Advertisement

ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರ ಈಗ ಆರಂಭವಾದರಷ್ಟೇ ಪ್ರಯೋಜನ

01:15 AM Oct 28, 2020 | mahesh |

ಕೋಟ: ಮಳೆಯ ಕಣ್ಣಾ ಮುಚ್ಚಲೆಯ ನಡುವೆ ಭತ್ತದ ಕಟಾವು ಪ್ರಕ್ರಿಯೆ ಆರಂಭಗೊಂಡಿದ್ದು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಕರಾವಳಿಯ ರೈತರಲ್ಲಿ ಭತ್ತವನ್ನು ಸಂಗ್ರಹಿಸಿಟ್ಟು ಬೆಲೆ ಏರಿಕೆಯಾದಾಗ ಮಾರಾಟ ಮಾಡುವ ಅಭ್ಯಾಸ‌ ಕಡಿಮೆ. ಮಳೆ, ಗೋದಾಮುಗಳ ಕೊರತೆ ಮುಂತಾದ ಕಾರಣಗಳಿಂದಾಗಿ ಉತ್ಪನ್ನವನ್ನು ಬೇಗನೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ.

Advertisement

ರೈತರ ಈ ಅನಿವಾರ್ಯತೆಯನ್ನು ಬಳಸಿಕೊಂಡು ಕೆಲವು ಮಿಲ್‌ಗ‌ಳು ಕಡಿಮೆ ಹಣಕ್ಕೆ ಭತ್ತವನ್ನು ಖರೀದಿಸಿ ರೈತರಿಗೆ ನಷ್ಟ ಮಾಡುತ್ತಾರೆ. ಆದ್ದರಿಂದ ಕಟಾವಿನ ಆರಂಭದಲ್ಲೇ ಅಂದರೆ ಅಕ್ಟೋಬರ್‌ ಅಂತ್ಯದೊಳಗೆ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಕೇಂದ್ರಗಳು° ತೆರೆದರೆ ಸಾಕಷ್ಟು ಅನುಕೂಲವಾಗಲಿದೆ. ಇದು ಉಡುಪಿ ಜಿಲ್ಲೆಯ ರೈತರ ಆಗ್ರಹವೂ ಹೌದು.

ಕಳೆದ ಬಾರಿ ನವೆಂಬರ್‌ ಆರಂಭದಲ್ಲಿ ಉಡುಪಿ ಜಿಲ್ಲಾಡಳಿತ ಖರೀದಿ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿತ್ತು. ಸರಕಾರದಿಂದ ವಿಳಂಬವಾಗಿ ಅನುಮೋದನೆಗೊಂಡು ಜನವರಿ ಮೊದಲ ವಾರ ಆರಂಭಗೊಂಡಿತ್ತು. ಅಷ್ಟರಲ್ಲಿ ಬಹುತೇಕ ರೈತರು ಭತ್ತವನ್ನು ಖಾಸಗಿ ಮಿಲ್‌ಗಳಿಗೆ ಮಾರಾಟ ಮಾಡಿ ಆಗಿದ್ದರಿಂದ ಖರೀದಿ ಕೇಂದ್ರದ ಕಡೆ ಯಾರೂ ಸುಳಿದಿರಲಿಲ್ಲ. ಈ ವರ್ಷವಾದರೂ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡು ಪ್ರಕ್ರಿಯೆಗಳನ್ನು ಚುರುಕುಗೊಳಿಸಿದ ರಷ್ಟೇ ಪ್ರಯೋಜನವಾದೀತು.

ಪ್ರತಿ ತಾ|ನಲ್ಲಿ ಸ್ಥಾಪನೆಗೆ ಬೇಡಿಕೆ
ಕಳೆದ ಸಾಲಿನಲ್ಲಿ ಉಡುಪಿ, ಕುಂದಾಪುರ, ಕಾರ್ಕಳ ತಾಲೂಕು ಕೇಂದ್ರಗಳ ಎಪಿಎಂಸಿ ಪ್ರಾಂಗಣದಲ್ಲಿ ಖರೀದಿ ಕೇಂದ್ರ ತೆರೆಯಲಾಗಿತ್ತು. ಈ ರೀತಿ ಜಿಲ್ಲೆಯಲ್ಲಿ ಎರಡು- ಮೂರು ಕೇಂದ್ರಗಳನ್ನು ಸ್ಥಾಪಿಸಿದರೆ ಸಾಗಾಟ ಮುಂತಾದವುಗಳಿಗೆ ಸಮಸ್ಯೆ ಯಾಗಲಿದೆ. ಆದ್ದರಿಂದ ಪ್ರತಿ ತಾಲೂಕಿಗೊಂದರಂತೆ ಖರೀದಿ ಕೇಂದ್ರ ಆರಂಭಿಸಬೇಕು ಮತ್ತು ಪ್ರತಿ ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿ ಖರೀದಿ ಕೇಂದ್ರ ತೆರೆಯುವ ವ್ಯವ
ಸ್ಥೆಯ ಬದಲು ರೈತರ ಎಲ್ಲ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಸುವಂತೆ ಕೇಂದ್ರಗಳು ಯಾವತ್ತೂ ತೆರೆದಿರಬೇಕು ಎನ್ನುವ ಬೇಡಿಕೆಯೂ ಇದೆ.

ರೈತರ ಜವಾಬ್ದಾರಿಯೂ ಇದೆ
ಹೆಚ್ಚಿನ ರೈತರು ಕಟಾವು ಮಾಡಿದ ಕೂಡಲೇ ಮಾರಾಟ ಮಾಡುವುದರಿಂದ ಮಳೆಯಲ್ಲಿ ನೆನೆದ ಭತ್ತವಾಗಿದ್ದಲ್ಲಿ ಗುಣಮಟ್ಟ ಕುಸಿಯುತ್ತದೆ ಹಾಗೂ ಉತ್ತಮ ಧಾರಣೆಯೂ ಸಿಗುವುದಿಲ್ಲ. ಬಿಸಿಲಲ್ಲಿ ಒಣಗಿಸಿ ಗುಣಮಟ್ಟ ಕಾಯ್ದು ಮಾರಾಟ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎನ್ನುವ ಅಭಿಪ್ರಾಯವಿದೆ.

Advertisement

ದ.ಕ.ದಲ್ಲಿ ಬೇಡಿಕೆ ಇಲ್ಲ
ಈ ಬಾರಿ ಉಡುಪಿ ಜಿಲ್ಲೆಯಲ್ಲಿ 35,754 ಹೆಕ್ಟೇರ್‌ ಹಾಗೂ ದ.ಕ. ಜಿಲ್ಲೆಯಲ್ಲಿ 11,260 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಉಡುಪಿ ಜಿಲ್ಲೆಗೆ ಹೋಲಿಸಿದರೆ ದ.ಕ.ದಲ್ಲಿ ಭತ್ತದ ಬೆಳೆಯ ಪ್ರಮಾಣ ಕಡಿಮೆ ಹಾಗೂ ಅಲ್ಲಿ ಸ್ಥಳೀಯ ಮಾರುಟಕ್ಟೆಯಲ್ಲೇ ವಿಲೇವಾರಿ ನಡೆಯುವುದರಿಂದ ಹಲವು ವರ್ಷಗಳಿಂದ ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರ ಸ್ಥಾಪನೆಗೆ ರೈತರಿಂದ ಬೇಡಿಕೆ ಇಲ್ಲ ಎಂದು ದ.ಕ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ| ಸೀತಾ ತಿಳಿಸಿದ್ದಾರೆ.

ತತ್‌ಕ್ಷಣ ಕ್ರಮಕ್ಕೆ ಸೂಚನೆ
ಜಿಲ್ಲೆಯಲ್ಲಿ ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರ ತೆರೆಯುವ ಕುರಿತು ಸರಕಾರಕ್ಕೆ ಬೇಡಿಕೆ ಸಲ್ಲಿಸಬೇಕಿದ್ದು, ತತ್‌ಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಈ ಕುರಿತು ಕ್ರಮ ಜರಗಿಸಲಾಗುವುದು.
– ಜಿ. ಜಗದೀಶ್‌, ಉಡುಪಿ ಜಿಲ್ಲಾಧಿಕಾರಿ

ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next