ಬೆಂಗಳೂರು: ಸೂಪರ್ ಮಾರ್ಕೆಟ್‌ಗಳನ್ನು ಮುಚ್ಚಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಸರ್ಕಾರದೊಂದಿಗೆ ಚರ್ಚಿಸಿ, ಅವುಗಳನ್ನು ತೆರೆಯುವ ಸಂಬಂಧ ಆದೇಶ ನೀಡಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದ ಹವಾನಿಯಂತ್ರಿತ ಸೂಪರ್ ಮಾರ್ಕೆಟ್‌ಗಳನ್ನು ಮುಚ್ಚುವುದಕ್ಕೆ ಆದೇಶ ನೀಡುತ್ತೇವೆ ಎಂದು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ್ ರಾಜು ಸೋಮವಾರ ಹೇಳಿಕೆ ನೀಡಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಆಯುಕ್ತರು ಮಾತನಾಡಿ, ಸೂಪರ್ ಮಾರ್ಕೆಟ್‌ಗಳು ಯಥಾಸ್ಥಿತಿ ಕಾರ್ಯನಿರ್ವಹಿಸಲಿವೆ ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕರಿಗೆ ಅಗತ್ಯವಸ್ತುಗಳ ಖರೀದಿಸಲು ಸೂಪರ್ ಮಾರ್ಕೆಟ್ ತೆರೆಯುವುದಕ್ಕೆ ಅವಕಾಶ ನೀಡಿ ಎಂದು ಭಾನುವಾರ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಆದೇಶಿಸಿದ್ದರು. ಸೋಮವಾರ ಬೆಳಗ್ಗೆಯಿಂದ ಸೂಪರ್ ಮಾರ್ಕೆಟ್‌ಗಳಾದ ಬಿಗ್ ಬಜಾರ್, ರಿಲಯನ್ಸ್ ಫ್ರೆಶ್, ಮೋರ್ ಸೇರಿದಂತೆ ಎಲ್ಲ ಸೂಪರ್ ಮಾರ್ಕೆಟ್‌ಗಳು ಎಂದಿನಂತೆ ವ್ಯಾಪಾರ ಪ್ರಾರಂಭಿಸಿದ್ದವು.
ಆದರೆ, ಸೋಮವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಬಿಎಂಪಿ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ್ ರಾಜು, ಕೊರೊನಾ ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿರುವ ಎಲ್ಲ ಹವಾನಿಯಂತ್ರಿತ ಸೂಪರ್ ಮಾರ್ಕೆಟ್‌ಗಳನ್ನು ಈ ಕೂಡಲೇ ಮುಚ್ಚಿಸಲು ಆದೇಶ ನೀಡುತ್ತಿದ್ದೇನೆ ಎಂದು ಹೇಳಿದ್ದರು.
ಹವಾನಿಯಂತ್ರಿತ ಸೂಪರ್ ಮಾರ್ಕೆಟ್‌ಗಳಲ್ಲಿ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುವುದರಿಂದ ಕೊರೊನಾ ಸೋಂಕು ಒಬ್ಬರಿಂದ ಮತ್ತೂಬ್ಬರಿಗೆ ಬೇಗನೆ ಹರಡುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಎಸಿ ಸೂಪರ್ ಮಾರ್ಕೆಟ್‌ಗಳನ್ನು ಮುಚ್ಚಿಸಲು ಬಿಬಿಎಂಪಿ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದಿದ್ದರು.
ಬಂದ್ ಮಾಡುವುದಿಲ್ಲ: ಸೂಪರ್ ಮಾರ್ಕೆಟ್ ಗೊಂದಲಕ್ಕೆ ತೆರೆ ಎಳೆದ ಬಿಬಿಎಂಪಿ ಆಯುಕ್ತರು, ಸಾರ್ವಜನಿಕರಿಗೆ ತೊಂದರೆ ಆಗಿರುವುದು ಗಮನಕ್ಕೆ ಬಂದಿದೆ. ಮಂಜುನಾಥ್ ರಾಜು ಅವರಿಗೆ ಮಾಲ್ ಹಾಗೂ ಸೂಪರ್ ಮಾರ್ಕೆಟ್‌ಗಳ ಕುರಿತು ನಿಖರ ಮಾಹಿತಿ ಇಲ್ಲದೆ ಆ ರೀತಿ ಹೇಳಿರಬಹುದು. ಸೂಪರ್ ಮಾರ್ಕೆಟ್ ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೊನೆಗೆ ಅಧ್ಯಕ್ಷರ ಆದೇಶ ಕುರಿತು ಸ್ಪಷ್ಟನೆ ನೀಡಿರುವ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಆಪ್ತ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳ ಆದೇಶ ಪಾಲಿಸುವುದಾಗಿ ಹೇಳಿದ್ದಾರೆ.