ಮಂಗಳೂರು: ಸಿಆರ್‌ಝಡ್ ಪ್ರದೇಶದಲ್ಲಿ ಮರಳು ತೆಗೆದು ಸಾಗಿಸುವುದನ್ನು ನಿಷೇಧಿಸಿದ್ದರಿಂದ ಒಂದೆಡೆ ಮರಳಿನ ದರವು ತೀವ್ರವಾಗಿ ಹೆಚ್ಚಲಿದೆ, ಇನ್ನೊಂದೆಡೆ ನ್ಯಾಯವಾಗಿ ಪರವಾನಿಗೆ ಪಡೆದು ಮರಳು ತೆಗೆಯುವವರಿಗೆ ಅನ್ಯಾಯ ಮಾಡಿದಂತಾಗಿದೆ. ಹಾಗಾಗಿ ಈ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗುವುದು ಎಂದುದ.ಕ. ಜಿಲ್ಲಾ ಸಿಆರ್‌ಝಡ್ ಮರಳು ಪರ ವಾನಿಗೆದಾರರ ಒಕ್ಕೂಟ ತಿಳಿಸಿದೆ.
ಒಕ್ಕೂಟದ ಗೌರವ ಸಲಹೆಗಾರ ಮಯೂರ್ ಉಳ್ಳಾಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಹುತೇಕ ಆರಂಭಗೊಳ್ಳುವ ಹಂತದಲ್ಲಿದ್ದ ಸಿಆರ್‌ಝಡ್ ಮರಳುಗಾರಿಕೆಯನ್ನು ನಿಷೇಧಿಸಿದ್ದರಿಂದ 3,000 ಕುಟುಂಬಗಳಿಗೆ ನೇರವಾಗಿ ಸಮಸ್ಯೆ ಉಂಟಾಗುತ್ತಿದೆ ಎಂದರು.
2021ರ ಸೆಪ್ಟಂಬರ್ 17ರಂದು ಸಿಆರ್‌ಝಡ್ ವಲಯದಲ್ಲಿ ಮರಳು ದಿಬ್ಬ ತೆರವು ಸ್ಥಗಿತಗೊಂಡು, ಕೆಎಸ್‌ಸಿಝಡ್‌ಎಂಎ ಸಭೆಯಲ್ಲಿ ಪರಿಸರ ಇಲಾಖೆಯ ಕ್ಲಿಯರೆನ್ಸ್ ಪಡೆಯಲು ಮಾ. 14 ಆಗಿತ್ತು, ಬಳಿಕ ಜಿಲ್ಲೆಯಲ್ಲಿ ಅನುಮೋದನೆ ಪಡೆಯುವುದಕ್ಕೆ ಮೇ ವರೆಗೆ ಕಾಯಬೇಕಾಯಿತು. ಮರಳು ದಕ್ಕೆಯ ಸರ್ವೇ ಕೆಲಸ ಮುಗಿಸಿ, 10 ಸಾವಿರ ರೂ. ಅರ್ಜಿ ಶುಲ್ಕ ಭರಿಸಿ, ಮುಂಗಡ ರಾಜಧನ ಪಾವತಿಸಿದ ಬಳಿಕ ಏಕಾಏಕಿ ಮರಳುಗಾರಿಕೆ ಮಾಡಬೇಡಿ ಎಂದಿರುವುದರಿಂದ ನಾವೆಲ್ಲ ಆರ್ಥಿಕ ಅನಿಶ್ಚಿತತೆಗೆ ತಳ್ಳಲ್ಪಟ್ಟಿದ್ದೇವೆ ಎಂದು ಹೇಳಿದರು.
ನಮ್ಮದು ಅಕ್ರಮ ಅಲ್ಲ
ಸಕ್ರಮವಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ಸಿಆರ್‌ಝಡ್ ಪ್ರದೇಶದಲ್ಲಿ ನಾವು ಮರಳಿನ ಕೆಲಸ ಮಾಡುತ್ತೇವೆ, ಆದರೆ ಅದ್ಯಾವುದೂ ಇಲ್ಲದೆ ಇಂದಿಗೂ ಅಕ್ರಮವಾಗಿ ಮರಳು ಪೂರೈಕೆ ಮಾಡಲಾಗುತ್ತದೆ, ಅವರ ಮೇಲೆ ಕ್ರಮ ಕೈಗೊಳ್ಳುವ ಬದಲು ನಮ್ಮ ಮೇಲೆಯೇ ಕಾನೂನು, ಕಾಯ್ದೆ, ಪರಿಸರ ಹೋರಾಟ ಎಂಬಿತ್ಯಾದಿ ಅಂಶಗಳೊಂದಿಗೆ ಸವಾರಿ ಮಾಡಲಾಗುತ್ತಿದೆ ಎಂದರು.
ಸಿಆರ್‌ಝಡ್ ಪ್ರದೇಶದಲ್ಲಿ ಲಭ್ಯವಿದ್ದ ಮರಳಿನ ದರ 5,200 ರೂ. ಮತ್ತು 15 ಕಿ.ಮೀ. ವ್ಯಾಪ್ತಿಯಲ್ಲಿ 2,000 ರೂ. ಸಾಗಾಟ ವೆಚ್ಚ ಹಾಗೂ ಸ್ಯಾಂಡ್ ಬಜಾರ್ ಅಪ್ಲಿಕೇಶನ್ ನಿರ್ವಹಣ ವೆಚ್ಚ 300 ರೂ. ಸೇರಿದಂತೆ 7,500 ರೂ.ಗೆ ಸಿಆರ್‌ಝಡ್ ಮರಳು ಸಿಗುತ್ತಿತ್ತು. ಈಗ ನಾನ್ ಸಿಆರ್‌ಝಡ್ ಹಾಗೂ ಡ್ಯಾಂನ ಮರಳು ಪ್ರಾರಂಭಿಕ ದರವೇ 7,500 ರೂ. ಇದ್ದು ಸಾಗಾಟ ವೆಚ್ಚವೂ ಸೇರಿ 12 ಸಾವಿರ ರೂ. ಆಗುತ್ತದೆ ಎಂದರು.
ಕಡಿಮೆ ದರದಲ್ಲಿ ಹೇರಳ ಮರಳು ಸಿಗುತ್ತದೆ ಎಂದು ಹೇಳಿಕೆ ನೀಡುವ ಜಿಲ್ಲಾಧಿಕಾರಿಯವರು ಡ್ಯಾಂನ ಮರಳು ಯಾರ್ಡ್‌ನಿಂದ ಎಷ್ಟು ಲೋಡ್ ಹೋಗುತ್ತದೆ ಹಾಗೂ ಆದರ ಗುಣಮಟ್ಟ ಹೇಗಿದೆ ಎಂಬುದನ್ನೂ ಗಮನಿಸಲಿ ಎಂದು ಹೇಳಿದರು.
ಗೌರವಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಸುರೇಂದ್ರ ಕಂಬಳಿ, ಅಧ್ಯಕ್ಷ ದಿನೇಶ್ ಕೆ., ಪ್ರಧಾನ ಕಾರ್ಯದರ್ಶಿ ರೋವಿನ್ ಡಿ’ಸೋಜಾ ಹಾಜರಿದ್ದರು.