Advertisement

ಸಿಎಂಗೆ ಸುವರ್ಣ ಸವಾಲುಗಳ ಸರಮಾಲೆ

07:25 AM Nov 13, 2017 | |

ಬೆಳಗಾವಿ: ಕಬ್ಬು ಬೆಳೆಗಾರ ವಿಠಲ ಅರಬಾವಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೂ ಸೇರಿ ಮುಖ್ಯಮಂತ್ರಿಯಾಗಿ ನಾಲ್ಕೂ ವರ್ಷ ಬೆಳಗಾವಿ ಸುವರ್ಣಸೌಧದಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಸಿದ ಸಿದ್ದರಾಮಯ್ಯ ಅವರಿಗೆ ಒಂದಿಲ್ಲೊಂದು ಸಮಸ್ಯೆ -ಸವಾಲು ಬಿಟ್ಟೂ ಬಿಡದಂತೆ ಕಾಡಿತು.

Advertisement

ಮೊದಲ ವರ್ಷವೇ ಸುವರ್ಣಸೌಧ ಮುಂದೆ ನಡೆದ ಕಬ್ಬು ಬೆಳಗಾರ ವಿಠಲ ಅರಬಾವಿ ಆತ್ಮಹತ್ಯೆ ಪ್ರಕರಣ ಕಪ್ಪು ಚುಕ್ಕೆಯಾಗಿ ಉಳಿಯಿತು. ರೈತನೊಬ್ಬನ ಬಲಿ ಪಡೆದ ವಿಚಾರ ರಾಜ್ಯಾದ್ಯಂತ ಪ್ರತಿಭಟನೆ, ಬಂದ್‌ಗೂ ಕಾರಣವಾಗಿ ಆ ಘಟನೆಯಂತೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು.

ಕಾಂಗ್ರೆಸ್‌ ಸರ್ಕಾರ ಬಂದ ಮೊದಲ ವರ್ಷವೇ ರೈತನನ್ನು ಬಲಿಪಡೆಯಿತು ಎಂದು ಪ್ರತಿಪಕ್ಷಗಳು ಸರ್ಕಾರದ ಮೇಲೆ
ಮುಗಿಬಿದ್ದು ಮೂರ್‍ನಾಲ್ಕು ದಿನಗಳ ಕಾಲ ಕಲಾಪ ನಡೆಯದಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿಂದ ಪ್ರತಿ
ಬಾರಿಯ ಅಧಿವೇಶನದಲ್ಲೂ ಸರ್ಕಾರ ಇಕ್ಕಟ್ಟಿಗೆ ಸಿಲುಕುವಂತಹ ವಿಚಾರಗಳು ಪ್ರಸ್ತಾಪಗೊಂಡು ಗದ್ದಲ-ಪ್ರತಿಭಟನೆ ಸಾಮಾನ್ಯ ಎಂಬಂತಾಗಿತ್ತು.

ಶಾದಿಭಾಗ್ಯ ಯೋಜನೆ ಎಲ್ಲ ವರ್ಗಕ್ಕೂ ಕೊಡಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಡೆಸಿದ ಅಹೋರಾತ್ರಿ ಧರಣಿ, ಕಳಂಕಿತ ಸಚಿವರನ್ನು ಸಂಪುಟದಿಂದ ಕೈ ಬಿಡಲು ಒತ್ತಾಯಿಸಿ ಧರಣಿ , ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಹಾಗೂ ನ್ಯಾ.ಭಾಸ್ಕರ್‌ ರಾವ್‌ ಪದಚ್ಯುತಿ ಪ್ರಕರಣ, ಟಿಪ್ಪು ಜಯಂತಿಯಲ್ಲಿ ಸಚಿವ ತನ್ವೀರ್‌ ಸೇs… ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪ ಪ್ರಕರಣ, ಶಿವರಾಜ್‌ ತಂಗಡಗಿ ವಿರುದ್ಧದ ಯಲ್ಲಾಲಿಂಗ ಪ್ರಕರಣ, ಬಿಡಿಎ ಡಿನೋಟಿμಕೇಷನ್‌, ಅನುಪಮಾ ಶೆಣೈ ರಾಜೀನಾಮೆ, ವಕ್ಫ್ ಆಸ್ತಿ ಕಬಳಿಕೆ ಕುರಿತ ಅನ್ವರ್‌ ಮಾನಪ್ಪಾಡಿ ವರದಿ ಹಿನ್ನೆಲೆಯಲ್ಲಿ ಖಮರುಲ್‌ ಇಸ್ಲಾಂ ರಾಜೀನಾಮೆಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವ್ಯವಹಾರ ಆರೋಪ, ಎಚ್‌.ಸಿ.ಮಹದೇವಪ್ಪ ಪುತ್ರನ ವಿರುದಟಛಿದ ಪ್ರಕರಣಗಳ ಪ್ರಸ್ತಾಪದಿಂದ ಗದ್ದಲ, ಕೋಲಾಹಲ ಉಂಟಾಗಿ ಕಲಾಪದ ಬಹುತೇಕ ಸಮಯ ನುಂಗಿ ಹಾಕಿತು.

ಇನ್ನು, ಕಬ್ಬು ಬೆಳೆಗಾರರ ಸಮಸ್ಯೆಯಂತೂ ಐದೂ ವರ್ಷ ಪ್ರತಿ ಅಧಿವೇಶನದಲ್ಲಿ ಪ್ರಸ್ತಾಪಗೊಂಡು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರ ನಡುವಿನ ಸಂಘರ್ಷ, ಪ್ರತಿಭಟನೆ, ಸಮಾವೇಶ ಸಾಮಾನ್ಯವಾಗಿತ್ತು. ಒಂದು ಹಂತದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಕೊಡಬೇಕಾದ ಬಾಕಿ ಹಣ ಸರ್ಕಾರವೇ ಕೊಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೂ ಇದೆ.

Advertisement

ನೈಸ್‌ ಸಂಸ್ಥೆಯ ಅಕ್ರಮಗಳ ಬಗ್ಗೆ ಸದನ ಸಮಿತಿ ವರದಿ ಮಂಡನೆ ವಿಚಾರದಲ್ಲಂತೂ ಹೈಡ್ರಾಮಾ ನಡೆದು ಹೋಯಿತು. ಸ್ಪೀಕರ್‌ ಕೆ.ಬಿ.ಕೋಳಿವಾಡ ವರದಿ ಮಂಡಿಸಲು ಸೂಚಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವರದಿ ಮಂಡಿಸುವುದಾಗಿ ತಿಳಿಸಿದ ನಂತರವೂ ಎರಡು ದಿನಗಳ “ಕಣ್ಣಾಮುಚ್ಚಾಲೆ’ ನಡೆಯಿತು.

ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಹಾಗೂ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಎಚ್‌ .ಡಿ.ಕುಮಾರಸ್ವಾಮಿ ನಡೆಸಿದ ಪಾದಯಾತ್ರೆ, ಯಡಿಯೂರಪ್ಪ-ಈಶ್ವರಪ್ಪ ಸೇರಿ ಬಿಜೆಪಿ ನಾಯಕರು ನಡೆಸಿದ ಸುವರ್ಣಸೌಧ ಮುತ್ತಿಗೆ ಪ್ರತಿವರ್ಷದ ಎಂಇಎಸ್‌ನ ಮಹಾಮೇಳಾವ್‌, ಮಹದಾಯಿ ವಿಚಾರದಲ್ಲಿ ರಾಜಕೀಯ ಮೇಲಾಟ ನಾಲ್ಕೂ ವರ್ಷಗಳಲ್ಲಿ ದಾಖಲಾಯಿತು.

ಒಟ್ಟಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ “ಉತ್ತರ ಕರ್ನಾಟಕ ಭಾಗದ ಜನರ ಆಶಯದಂತೆ ನಾಲ್ಕೂ ವರ್ಷ ಬೆಳಗಾವಿ ಸುವರ್ಣಸೌಧದಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಸಿದರೂ ಸಾಲಮನ್ನಾ ಸೇರಿ ರೈತರ ಸಮಸ್ಯೆಗಳು, ಉತ್ತರ ಕರ್ನಾಟಕದ ಜತೆಗೆ ಹೈದರಾಬಾದ್‌ ಕರ್ನಾಟಕ
ಭಾಗದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ದೊರೆತರೂ ಹಣ ವೆಚ್ಚ ಮಾಡದಿರುವುದು, ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನದ ಪ್ರಗತಿ ಪ್ರತಿವರ್ಷ ಚರ್ಚೆ ನಡೆಯಿತು.

ಆದರೆ, ಯಾವುದೂ ತಾತ್ವಿಕ ಅಂತ್ಯ ಕಾಣದೆ “ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧ, ಸಮಗ್ರ ಕರ್ನಾಟಕದ ಅಭಿವೃದ್ಧಿ ನಮ್ಮ ಗುರಿ’ ಘೋಷಣೆಯ ಮುಖ್ಯಮಂತ್ರಿಯವರ ಭಾಷಣದೊಂದಿಗೆ ಅಧಿವೇಶನವೂ ಮುಕ್ತಾಯವಾಗುತ್ತಿತ್ತು.

ಐದನೇ ವರ್ಷವಾದ ಈ ಬಾರಿಯೂ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ.ಜಾರ್ಜ್‌ ರಾಜೀನಾಮೆಗೆ ಒತ್ತಾಯ ಸೇರಿ ಕೆಲವು  ಪ್ರತಿಪಕ್ಷಗಳ ಬತ್ತಳಿಕೆಯಲ್ಲಿವೆ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐದು ವರ್ಷ ಸುವರ್ಣಸೌಧದಲ್ಲಿ ನಡೆಸಿದ ವಿಧಾನಮಂಡಲ ಅಧಿವೇಶನ ಸಮಾಧಾನಕ್ಕಿಂತ ಸವಾಲು ಒಡ್ಡಿದ್ದೇ ಹೆಚ್ಚು ಎನ್ನುವಂತಾಗಿದೆ.

ಐತಿಹಾಸಿಕ ನಿರ್ಧಾರ
–  ನಾಲ್ಕು ವರ್ಷಗಳಲ್ಲಿ ಸಾಕಷ್ಟು ಸವಾಲುಗಳ ನಡುವೆಯೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ ಯೋಜನಾ ಗಾತ್ರದಲ್ಲಿ ಅನುದಾನ ಕಾಯ್ದಿರಿಸಿ ಬಳಸುವ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆ ಮಂಡನೆ ಹಾಗೂ ಅನುಮೋದನೆ
– ವಿಧಾನಮಂಡಲದ ಕಾರ್ಯವಿಧಾನ ತಿದ್ದುಪಡಿ ವಿಧೇಯಕ ಸೇರಿ ಕೆಲವು ಮಹತ್ವದ ವಿಧೇಯಕ
– ಲೋಕಾಯುಕ್ತ ಕಾಯ್ದೆ ತಿದ್ದುಪಡಿ
– “ವಾಸಿಸುವವನೇ ಮನೆಯೊಡೆಯ’ ಉದ್ದೇಶದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ

– ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next