Advertisement

ಬೇಸಿಗೆ ಮೊದಲೇ ನೀರಿಗೆ ಹಾಹಾಕಾರಕ್ಕೆ ಸದಸ್ಯರ ತಳಮಳ

03:45 AM Feb 09, 2017 | Team Udayavani |

ವಿಧಾನಸಭೆ: ರಾಜ್ಯದಲ್ಲಿ ಬೇಸಿಗೆಗೆ ಮೊದಲೇ ಕುಡಿಯುವ ನೀರಿಗೆ ಉಂಟಾಗಾಗಿರುವ ಹಾಹಾಕಾರ ಕುರಿತು ಬುಧವಾರ ಗಂಭೀರ ಚರ್ಚೆ ನಡೆದು, ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಮೇವು ಪೂರೈಕೆಗೆ ತೊಂದರೆಯಾಗದಂತೆ ಈಗಿನಿಂದಲೇ ಸಮರೋಪಾದಿಯಲ್ಲಿ ಸಜ್ಜಾಗಬೇಕು ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಒತ್ತಾಯಿಸಿದರು.

Advertisement

ಪ್ರಶ್ನೋತ್ತರ ವೇಳೆಯಲ್ಲಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಬಿಜೆಪಿಯ ಗೋವಿಂದ ಕಾರಜೋಳ ಅವರ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ಉತ್ತರಿಸಿದ ಸಂದರ್ಭದಲ್ಲಿ ಧ್ವನಿಗೂಡಿಸಿದ ಸದಸ್ಯರು, ರಾಜ್ಯದೆಲ್ಲೆಡೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದ್ದು ಶಾಸಕರ ಅಧ್ಯಕ್ಷತೆಯ ಕಾರ್ಯಪಡೆಗೆ ಕನಿಷ್ಠ 1 ಕೋಟಿ ರೂ. ಒದಗಿಸಬೇಕು ಎಂದು ಆಗ್ರಹಿಸಿದರು.

ಬರಪೀಡಿತ ಎಂದು ಘೋಷಣೆಯಾಗಿರುವ ತಾಲೂಕುಗಳಿಗೆ 60 ಲಕ್ಷ ರೂ.,  ಇತರೆ ತಾಲೂಕುಗಳಿಗೆ 40 ಲಕ್ಷ ರೂ. ಕುಡಿಯುವ ನೀರಿಗೆ ನೀಡಲಾಗಿದೆ. ಆದರೆ, ಆ ಹಣ ಏನೇನೂ ಸಾಲುತ್ತಿಲ್ಲ.  ಈಗಾಗಲೇ ನಮ್ಮ ಕ್ಷೇತ್ರಗಳಲ್ಲಿ 1 ರಿಂದ 1.50 ಕೋಟಿ ರೂ. ವರೆಗೆ ವೆಚ್ಚ ಮಾಡಲಾಗಿದೆ. ಬರ ಪರಿಹಾರ ಕಾಮಗಾರಿಗಳಿಗೆ ಹಣ ಬಿಡುಗಡೆಯಲ್ಲಿ ಕಂಡೀಷನ್‌, ಲಿಮಿಟ್‌ ಹಾಕಬೇಡಿ ಎಂದು ಒಕ್ಕೊರಲ ಒತ್ತಾಯ ಮಾಡಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ರಾಜ್ಯದಲ್ಲಿ ಎಲ್ಲಿಯೂ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಂಡಿಲ್ಲ.  ಏನೇ ಕೇಳಿದರೂ ಜಿಲ್ಲಾಧಿಕಾರಿಗಳು ಕೈ ಚೆಲ್ಲುತ್ತಾರೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಯ ಸಿ.ಟಿ.ರವಿ, ಕುಡಿಯುವ ನೀರು ಪೂರೈಕೆಗೆ 40 ಲಕ್ಷ ರೂ. ಯಾವುದಕ್ಕೂ ಸಾಲುವುದಿಲ್ಲ. ಜಿಲ್ಲಾಧಿಕಾರಿಗಳನ್ನು ಕೇಳಿದರೆ ಲಿಮಿಟ್‌ ಎಂದು ಹೇಳುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ 1.50 ಕೋಟಿ ರೂ. ಮೊತ್ತದ ಕೆಲಸ ಆಗಿದೆ. ನಮ್ಮ ವಿಶ್ವಾಸಕ್ಕೆ ಗುತ್ತಿಗೆದಾರರು ಕೆಲಸ ಮಾಡಿದ್ದಾರೆ.  ಇದೀಗ ಅವರಿಗೆ ಹಣ ಕೊಡಲಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು. 

Advertisement

ಜೆಡಿಎಸ್‌ನ ಶಿವಲಿಂಗೇಗೌಡ, ಮಂಜುನಾಥಗೌಡ, ರಮೇಶ್‌ಬಂಡೆಸಿದ್ದೇಗೌಡ ಸಹ ಇದಕ್ಕೆ ಧ್ವನಿಗೂಡಿಸಿದರು.
ಇದಕ್ಕೂ ಮುನ್ನ ಗೋವಿಂದ ಕಾರಜೋಳ ಅವರು, ರಾಜ್ಯದಲ್ಲಿ ಎಷ್ಟು ಬೋರ್‌ವೆಲ್‌ ಕೊರೆದಿದ್ದೀರಿ, ಎಷ್ಟರಲ್ಲಿ ನೀರು ಸಿಕ್ಕಿದೆ.  ಈಗಾಗಲೇ ಇರುವ ಬೋರ್‌ವೆಲ್‌ಗ‌ಳ ಸಂಖ್ಯೆ ಎಷ್ಟು, ಎಷ್ಟರಲ್ಲಿ ನೀರು ಬತ್ತಿದೆ. ಎಷ್ಟು ಕಿರು ನೀರು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಶುದ್ಧ ಕುಡಿಯುವ ನೀರಿನ ಘಟಕಗಳು ಎಷ್ಟು ಕೆಟ್ಟಿವೆ ಎಂಬುದರ ಬಗ್ಗೆ ಮಾಹಿತಿ ಕೊಡಿ ಎಂದು ಆಗ್ರಹಿಸಿದರು.

ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ಸದಸ್ಯ ಎಚ್‌.ಕೆ.ಪಾಟೀಲ್‌, ರಾಜ್ಯದಲ್ಲಿ 7390 ಗ್ರಾಮಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನೂ 6935 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದನ್ನು ಪತ್ತೆ ಹಚ್ಚಲಾಗಿದೆ. ತೀವ್ರ ಸಮಸ್ಯೆ ಇರುವ 496 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಒಟ್ಟಾರೆ ನೀರು ಪೂರೈಕೆಗೆ ತೊಂದರೆಯಾಗದಂತೆ 622 ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಕುಡಿಯುವ ನೀರಿಗೆ ತೊಂದರೆ ಇಲ್ಲದಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಶಾಸಕರ ಅಧ್ಯಕ್ಷತೆಯ ಕಾರ್ಯಪಡೆಗೆ ಕೊಟ್ಟಿರುವ ಹಣ ವೆಚ್ಚ ಆಗಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಇಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲೂ ಬರ ಪರಿಹಾರಕ್ಕೆ ಹೆಚ್ಚು ಹಣ ಕೊಡಬೇಕು ಎಂಬ ಪ್ರಸ್ತಾಪವಾಗಿದೆ.  ಈಗಾಗಲೇ ಕೊಟ್ಟಿರುವ 60 ಲಕ್ಷ ರೂ., 40 ಲಕ್ಷ ರೂ. ವೆಚ್ಚವಾಗಿದ್ದರೆ  ಎರಡನೇ ಕಂತಿನ ಹಣ ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next