Advertisement
ಭಾರತೀಯ ಕುಸ್ತಿ ಫೆಡರೇಶನ್‌ನ ನಿಕಟಪೂರ್ವ ಅಧ್ಯಕ್ಷ, ಸಂಸದ ಬೃಜ್‌ಭೂಷಣ್ ಶರಣ್‌ಸಿಂಗ್ ವಿರುದ್ಧ ದೇಶದ ಪ್ರಮುಖ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ಅವರ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದಾಗಿನಿಂದ ದೇಶದ ಕುಸ್ತಿ ಅಖಾಡದಲ್ಲಿ ಭಾರೀ ಬಿರುಗಾಳಿ ಎದ್ದಿತ್ತು. ಕ್ರೀಡಾ ಸಚಿವಾಲಯ ಮತ್ತು ಕುಸ್ತಿ ಪಟುಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದ ಬಳಿಕ ಜೂನ್ ಮೊದಲ ವಾರದಲ್ಲಿ ಕುಸ್ತಿಪಟುಗಳು ತಮ್ಮ ಪ್ರತಿಭಟನೆ ಹಿಂಪಡೆದಿದ್ದರು. ಆದರೆ ಡಬ್ಲ್ಯುಎಫ್ಐಗೆ ವಿಶ್ವ ಕುಸ್ತಿ ಫೆಡರೇಶನ್ ನಿಷೇಧ ಹೇರಿದ್ದರಿಂದ ಭಾರತದ ಕುಸ್ತಿಪಟುಗಳು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ತಟಸ್ಥರಾಗಿ ಸ್ಪರ್ಧಿಸುವಂತಾಗಿತ್ತು. ಇದರ ನಡುವೆ ಭಾರತೀಯ ಕುಸ್ತಿ ಫೆಡರೇಶನ್‌ಗೆ ಡಿ. 21ರಂದು ನಡೆದ ಚುನಾವಣೆಯಲ್ಲಿ ಬೃಜ್‌ಭೂಷಣ್ ಆಪ್ತ ಸಂಜಯ್ ಸಿಂಗ್ ನೇತೃತ್ವದ ಬಣ ಭರ್ಜರಿ ಬಹುಮತದಿಂದ ಜಯಶಾಲಿಯಾಗಿತ್ತು. ಇದು ಈ ಹಿಂದೆ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳ ನಿರಾಶೆಗೆ ಕಾರಣವಾಗಿತ್ತಲ್ಲದೆ, ನೂತನವಾಗಿ ಆಯ್ಕೆಯಾದ ಸಮಿತಿಯು ತರಾತುರಿಯಲ್ಲಿ ಕಿರಿಯರ ಅಂದರೆ ಅಂಡರ್ 15, ಅಂಡರ್ 20 ರಾಷ್ಟ್ರೀಯ ಕುಸ್ತಿ ಪಂದ್ಯಾಟ ಆಯೋಜಿಸುವ ನಿರ್ಧಾರ ಕೈಗೊಂಡ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕುಸ್ತಿಪಟುಗಳ ಆಕ್ರೋಶಕ್ಕೆ ಮಣಿದಿರುವ ಕೇಂದ್ರ ಸರಕಾರ ನೂತನ ಸಮಿತಿಯನ್ನು ಸದ್ಯ ಅಮಾನತಿನಲ್ಲಿರಿಸಿ ಆದೇಶ ಹೊರಡಿಸಿದೆ. ಹೊಸ ಸಮಿತಿಯು ಈ ಹಿಂದಿನ ಕಾರ್ಯಕಾರಿ ಸಮಿತಿಯ ಪ್ರಭಾವಕ್ಕೊಳಗಾಗಿ ಕಿರಿಯರ ಕುಸ್ತಿ ಪಂದ್ಯಾ ಟವನ್ನು ತರಾತುರಿಯಲ್ಲಿ ಆಯೋಜಿಸುವ ನಿರ್ಧಾರ ಕೈಗೊಳ್ಳುವ ಮೂಲಕ ಫೆಡರೇಶನ್‌ನ ಎಲ್ಲ ನಿಯಮ, ನಿಬಂಧನೆಗಳನ್ನು ಗಾಳಿಗೆ ತೂರಿದೆ ಎಂದು ಸಚಿವಾಲಯ ತನ್ನ ಆದೇಶದಲ್ಲಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ.
Advertisement
Wrestling ಅವ್ಯವಸ್ಥೆ ನೇರ್ಪುಗೊಳಿಸಲು ನಾಂದಿಯಾಗಲಿ ಅಮಾನತು ಕ್ರಮ
12:34 AM Dec 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.