳವಡಿಸಲಾಗುತ್ತದೆ. ಇದರಿಂದ ಚಿಲ್ಲರೆ ಸಮಸ್ಯೆ ನಿವಾರಣೆಯಾಗಲಿವೆ. ಇದು ಅಲ್ಲದೆ ಕಾಮನ್‌ ಮೊಬಿಲಿಟಿ ಕಾರ್ಡ್‌ ಸಹಿತ ಇತರ ಹಲವಾರು ಉಪಕ್ರಮಗಳೂ ಶೀಘ್ರ ಜಾರಿಗೆ ಬರಲಿದೆ.
– ಶಿವಯೋಗಿ ಕಳಸದ್‌, ನಿರ್ದೇಶಕರು, ಕೆಎಸ್ಸಾರ್ಟಿಸಿ

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next