Advertisement

ಬಿಸಿಲು ಮಾಳಿಗೆ

02:27 PM Apr 17, 2017 | |

ಎಪ್ಪತ್ತು ವರ್ಷಗಳಿಂದ ಕಂಡರಿಯದ ಬೇಸಿಗೆಯ ಬಿಸಿ ಈಬಾರಿ ಕಾಡುತ್ತಿದೆ. ಹೀಗಿರುವಾಗ ಸಹಜವಾಗೇ ಎಲ್ಲರಿಗೂ ಮನೆಯ ಮೇಲೆ, ಅತಿ ಹೆಚ್ಚು ಗಾಳಿ ಆಡುವ ಸ್ಥಳದಲ್ಲಿ ರಾತ್ರಿ ಮಲಗುವ ಆಸೆ ಉಂಟಾಗುವುದು ಸಹಜ. ಕೆಲವರು ಸಹಜ ಎನ್ನುವ ರೀತಿಯಲ್ಲಿ ಬೇಸಿಗೆ ಕಾಲದಲ್ಲಿ ತಾರಸಿಯ ಮೇಲೆ ಮಲಗುವುದು ಉಂಟಾದರೂ ಕೆಲವೊಂದು ಅನುಕೂಲಗಳನ್ನು ಮಾಡಿಕೊಂಡರೆ, ಮತ್ತೂ ಆರಾಮವಾಗಿ ಬಿರುಬಿಸಿಲುಗಾಲದಲ್ಲೂ ಮಲಗಬಹುದು. ಸಾಮಾನ್ಯವಾಗಿ ತಾರಸಿಗಳಲ್ಲಿ ಕಂಡುಬರದ ವಿಶೇಷಗಳನ್ನು ಈ ಬಿಸಿಲು ಮಾಳಿಗೆಯಲ್ಲಿ ನೀಡಲಾಗುವುದು. ಮಲಗಲು ಚಿಕ್ಕದಾದರೂ ಜೊಕ್ಕದಾದ ಕಟ್ಟೆಗಳು, ತಾರಸಿ ತೀರ ಬಿಸಿಯೇರದಂತೆ ತಡೆಯಲು ಒಂದಷ್ಟು ಪೆರ್ಗೊಲ ಹಾಗೂ ನೆರಳನ್ನು ನೀಡುವ ಸಾಧನಗಳು. ಜೊತೆಗೆ ಒಂದಷ್ಟು ಹಸಿರಿದ್ದರೆ, ಸ್ವತ್ಛ ಹಾಗೂ ಹಸಿರಿನ ವಾತಾವರಣದಲ್ಲಿ ಬಿಸಿಲುಗಾಲದ ಅನೇಕ ರಾತ್ರಿಗಳನ್ನು ಆರಾಮವಾಗಿ ಕಳೆಯಬಹುದು.
 
ಮಲಗುವ ಕಟ್ಟೆ ಲೆಕ್ಕಾಚಾರ
ಸಾಮಾನ್ಯವಾಗಿ ಸೂರಿನಲ್ಲಿ ಬಿದ್ದ ನೀರು ಆರಾಮವಾಗಿ ಹರಿದು ಮಳೆನೀರಿಗೆಂದು ನೀಡಿರುವ ದೋಣಿ ಕೊಳವೆಯಲ್ಲಿ ಕೆಳಗಿಳಿಯಲಿ ಎಂದು ಇಳಿಜಾರು ನೀಡುವುದು ಸಹಜ. ಹೀಗೆ ಇಳಿಜಾರಾಗಿ ಇರುವ ಸ್ಥಳದಲ್ಲಿ ಎಷ್ಟೇ 
ಮೃಧುವಾದ ಹಾಸಿಗೆಯನ್ನು ಹಾಕಿಕೊಂಡು ಮಲಗಿದರೂ ಇಳಿಜಾರಿನಿಂದಾಗಿ ಸ್ವಲ್ಪ ಕಿರಿಕಿರಿ ಆಗುವುದು ಸಹಜ. ಆದುದರಿಂದ ನಾವು ಮಲಗಲು ಬಯಸುವ ಪ್ರದೇಶವನ್ನು ಆದಷ್ಟೂ ಮಟ್ಟಸವಾಗಿ ಮಾಡಿದ್ದರೆ ಅನುಕೂಲಕರ. ಹೇಳಿಕೇಳಿ ತಾರಸಿಯ ಮೇಲೆ ಮಲಗಲು ಹೋಗುವ ಮಂದಿ, ಸ್ವಲ್ಪ ಹೊತ್ತು ಮಾತು ಕತೆ ಆಡುವುದು ಸಹಜ, ಆದುದರಿಂದ ಆರಾಮವಾಗಿ ಕೂರಲು, ಕಡೆಪಕ್ಷ ಆರು ಇಂಚಿನಷ್ಟು ಎತ್ತರದ ಕಟ್ಟೆಕಟ್ಟಿದರೆ ಸೂರಿನ ಮೇಲೊಂದು “ದಿಢೀರ್‌ ದಿವಾನ್‌’ ತಯಾರಾಗುತ್ತದೆ. ಕಟ್ಟೆಗಳನ್ನು ಹಾಸಿಗೆ ಲೆಕ್ಕದಲ್ಲಿ ಸಿಂಗಲ್‌ ಇಲ್ಲವೇ ಡಬಲ್‌ ಬೆಡ್‌ ಮಾದರಿಯಲ್ಲಿ ಮಾಡಿಕೊಳ್ಳಬಹುದು. ಸುಮಾರು ಐದು ಅಡಿ ಅಗಲ ಹಾಗೂ ಆರೂವರೆ ಅಡಿ ಉದ್ದ ಇದ್ದರೆ, ಇಬ್ಬರಿಗೆ ಧಾರಾಳವಾಗುವುದು. ಮಕ್ಕಳಿಗೂ ಕಟ್ಟೆ ಬೇಕೆಂದರೆ, ಮನೆ ಮುಂದೆ ಜಗುಲಿಗಳನ್ನು ಹಾಕುವ ರೀತಿಯಲ್ಲಿ ಅಕ್ಕಪಕ್ಕ ಇಲ್ಲ ಎದುರು ಬದಿರು ಹಾಕಬಹುದು.

Advertisement

ತಂಪು ತಾರಸಿ
ಧಾರಾಳವಾಗಿ ಗಾಳಿ ಆಡುವ ರೀತಿಯಲ್ಲಿ ಆದರೆ ಬಿಸಿಲಿನ ತೀಕ್ಷ್ಣ ಕಿರಣಗಳು ಹೆಚ್ಚು ಸಮಯ ತಾರಸಿಯನ್ನು ಬಿಸಿಯೇರಿಸದ ರೀತಿಯಲ್ಲಿ ಕಾಂಕ್ರಿಟ್‌, ಮರ ಅಥವಾ ಉಕ್ಕಿನ ಹಲಗೆಗಳನ್ನು ಬಳಸಿ ಸಾಕಷ್ಟು ನೆರಳು ಬೀಳುವ 
ರೀತಿಯಲ್ಲಿ ಪೆರ್ಗೊಲಗಳನ್ನು ವಿನ್ಯಾಸ ಮಾಡಬಹುದು. ಜೊತೆಗೆ ಈ ಪೆರ್ಗೊಲ ಮೇಲೆ ಬಳ್ಳಿಗಳನ್ನು ಹಬ್ಬಿಸಿದರೆ, ಸ್ವತ್ಛಗಾಳಿ ನಮ್ಮ ದಾಗಿಸಿಕೊಳ್ಳುವುದರ ಜೊತೆಗೆ ತಾರಸಿಯೂ ಕೂಡ ತಣ್ಣಗೆ ಇರುತ್ತದೆ.  

ದಿಕ್ಕಿನ ಲೆಕ್ಕಾಚಾರ
ಬೇಸಿಗೆಯ ಮಳೆ ಎಂದಾಕ್ಷಣ ನಮಗೆ ಮುಂಗಾರಿನ ಗಾಳಿ ಮಳೆ ನೆನಪಿಗೆ ಬರುವುದಾದರೂ ಈ ಎರಡಕ್ಕೂ ವ್ಯತ್ಯಾಸವಿದೆ. ಏಪ್ರಿಲ್‌ನಿಂದಲೇ ತಾಪಮಾನ 36 ಡಿಗ್ರಿ ಸೆಲಿÒಯಸ್‌ ಆಸುಪಾಸಿನಲ್ಲಿದ್ದು, ತೇವಾಂಶ ತೀರ ಕಡಿಮೆ ಅಂದರೆ ಪ್ರತಿಶತ ಸುಮಾರು 20 ಇರುತ್ತದೆ. ತೇವಾಂಶ ಕಡಿಮೆ ಇರಲು ಮುಖ್ಯ ಕಾರಣ ಈ ಅವಧಿಯಲ್ಲಿ ಗಾಳಿ ಈಶಾನ್ಯದಿಂದ ಬೀಸುತ್ತಿದ್ದು, ಇದು ಧೂಳಿನಿಂದ ಕೂಡಿದ್ದು, ಒಣ ಗಾಳಿಯಾಗಿರುತ್ತದೆ. ಹಾಗಾಗಿ ಈ ಕಾಲದ ಗಾಳಿ ಅಷ್ಟೊಂದು ಆರೋಗ್ಯಕರವಾಗಿರದೆ, ನಮ್ಮ ಹಿತಕ್ಕೆ ಒಂದಷ್ಟು ತೇವಾಂಶವನ್ನು ಸೇರಿಸುವುದು ಒಳ್ಳೆಯದು. ತಾರಸಿಯ ಮೇಲೆ ನೀರು ಚಿಮುಕಿಸಿದರೆ, ಅದರಲ್ಲೂ ನಿಮ್ಮ ತಾರಸಿಗೆ ಜೇಡಿಮಣ್ಣಿನ ಬಿಲ್ಲೆಗಳನ್ನು ಹಾಕಿದ್ದರೆ- ಮಡಿಕೆಯಲ್ಲಿ ಇಟ್ಟ ನೀರಿನಂತೆ ಹಲವು ಗಂಟೆಗಳ ಕಾಲ ಪರಿಸರವನ್ನು ತಂಪಾಗಿಸಿಡುತ್ತದೆ.

ಗಿಡ, ಬಳ್ಳಿಗಳಿಗೂ ಒಂದಷ್ಟು ನೀರು ಸಿಂಪಡಿಸಿದರೆ, ನಾವು ಮಲಗುವ ಹೊತ್ತು ವಾತಾವರಣ ಧೂಳಿನಿಂದ ದೂರ ಉಳಿಯುವುದರ ಜೊತೆಗೆ ತೇವಾಂಶ ಪ್ರತಿಶತ 50 ಆಸುಪಾಸಿಗೆ ತಲುಪಲು ಅನುಕೂಲಕರ. ನಾವು ಮಲಗುವ ವೇಳೆ, ಹಿಂಗಾರಿನ ಗಾಳಿಗೆ ನೇರವಾಗಿ ತೆರೆದುಕೊಳ್ಳುವ ಬದಲು, “ಇನ್‌ಡೈರೆಕ್ಟ್ ವೆಂಟಿಲೇಷನ್‌’ ರೀತಿಯಲ್ಲಿ ಗಾಳಿಯ ಬೀಸಿನ ಲಾಭ ಪಡೆದುಕೊಳ್ಳುವುದು ಒಳ್ಳೆಯದು. ಸಾಮಾನ್ಯವಾಗಿ ನಾಲ್ಕಾರು ಪಾಟೆಡ್‌ ಪ್ಲಾಂಟ್ಸ್‌- ಹೂಕುಂಡದಲ್ಲಿ ಬೆಳೆಸಿದ ಗಿಡಗಳು ಇಲ್ಲವೇ ಟ್ರೆಲಿಸ್‌- ಗೋಡೆಯಂತೆ ಬೆಳೆಸಿದ ಬಳ್ಳಿಗಳ ಮೂಲಕ ಹಾದು ಬರುವ ಗಾಳಿ ಹೆಚ್ಚು ಆರೋಗ್ಯಕರ. 

ಬೇಸಿಗೆ ಮಳೆಯಿಂದ ರಕ್ಷಣೆ
ಈ ಕಾಲದಲ್ಲಿ ಮಳೆ ಬೀಳುವ ಮೊದಲು ಸಾಕಷ್ಟು ಮುನ್ಸೂಚನೆ ನೀಡಿಯೇ ಬೀಳುವುದು. ಗುಡುಗು ಸಿಡಿಲಂತೂ ಸಾಮಾನ್ಯ. ಹಾಗಾಗಿ ಆಕಾಶದಲ್ಲಿ ವಿದ್ಯುತ್‌ ಚಟುವಟಿಕೆ ಬಿರುಸಿನಿಂದ ಕೂಡಿದ್ದರೆ, ತಾರಸಿಯ ಮೇಲೆ ಮಲಗುವುದನ್ನು ತಪ್ಪಿಸಬಹುದು. ಆದರೆ ಸಾಮಾನ್ಯವಾಗಿ ನೀವೂ ಅನುಭವಿಸಿರುವ ಹಾಗೆ, ಮಳೆ ಬೀಳುವ ಮೊದಲೇ ನಮಗೆ ಶಾಖದ ಕಿರಿಕಿರಿ ಹೆಚ್ಚಾಗುವುದು. ಹೀಗಾಗಲು ಮುಖ್ಯ ಕಾರಣ- ಮಳೆ ಬರುವ ಮೊದಲು ದಿಢೀರನೆ ಗಾಳಿಯಲ್ಲಿನ ತೇವಾಂಶ ಉಲ್ಬಣಗೊಳ್ಳುತ್ತದೆ. ಈ ಕಾರಣದಿಂದಾಗೇ ನಾವು ಮಳೆ ಬರುವ ಸೂಚನೆ ಇದ್ದರೂ ಮನೆಯೊಳಗೆ ಇರಲಾಗದೇನೋ ಎಂದೆನಿಸಿ ತಾರಸಿಯ ಮೇಲೆ ಮಲಗಲು ನಿರ್ಧರಿಸುವುದು.

Advertisement

ಮಲಗಿದ ನಂತರ ಒಂದೆರಡು ಗಂಟೆಗಳಾದ ಮಳೆ ಹನಿಯಲು ತೊಡಗಿದರೆ, ನಿದ್ರೆಕಣ್ಣಿನಲ್ಲಿ ಹಾಸಿಗೆ ಮತ್ತೂಂದನ್ನು ಹೊತ್ತು ಮನೆಯ ಒಳಗೆ ಬರುವುದು ಕಷ್ಟವಾಗಬಹುದು. ಆದುದರಿಂದ ಬಿಸಿಲು ಮಾಳಿಗೆಯ ಒಂದೆಡೆ, ಸಾಮಾನ್ಯವಾಗಿ ತಾರಸಿಗೆ ಪ್ರವೇಶ ಕಲ್ಪಿಸುವ ಬಾಗಿಲಿನ ಕಡೆ, ಮೂರು ನಾಲ್ಕು ಅಡಿ ಸಜಾj ಚಾಚುಗಳನ್ನು ನೀಡಿದರೆ, ಹಾಸಿಗೆ ಅತ್ತ ಕಡೆ ಎಳೆದುಕೊಂಡು ಸಾಮಾನ್ಯ ಮಳೆಯಾದರೆ, ಅದನ್ನೂ ಸವಿದು ಮಲಗಬಹುದು. ಮಳೆ ಹೆಚ್ಚಾದರೆ, ಅನಿವಾರ್ಯವಾಗಿ ಒಳಗೆ ಹೋಗಲೂ ಕೂಡ ಈ ಸ್ಥಳ ಅನುಕೂಲಕರ.

ಚಳಿಗಾಲದಲ್ಲಿ ಬೆಚ್ಚನೆಯ ಮನೆಯನ್ನು ಬಯಸುವ ಹಾಗೆಯೇ ಬೇಸಿಗೆಯಲ್ಲಿ ತಂಪಾಗಿರುವ ಸ್ಥಳವನ್ನು ಬಯಸುವುದು ಸಹಜ. ಅದರಲ್ಲೂ ಮಲಗುವ ವೇಳೆ ವಾತಾವರಣ ಪೂರಕವಾಗಿರದಿದ್ದರೆ, ಬೆಳಗ್ಗೆ ಆ ಒಂದು ತಾಜಾತನ ಇಲ್ಲದೆ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರಿಕಿರಿಯಾಗುವುದು ಖಂಡಿತ. ಆದುದರಿಂದ ಹೆಚ್ಚು ಖರ್ಚು ಇಲ್ಲದೆ, ನಿಮ್ಮ ಮನೆಗೊಂದು ಬಿಸಿಲು ಮಾಳಿಗೆಯನ್ನು ಮಾಡಿಕೊಂಡರೆ, ಎಂಥ ಬಿರುಬೇಸಿಗೆಯಲ್ಲೂ ತಣ್ಣಗೆ ಮಲಗಬಹುದು.
 
ಹೆಚ್ಚಿನ ಮಾಹಿತಿಗೆ ಪೋನ್‌ 98441 32826

ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next