Advertisement
ಗಣಹೋಮದ ವೇಳೆ ಮಾಡುವ ಪಂಚಕಜ್ಜಾಯಕ್ಕೆ 8 ಗಂಟಿನ ಕಬ್ಬು ಬೇಕು. ಇದನ್ನು ಸುಲಿದ ಸಿಪ್ಪೆ ಗಣ ಹೋಮಕ್ಕೇ ಸಮರ್ಪಿಸಬೇಕು. ಕಬ್ಬು ಬೆರೆಸಿ ಮಾಡಿದ ಕಜ್ಜಾಯ ಹೋಮಕ್ಕೆ ನೀಡಬೇಕು. ಗಣಪತಿಯ ರಂಗ ಪೂಜೆಗೆ 21 ಗಂಟಿನ ಕಬ್ಬು ನೈವೇದ್ಯವಾಗಬೇಕು. ಮಧೂರು ಮಹಾಗಣಪತಿಗೆ ಮೂಡಪ್ಪ ಸೇವೆ ಮಾಡಿದ ವೇಳೆ ಕಬ್ಬಿಗೆ ಅತೀ ಪ್ರಾಮುಖ್ಯತೆ ದೊರೆತಿತ್ತು. ಗಣಪತಿಯ ವಿಗ್ರಹದ ಸುತ್ತಲೂ ಕಬ್ಬಿನ ಆವರಣವನ್ನು ರಚಿಸಿ ಇದರ ಒಳಭಾಗದಲ್ಲಿ ವಿಗ್ರಹದ ಕುತ್ತಿಗೆ ವರೆಗೂ ವಿಶೇಷ ದ್ರವ್ಯಗಳಿಂದ ತಯಾರಿಸಿದ ಅಪ್ಪಗಳನ್ನು ತುಂಬಿಸಿ ಒಂದು ರಾತ್ರಿ ಇರಿಸಿ ಮರುದಿನ ಪ್ರಸಾದ ರೂಪದಲ್ಲಿ ಅಪ್ಪ ಹಾಗೂ ಕಬ್ಬನ್ನು ವಿತರಿಸಲಾಗಿತ್ತು. ಅಂತು ಗಣ ಹೋಮದಿಂದ ಮೊದಲ್ಗೊಂಡು ಮೂಡಪ್ಪ ಸೇವೆ ವರೆಗಿನ ಅತೀ ವಿಶೇವಾದ ಗಣಪತಿ ಆರಾಧನೆಗೆ ಕಬ್ಬು ಬೇಕೇ ಬೇಕು.
ಈ ಭಾಗದಲ್ಲಿ ಆ ಕಾಲದಲ್ಲಿ ಬೆಲ್ಲದ ಆಲೆ ಮನೆಗಳೇ ತುಂಬಿದ್ದುವು. ಇಲ್ಲಿಂದ ಬೆಲ್ಲ ದೂರದ ಊರಿಗೂ ಹೋಗುತ್ತಿತ್ತು.
Related Articles
Advertisement
ಕಬ್ಬು ಭಾರತೀಯ ಮೂಲದ್ದು. ಇಲ್ಲಿಂದಲೇ ಕಬ್ಬು ಇತರ ರಾಷ್ಟ್ರಗಳಿಗೆ ಸಾಗಿ ಅಲ್ಲಿ ಕೃಷಿ ಪ್ರಾರಂಭಿಸಲಾಗಿತ್ತು. ವೇದ ಕಾಲದಲ್ಲೇ ಇದರ ಇರುವು ಇತ್ತು ಎಂದು ಶಾಸ್ತ್ರ ಹೇಳುತ್ತದೆ. ಅಂದೇ ಕಬ್ಬಿನ ಔಷಧೀಯ ಗುಣವನ್ನು ಕಂಡಿದ್ದರು. ಅತರ್ವಣ ವೇದ, ಅಮರಕೋಶ, ಕೌಟಿಲ್ಯನ ಅರ್ಥ ಶಾಸ್ತ್ರದಲ್ಲಿ ಕಬ್ಬಿನ ಔಷಧೀಯ ಗುಣಗಳನ್ನು ತಿಳಿಸಲಾಗಿದೆ. ಎ, ಬಿ, ಸಿ ಜೀವಸತ್ವ ಇದರಲ್ಲಿ ಅಡಕವಾಗಿದ್ದು ಚರ್ಮರೋಗ, ಸಾಂಕ್ರಾಮಿಕ ರೋಗ, ಕಣ್ಣಿನ ತೊಂದರೆ, ಶರೀರ ಬೆಳವಣಿಗೆಗೆ ಸ್ನಾಯು ದೌರ್ಬಲ್ಯ, ಹೃದಯ ಮತ್ತು ಮೆದುಳು ಚುರುಕುಗೊಳಿಸುವುದು, ನರಮಂಡಲದ ಕೆಲಸ ಸರಿಮಾಡುವುದು, ವಸಡು ಮತ್ತು ಎಲುಬು ಗಟ್ಟಿ ಮಾಡಿ ಹಲ್ಲುಗಳನ್ನು ಹೊಳೆಯುವಂತೆ ಮಾಡುವುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಜೀವ ಸತ್ವಗಳನ್ನು ಸರಿಪಡಿಸುವುದು.
ಡಾ|ಎ.ಡಿ.ಧಾರವಾಡ ಅವರು ತಿಳಿಸುವಂತೆ ಜ್ವರ, ನೀರಡಿಕೆ, ಗೊನೋರಿಯಾ, ಕೆಮ್ಮು, ಮಲಬದ್ಧತೆ, ವಾತ, ಎದೆ ಉರಿ, ಅಸಿಡಿಟಿ, ಜಠರ ವೃಣ, ಮರೆವು, ಮಕ್ಕಳಾಗದಿರುವುದು ಮುಂತಾದ ತೊಂದರೆಗಳಲ್ಲಿ ತಾಜಾ ಕಬ್ಬಿನ ಹಾಲು, ಲಿಂಬೆ ರಸ, ಹಸಿ ಶುಂಠಿ ರಸ ಮತ್ತು ಎಳ ನೀರು ಬೆರೆಸಿ ಕುಡಿದರೆ ಉತ್ತಮ ಪರಿಹಾರ ಸಿಗುತ್ತದೆ. ಕಬ್ಬಿನ ಉದ್ದ ಎಲೆಯ ಮೇಲೆ ಶೇಖರಿಸಿದ ಇಬ್ಬನಿ ನೀರು ಕಣ್ಣು ಪೊರೆ, ಕಣ್ಣು ರೆಪ್ಪೆಯ ಒರಟುತನ ಹಾಗೂ ಇರುಳುಗಣ್ಣು ಮುಂತಾದ ದೃಷ್ಟಿ ದೋಷಗಳಿಗೆ ಉತ್ತಮವಾಗಿದೆ. ಕಣ್ಣಿನ ಶ್ರಮ ಪರಿಹರಿಸಲು ಕಬ್ಬು ಉತ್ತಮ ಔಷಧ. ಕಾಮಾಲೆ ರೋಗದವರಿಗೆ ಕಬ್ಬಿನ ಹಾಲು ರಾಮಬಾಣ. ಪ್ರತಿದಿನ ಕುಡಿಯುವುದರಿಂದ ಯಕೃತ್ತಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ತೆರೆದ ಹವೆಯಲ್ಲಿ ರಾತ್ರಿ ಕಬ್ಬು ಇರಿಸಿ ಮುಂಜಾನೆ ಹಲ್ಲಿನಿಂದ ಸಿಪ್ಪೆ ಸುಲಿದು 2-3 ವಾರ ತಿಂದರೆ ಕಾಮಾಲೆ ರೋಗ ಪೂರ್ತಿ ಗುಣವಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಗ್ವಾಯಿಟರ್, ಅಜೀರ್ಣ, ಗರ್ಭಿಣಿಯರ ಅಶಕ್ತತೆ, ಚಿಕ್ಕ ಮಕ್ಕಳ ಮೆದುಳು ತೊಂದರೆ, ಹೃದಯ ನೋವು, ತಲೆನೋವು, ಬಂಜೆತನ, ಮಾಸಿಕ ಋತು ಸ್ರಾವದ ನೋವು ಮತ್ತು ನರಗಳ ತೊಂದರೆ ನಿವಾರಣೆಗೆ ಕಬ್ಬಿನ ಹಾಲು ಉತ್ತಮ. ಕಬ್ಬಿನ ಹಾಲನ್ನು ಹಾಲಿನೊಂದಿಗೆ ಕುಡಿದರೆ ದೇಹದ ಕಾಂತಿ ಹೆಚ್ಚುವುದು ಮಾತ್ರವಲ್ಲ ಸುಖನಿದ್ರೆ ಬರುವುದು. ಪಿತ್ತ ವಾಂತಿಯಲ್ಲಿ ಒಂದು ಗ್ಲಾಸ್ ಕಬ್ಬಿನ ಹಾಲಿಗೆ ಎರಡು ಚಮಚ ಜೇನು ತುಪ್ಪ ಬೆರೆಸಿ ಕುಡಿದರೆ ಉಪಶಮನ ದೊರೆಯುತ್ತದೆ.
ಕಾಸರಗೋಡಿಗೆ ಕಬ್ಬು ಕರ್ನಾಟಕದಿಂದಕಾಸರಗೋಡಿಗೆ ಕಬ್ಬು ಬರುತ್ತಿರುವುದು ಕರ್ನಾಟಕದಿಂದ. ಮಂಡ್ಯ ಜಿಲ್ಲೆಯ ಕಬ್ಬು ಸಕ್ಕರೆಗಾಗಿ ಮಾತ್ರ ಉಪಯೋಗವಾಗುತ್ತಿದ್ದು ಹಾಸನ ಜಿಲ್ಲೆಯ ಹೊಳೆನರಸೀಪುರ ಮತ್ತು ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯಿಂದ ಇಲ್ಲಿಗೆ ಕಬ್ಬು ಬರುತ್ತಿದೆ. ಇಲ್ಲಿಂದ ಬರುವ ಕಬ್ಬು ಫರಂ ಕಬ್ಬು ಮತ್ತು ಪಟುವಾಳಿ ಕಬ್ಬು ಎಂದು ಹೆಸರಿಡಲಾಗಿದೆ. ಫರಂ ಕಬ್ಬು ಸ್ವಲ್ಪ ಕೆಂಪು, ದಪ್ಪ ಮತ್ತು ಉದ್ದನೆಯದ್ದಾಗಿದ್ದರೆ ಪಟುವಾಳಿ ಕಬ್ಬು ಹಸಿರು ನಾಮ ಹೊಂದಿಸಲ್ಪಟ್ಟು ಗಿಡ್ಡ ವಾದದ್ದು. ಇವು ಕಬ್ಬಿನ ಹಾಲು ತೆಗೆಯಲು ಉಪಯೋಗವಾಗುವವುಗಳು. ಇದನ್ನು ಹೊರತು ಪಡಿಸಿ ಮಂಗಳೂರು ತೊಕ್ಕೊಟ್ಟು ಒಳಭಾಗದಲ್ಲಿ ಕೇಜಿ ಕಬ್ಬು ಬೆಳೆಸಲಾಗುತ್ತಿದ್ದು, ಕಪ್ಪು ಹೊರ ಮೈಯ್ಯ ಈ ಕಬ್ಬು ಕೂಡ ಕಬ್ಬಿನ ಹಾಲು ತೆಗೆಯಲೇ ಬಳಸಲಾಗುತ್ತಿದೆ. ಈ ಮೂರು ಕಬ್ಬುಗಳು ಚೌತಿ ಹಬ್ಬದ ವೇಳೆ ಸುಳಿ ಕಬ್ಬು ರೂಪ ತಾಳಿ ಬರುತ್ತದೆ. ಸಾಮಾನ್ಯ ಚೌತಿ ವೇಳೆಗೆ ಕಾಸರಗೋಡು ವ್ಯಾಪ್ತಿಯಲ್ಲಿ ಸುಮಾರು 5,000 ಸುಳಿ ಕಬ್ಬು ವಿಕ್ರಯವಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ. ಸಾಮಾನ್ಯ ಇತರ ದಿನಗಳಲ್ಲಿ ವಾರಕ್ಕೆ 1,200 ಕಟ್ಟ (ಒಂದು ಕಟ್ಟದಲ್ಲಿ 18 ಕಬ್ಬುಗಳು) ಕಬ್ಬು ಈ ಭಾಗದಲ್ಲಿ ಕಬ್ಬಿನ ಹಾಲು ತೆಗೆಯಲು ಬಳಸಲಾಗುತ್ತಿದ್ದು, ಚೌತಿ ದಿನಕ್ಕೆ 5,000 ಹೆಚ್ಚುವರಿ ಕಬ್ಬು ಬೇಕಾಗುತ್ತದೆ. ಚೌತಿಯ ವೇಳೆ ಒಂದು ಕಬ್ಬು ರೂ. 50ರಂತೆ ವಿಕ್ರಯಿಸುತ್ತಾರೆ. ಸುಳಿ ಕಬ್ಬು ಪಡೆಯುವವರು ಕಮ್ಮಿಯಲ್ಲಿ ಒಂದು ಕಟ್ಟ ಕಬ್ಬನ್ನು ಖರೀದಿಸುತ್ತಾರೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ. ಮಂಗಳೂರು ಭಾಗದಲ್ಲಿ ಚೌತಿಯ ದಿನದಂದು ಅನೇಕರು ಕಟ್ಟದಷ್ಟು ಕಬ್ಬು ಖರೀದಿಸಿ ಮನೆಯಲ್ಲಿ ಹಲ್ಲಿನಿಂದ ಸುಲಿದು ಕಬ್ಬು ತಿನ್ನುತ್ತಾರೆ ಅನ್ನುವ ಮಾಹಿತಿಯಿದೆ. ಇದು ಒಂದು ಸಂಪ್ರದಾಯ. ಆ ದಿನ ಮನೆಗೆ ಬಂದವರಿಗೂ ಕಬ್ಬಿನ ತುಂಡುಗಳನ್ನು ನೀಡಿ ತಿನ್ನಿಸುತ್ತಾರಂತೆ. ಈ ಸಂಪ್ರದಾಯ ಹಿಂದಿನ ಕಾಲದಲ್ಲಿ ಇದ್ದಷ್ಟು ಇಲ್ಲದಿದ್ದರೂ ಇದು ಪೂರ್ತಿ ನಿಂತಿಲ್ಲ ಎಂದು ಹೇಳಲಾಗುತ್ತಿದೆ. ಗಣಪತಿಯ ನೆನಪು ಈ ರೀತಿಯಲ್ಲಿ ಮಾಡುವುದು ಇವರ ಉದ್ದೇಶವಾಗಿರಬೇಕು. ಚಿತ್ರ, ಬರಹ : ರಾಮದಾಸ್ ಕಾಸರಗೋಡು