ಬೆಂಗಳೂರು: ಪತ್ನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿನಗರ ಠಾಣೆ ಪೊಲೀಸರ ವಶದಲ್ಲಿದ್ದ ನಿವೃತ್ತ ಯೋಧನೊಬ್ಬ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.
ಅಬ್ಬಯ್ಯ ಲೇಔಟ್ ನಿವಾಸಿ ಕೃಷ್ಣಮೂರ್ತಿ (53) ಮೃತರು. ಕೌಟುಂಬಿಕ ವಿಚಾರವಾಗಿ ಪತ್ನಿಯನ್ನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದ ಕೃಷ್ಣಮೂರ್ತಿ, ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಮತ್ತು ಚಿನ್ನಾಭರಣವನ್ನು ಕಲ್ಕೆರೆ ಬಳಿಯ ನಿರ್ಜನ ಪ್ರದೇಶದಲ್ಲಿ ಬಿಸಾಡಿರುವುದಾಗಿಯೂ ಹೇಳಿಕೆ ನೀಡಿದ್ದ.
ಹೀಗಾಗಿ ಭಾನುವಾರ ಸಂಜೆ ಕಲ್ಕೆರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥಗೊಂಡ. ಬಳಿಕ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಪೊಲೀಸರ ವಶದಲ್ಲಿದ್ದಾಗ ಆರೋಪಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಖಾಸಗಿ ಕಂಪನಿಯಲ್ಲಿ ಲಿಫ್ಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಕೃಷ್ಣಮೂರ್ತಿ, ಕೌಟುಂಬಿಕ ವಿಚಾರವಾಗಿ ನ.20ರಂದು ಪತ್ನಿ ಮೇಘಲಾದೇವಿ ಅವರನ್ನು ಹತ್ಯೆಗೈದು ಪರಾರಿಯಾಗಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಪತಿಯೇ ಕೃತ್ಯವೆಸಗಿರುವುದು ತಿಳಿದು ಬಂದಿತ್ತು. ಅಲ್ಲದೆ, ಘಟನಾ ಸ್ಥಳ ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿ ಅನುಮಾಸ್ಪದವಾಗಿ ಓಡಾಡುತ್ತಿರುವುದು ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಡಿ.2ರಂದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು.
ಪೊಲೀಸರಿಗೆ ತಿಳಿಸಿದ್ದ ಆರೋಪಿ: ಕೃಷ್ಣಮೂರ್ತಿ ಮತ್ತು ಮೇಘಲಾದೇವಿ ದಂಪತಿಗೆ ಮಕ್ಕಳಿರಲಿಲ್ಲ. ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು. ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಆರೋಪಿ ಕೊಲೆಗೈದಿದ್ದ. ನಂತರ ಪೊಲೀಸ್ ಠಾಣೆಗೆ ಹೋಗಿ ಅಪರಿಚಿತ ವ್ಯಕ್ತಿಗಳು ಪತ್ನಿಯನ್ನು ಕೊಂದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಸದ್ಯಕ್ಕೆ ಯಾರ ಮೇಲೂ ಅನುಮಾನ ಇಲ್ಲ ಎಂದೂ ಹೇಳಿಕೆ ನೀಡಿದ್ದ.
ಪ್ರಕರಣ ಸಿಐಡಿಗೆ: ಪೊಲೀಸರ ವಶದಲ್ಲಿದ್ದಾಗಲೇ ಆರೋಪಿ ಮೃತಪಟ್ಟಿರುವುದರಿಂದ ಪ್ರಕರಣವನ್ನು ಸಿಐಡಿಗೆ ವರ್ಗಾಹಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದರು. ಪತ್ನಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
ಬಳಿಕ ಆರೋಪಿ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲು ಬೇರೆಡೆ ಕರೆದೊಯ್ಯುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ನಿಖರ ಕಾರಣ ತಿಳಿದು ಬರಲಿದೆ. ಪೊಲೀಸರ ವಶದಲ್ಲಿದ್ದಾಗಲೇ ಮೃತಪಟ್ಟಿರುವುದರಿಂದ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಅವರು ಹೇಳಿದರು.