Advertisement

ಸ್ಟಾರ್‌ ಸುವರ್ಣದಲ್ಲಿ ಭರ್ಜರಿ ಕಾಮಿಡಿ

12:08 PM Dec 20, 2017 | |

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಇದೇ ಡಿಸೆಂಬರ್‌ 23 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಕ್ಕೆ ಹೊಸ ಕಾಮಿಡಿ ಶೋ ಶುರುವಾಗುತ್ತಿದೆ. ಅದಕ್ಕೆ ಇಟ್ಟಿರುವ ಹೆಸರು “ಭರ್ಜರಿ ಕಾಮಿಡಿ’. ಈಗಾಗಲೇ ಕಾಮಿಡಿ ರಾಜ, ರಾಣಿಯರು ಎಂದೆನಿಸಿರುವ ಕಾಮಿಡಿ ಕಲಾವಿದರೆಲ್ಲರೂ ಒಂದೇ ವೇದಿಕೆಯಲ್ಲಿ ಮೇಳೈಸಲಿದ್ದಾರೆ. ಈ “ಭರ್ಜರಿ ಕಾಮಿಡಿ’ಯ ವಿಶೇಷವೆಂದರೆ, ದೊಡ್ಡಣ್ಣ, ರಾಗಿಣಿ ಹಾಗೂ ಗುರುಪ್ರಸಾದ್‌ ಮುಖ್ಯ ಆಕರ್ಷಣೆ.

Advertisement

ಈ “ಭರ್ಜರಿ ಕಾಮಿಡಿ’ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ವೈಷ್ಣವಿ ಗೌಡ ಅವರು ವಹಿಸಿಕೊಂಡಿದ್ದಾರೆ. ಇನ್ನು, ಈ “ಭರ್ಜರಿ ಕಾಮಿಡಿ’ಯಲ್ಲಿ ನಗಿಸೋಕೆ ಸಾಕಷ್ಟು ನಟ-ನಟಿಯರಿದ್ದಾರೆ. ಮಿತ್ರ, ಪವನ್‌, ಶಾಲಿನಿ, ಸಂಜನಾ, ಸಿದ್ದು, ಅನುಪಮಾ, ಮಾಸ್ಟರ್‌ ಆನಂದ್‌ ಪುತ್ರ ಮಾಸ್ಟರ್‌ ವೀರೇನ್‌, ಮಧುಸೂದನ್‌, ನಮ್ರತಾ, ಶ್ರೇಯಾ, ದೀಕ್ಷಾ ರೈ ಇವರೆಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಒಬ್ಬೊಬ್ಬ ನಟ-ನಟಿ ಒಬ್ಬೊಬ್ಬ ಕಾಮಿಡಿ ಹುಡುಗರ ಜತೆ ವೇದಿಕೆಗೆ ಬರಲಿದ್ದಾರೆ. “ಎಲ್ಲರಿಗೂ ಒಂದಷ್ಟು ಕಷ್ಟಗಳು, ಸಮಸ್ಯೆಗಳು ಎದುರಾಗುತ್ತವೆ. ದಿನ ನಿತ್ಯ ಜಂಜಾಟದಲ್ಲೇ ಬದುಕು ಸವೆಸುವ ಜನರು ಒಂಚೂರು ನಕ್ಕರೆ ಅದೇ ನೆಮ್ಮದಿ. ಅಂತಹ ಜನರಿಗಾಗಿ “ಭರ್ಜರಿ ಕಾಮಿಡಿ’ ಮೂಡಿಬರುತ್ತಿದೆ. ಇದೊಂದು ಮನಸಾರೆ ನಗುವ ಕಾರ್ಯಕ್ರಮ. ಇಲ್ಲಿ ನಟ-ನಟಿಯರ ಜತೆಗೆ ಮಕ್ಕಳು ಮಾಡುವ ಕಿತಾಪತಿ, ಕೀಟಲೆಗಳು ಎಲ್ಲರನ್ನು ನಗಿಸುವಂತೆ ಮಾಡುತ್ತವೆ.

ಜನರನ್ನು ನಗಿಸುವುದು ಈ ಕಾರ್ಯಕ್ರಮದ ಉದ್ದೇಶ. ಉತ್ಸಾಹಿಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ನಾನು ಈ ಕಾರ್ಯಕ್ರಮ ನಡೆಸಿಕೊಡಲು ಒಪ್ಪಿದ್ದೇನೆ. ಇಲ್ಲಿ ಹಾಸ್ಯವಿದೆಯಾದರೂ, ಎಲ್ಲೂ ದ್ವಂದಾರ್ಥ ಇರುವುದಿಲ್ಲ. ನೋಡುಗರಿಗೆ ಅಸಹ್ಯ ತರುವಂತಹ ಸನ್ನಿವೇಶಗಳೂ ಬರುವುದಿಲ್ಲ. ಯಾರ ಮನಸ್ಸಿಗೂ ನೋವುಂಟು ಮಾಡುವ ಸಂದರ್ಭಗಳು ಇರುವುದಿಲ್ಲ’ ಎಂಬ ಗ್ಯಾರಂಟಿ ಕೊಡುತ್ತಾರೆ ದೊಡ್ಡಣ್ಣ.

ರಾಗಿಣಿ ಇದೇ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿಯಾಗಿದ್ದಾರೆ. ಅವರು ಈ ಕಾರ್ಯಕ್ರಮ ನಡೆಸಿಕೊಡಲು ಒಪ್ಪಿದ್ದು, ಕಾಮಿಡಿ ಹೀರೋಗಳು ಒಂದೆಡೆ ಇರುವುದಕ್ಕಂತೆ. “ನಾನಿಲ್ಲಿ ಮಾರ್ಕ್ಸ್ ಕೊಡುವುದಾಗಲಿ, ತೀರ್ಪು ನೀಡುವುದಾಗಲಿ ಮಾಡುವುದಿಲ್ಲ. ಇಲ್ಲಿ ಅಂತಹ ಯಾವುದೇ ಕೆಲಸ ಕೊಟ್ಟಿಲ್ಲ. ಆದರೆ, ವೇದಿಕೆ ಮೇಲಿನ ಹಾಸ್ಯ ನಟರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇನೆ.

Advertisement

ಈ ಮೂಲಕ ನಾನು ದೊಡ್ಡಣ್ಣ ಹಾಗು ಗುರುಪ್ರಸಾದ್‌ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇದೊಂದು ಹೊಸ ಅನುಭವ’ ಎನ್ನುತ್ತಾರೆ ರಾಗಿಣಿ. ಗುರುಪ್ರಸಾದ್‌ ಅವರಿಗೆ ಕಿರುತೆರೆಯಲ್ಲಿ ಇದು ಏಳನೇ ಕಾರ್ಯಕ್ರಮ. ಈಗಾಗಲೇ ಅವರು ನಿರೂಪಕರಾಗಿ, ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. “ಇಲ್ಲಿ “ಭರ್ಜರಿ ಕಾಮಿಡಿ’ ಕಾರ್ಯಕ್ರಮದಡಿ, ಹೊಸ ಪ್ರತಿಭೆಗಳನ್ನು ನೋಡುವ ಅವಕಾಶ ಸಿಕ್ಕಿದೆ.

ಸಿನಿಮಾ ಹಾಸ್ಯವೇ ಬೇರೆ, ಕಿರುತೆರೆಯಲ್ಲಿ ಕಾರ್ಯಕ್ರಮ ಮೂಲಕ ಪ್ರಸಾರವಾಗುವ ಹಾಸ್ಯವೇ ಬೇರೆ. ಮನೆ ಮನೆಗೂ ತಲುಪುವ ಕಾರ್ಯಕ್ರಮ ಇದಾಗಿರುವುದರಿಂದ ಇಲ್ಲಿ, ಎಲ್ಲೂ ಡಬ್ಬಲ್‌ ಮೀನಿಂಗ್‌ ಡೈಲಾಗ್‌ಗಳಿಗೆ ಅವಕಾಶವಿಲ್ಲ. ಎಲ್ಲವೂ ಹೊಸ ಶೈಲಿಯಲ್ಲಿ ಕಾಣಸಿಗಲಿದೆ. ಎಲ್ಲರೂ ಇಲ್ಲಿ ನಗಿಸೋ ಕೆಲಸಕ್ಕೆ ನಿಂತಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕೆಲಸ ನಮ್ಮದ್ದಷ್ಟೇ’ ಎಂಬುದು ಗುರು ಅಭಿಪ್ರಾಯ.

ಇಲ್ಲಿ ಮೈಸೂರಿನ ಸಿದ್ದು, ರಾಮನಾಥ್‌, ದಕ್ಷಿಣಾಮೂರ್ತಿ ಅವರು ಬರವಣಿಗೆಯ ಹಿಂದೆ ನಿಂತಿದ್ದಾರೆ. ಸುವರ್ಣ ವಾಹಿನಿಯ ನಾನ್‌ ಫಿಕ್ಷನ್‌ ಹೆಡ್‌ ತ್ಯಾಗರಾಜ್‌ ಕೂಡ ಹೊಸ ಆಯಾಮದೊಂದಿಗೆ ಈ ಕಾರ್ಯಕ್ರಮ ನಡೆಸಿಕೊಡುವ ಭರವಸೆ ಕೊಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next