Advertisement

ಕೆಪಿಎಲ್‌ 6ನೇ ಆವೃತ್ತಿಗೆ ಯಶಸ್ವಿ ತೆರೆ

06:15 AM Oct 07, 2017 | Team Udayavani |

ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) 6ನೇ ಆವೃತ್ತಿ ಅಂತ್ಯಗೊಂಡಿದೆ. ಟೂರ್ನಿಯ 2 ಪಂದ್ಯಗಳು ಬೆಂಗಳೂರಿನಲ್ಲಿ, 12 ಪಂದ್ಯಗಳು ಮೈಸೂರಿನಲ್ಲಿ ಜರುಗಿದರೆ, ಹುಬ್ಬಳ್ಳಿ ಚರಣದಲ್ಲಿ 10 ಪಂದ್ಯಗಳು ನಡೆದಿವೆ. 3 ಬಾರಿ ಕೆಪಿಎಲ್‌ ಫೈನಲ್‌ಗೆ ಆತಿಥ್ಯ ನೀಡಿದ ಶ್ರೇಯಸ್ಸು ವಾಣಿಜ್ಯ ನಗರ ಹುಬ್ಬಳ್ಳಿಗೆ ಸಂದಿದೆ. ವರ್ಷದಿಂದ ವರ್ಷಕ್ಕೆ ಕೆಪಿಎಲ್‌ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿವೆ. ಈ ಬಾರಿ ಟೂರ್ನಿಯ ಪಂದ್ಯಗಳು ಸ್ಟಾರ್‌ ನ್ಪೋರ್ಟ್ಸ್ನಲ್ಲಿ ಬಿತ್ತರಗೊಂಡಿದ್ದು ವಿಶೇಷ.

Advertisement

ವೀಕ್ಷಕ ವಿವರಣೆ ನೀಡಲು ಚಾರು ಶರ್ಮಾ ಅವರೊಂದಿಗೆ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರಾದ ಮೈಕಲ್‌ ಹಸ್ಸಿ, ಬ್ರೆಟ್‌ ಲೀ, ಡೇನಿಯಲ್‌ ವೆಟ್ಟೋರಿ ಪಾಲ್ಗೊಂಡಿದ್ದರು. ಮೊಹಮ್ಮದ್‌ ತಹಾ, ಎಸ್‌.ಅರವಿಂದ ಸೇರಿದಂತೆ ಹಲವು ಕ್ರಿಕೆಟಿಗರು ವೀಕ್ಷಕ ವಿವರಣೆಯಲ್ಲಿ ಪಾಲ್ಗೊಂಡರು. ಪಂದ್ಯಗಳು ಸ್ಟಾರ್‌ ನ್ಪೋರ್ಟ್ಸ್ ನಲ್ಲಿ ಪ್ರಸಾರಗೊಂಡಿದ್ದು ಕೆಪಿಎಲ್‌ ಇಮೇಜ್‌ ಇನ್ನಷ್ಟು ಹೆಚ್ಚಿಸಿತು.

ಪ್ರೇಕ್ಷಕರಿಗೆ ಕೊರತೆ ಇರಲಿಲ್ಲ: ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗ್ಯಾಲರಿ ನಿರ್ಮಿಸುವ ಮೊದಲ ಹಂತದ ಕಾರ್ಯ ಭರದಿಂದ ಸಾಗಿದ್ದು, ಕ್ರೀಡಾಂಗಣ ಹೊಸ ಮೆರಗು ಪಡೆದುಕೊಳ್ಳುತ್ತಿದೆ. ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಿದ್ದರಿಂದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ರಾತ್ರಿ ಪಂದ್ಯ ಮುಗಿದ ನಂತರ ವಿವಿಧ ಬಡಾವಣೆಗಳಿಗೆ ಕೆಎಸ್‌ಆರ್‌ಟಿಸಿ ವತಿಯಿಂದ ಬಸ್‌ ಸೇವೆ ವ್ಯವಸ್ಥೆ ಮಾಡಲಾಗಿತ್ತು. ಫೈನಲ್‌ ಪಂದ್ಯ ವೀಕ್ಷಣೆಗೆ ಸುಮಾರು 15,000 ಪ್ರೇಕ್ಷಕರು ಆಗಮಿಸಿದ್ದರು.

ಈ ಬಾರಿಯ ಕೆಪಿಎಲ್‌ ರಾಜ್ಯ ತಂಡಕ್ಕೆ, ಐಪಿಎಲ್‌ಗೆ ಆಯ್ಕೆಯಾಗುವ ದಿಸೆಯಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಹುಡುಗರಿಗೆ ಉತ್ತಮ ವೇದಿಕೆಯನ್ನು ಒದಗಿಸಿತು. ಮೊದಲ ಬಾರಿ ಕೆಪಿಎಲ್‌ ಆಡುತ್ತಿರುವ ಹಲವು ಉದಯೋನ್ಮುಖ ಆಟಗಾರರು ಅದ್ಭುತ ಕೌಶಲ್ಯ ಪ್ರದರ್ಶಿಸಿ ಗಮನ ಸೆಳೆದರು. ಆಯ್ಕೆದಾರರು ಕ್ರೀಡಾಂಗಣಕ್ಕೆ ಆಗಮಿಸಿ ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳ ಪ್ರದರ್ಶನವನ್ನು ವೀಕ್ಷಿಸಿದರು. 

ಡಬಲ್‌ ಹ್ಯಾಟ್ರಿಕ್‌: ಹುಬ್ಬಳ್ಳಿ ಟೈಗರ್ ತಂಡದ ವಿರುದ್ಧ ಬೆಳಗಾವಿ ಪ್ಯಾಂಥರ್ನ ಬೌಲರ್‌ಗಳಾದ ಆನಂದ ದೊಡ್ಡಮನಿ ಹಾಗೂ ಅವಿನಾಶ್‌ ಹ್ಯಾಟ್ರಿಕ್‌ ಸಾಧನೆ ಮಾಡುವ ಮೂಲಕ ಒಂದೇ ಇನಿಂಗ್ಸ್‌ನಲ್ಲಿ 2 ಹ್ಯಾಟ್ರಿಕ್‌ಗಳಿಸಿ ಮಿಂಚಿದರು. ಲೀಗ್‌ ಹಂತದಲ್ಲಿ ನಮ್ಮ ಶಿವಮೊಗ್ಗ ತಂಡದ ವಿರುದ್ಧ ಮಾಜಿ ಚಾಂಪಿಯನ್‌ ಮೈಸೂರು ವಾರಿಯರ್ ತಂಡ ಕೆಪಿಎಲ್‌ ಆವೃತ್ತಿಯಲ್ಲಿ ಅತೀ ಕನಿಷ್ಠ 52 ರನ್‌ ದಾಖಲಿಸಿತು. 

Advertisement

ಮಳೆಯ ಕಿರಿಕಿರಿ: ಹುಬ್ಬಳ್ಳಿಯಲ್ಲಿ ಕಳೆದ 3 ವರ್ಷಗಳಿಂದ ಬರದ ಸ್ಥಿತಿ ಇರುವುದರಿಂದ ಮಳೆ ಕೆಪಿಎಲ್‌ಗೆ ಅಡ್ಡಿಯಾಗಿರಲಿಲ್ಲ. ಈ ಬಾರಿ ಮಳೆ ಕೊರತೆಯಿಂದಾಗಿ ಧಾರವಾಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಕೈಗೊಂಡಿದ್ದರಿಂದ ಮಳೆಯಿಂದ ಪಂದ್ಯಗಳಿಗೆ ತಡೆಯುಂಟಾಯಿತು. ಇದರಿಂದ ಹಲವು ಪಂದ್ಯಗಳಲ್ಲಿ ವಿಜೆಡಿ ನಿಯಮದನ್ವಯ ಓವರ್‌ಗಳನ್ನು ಕಡಿಮೆ ಮಾಡಿ ರನ್‌ ಗುರಿ ನೀಡಲಾಯಿತು.  

ಮಹಿಳಾ ಕ್ರಿಕೆಟ್‌ ಪ್ರದರ್ಶನ ಪಂದ್ಯ: ಮಹಿಳಾ ಕ್ರಿಕೆಟ್‌ ಉತ್ತೇಜಿಸುವ ದಿಸೆಯಲ್ಲಿ ಕೆಪಿಎಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್‌ ಪ್ರದರ್ಶನ‌ ಪಂದ್ಯ ಆಯೋಜಿಸಲಾಯಿತು. ಕಿರು ಮಾದರಿ ಪಂದ್ಯದಲ್ಲಿ ರಕ್ಷಿತಾ ಕೃಷ್ಣಪ್ಪ ನಾಯಕತ್ವದ ಸೆಕ್ರೇಟ್ರಿಸ್‌ ಇಲೆವೆನ್‌ ತಂಡ 1 ವಿಕೆಟ್‌ ಅಂತರದಿಂದ ವೇದಾ ಕೃಷ್ಣಮೂರ್ತಿ ನಾಯಕತ್ವದ ಪ್ರಸಿಡೆಂಟ್ಸ್‌ ಇಲೆವೆನ್‌ ತಂಡವನ್ನು ಮಣಿಸಿತು. 

ಬಸ್‌ಗಳಲ್ಲಿ ಬಂದ ಪ್ರೇಕ್ಷಕರು: ಶಾಸಕ ವಿಜಯಾನಂದ ಕಾಶಪ್ಪನವರ ಸಹ ಒಡೆತನದ ಬಿಜಾಪುರ ಬುಲ್ಸ್‌ ತಂಡಕ್ಕೆ ಹುರುಪು ತುಂಬಲು ಬಿಜಾಪುರ ತಂಡದ ಪಂದ್ಯಗಳಿದ್ದಾಗ ವಿಜಯಪುರದಿಂದ 25 ಬಸ್‌ಗಳಲ್ಲಿ ತಂಡದ ಅಭಿಮಾನಿಗಳನ್ನು ಪಂದ್ಯ ವೀಕ್ಷಣೆಗೆ ಕರೆತರಲಾಯಿತು. ಇದರಿಂದ ಬಿಜಾಪುರ ಬುಲ್ಸ್‌ ತಂಡಕ್ಕೆ ಪ್ರೇಕ್ಷಕರ ಬೆಂಬಲ ಹೆಚ್ಚಾಗಿತ್ತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಒಂದೆಡೆ ನೂರಾರು ಅಭಿಮಾನಿಗಳು ಬುಲ್ಸ್‌ ತಂಡದ ಆಟಗಾರರಿಗೆ ಸ್ಫೂರ್ತಿ ತುಂಬಿದರು. 

ಸುನೀಲ್‌ ಶೆಟ್ಟಿ ಆಕರ್ಷಣೆ: ಬಾಲಿವುಡ್‌ ಚಿತ್ರನಟ ಸುನೀಲ್‌ ಶೆಟ್ಟಿ ಫೈನಲ್‌ ಪಂದ್ಯ ವಿಕ್ಷಿಸಿದ್ದು ವಿಶೇಷವಾಗಿತ್ತು. ಸುನೀಲ್‌ ಶೆಟ್ಟಿ ಕೆಲ ಹೊತ್ತು ಚಾರು ಶರ್ಮಾ ಹಾಗೂ ಡೇನಿಯಲ್‌ ವೆಟ್ಟೋರಿ ಜತೆ ವೀಕ್ಷಕ ವಿವರಣೆ ಬಾಕ್ಸ್‌ನಲ್ಲಿ ಕುಳಿತು ಕ್ರಿಕೆಟ್‌ ಹಾಗೂ ಬಾಲಿವುಡ್‌ ಕುರಿತಾದ ಹಲವು ಅಭಿಪ್ರಾಯಗಳನ್ನು ಹಂಚಿಕೊಂಡರು. ಸ್ಯಾಂಡಲ್‌ವುಡ್‌ ಚಿತ್ರನಟಿಯರಾದ ಶರ್ಮಿಳಾ ಮಾಂಡ್ರೆ ಹಾಗೂ ಜೆನ್ನಿಫ‌ರ್‌ ಕೊತ್ವಾಲ್‌ ಕೆಪಿಎಲ್‌ ಪಂದ್ಯ ವೀಕ್ಷಿಸಿದರು. ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು.

ಫ್ರಾಂಚೈಸಿಗಳು ಹಾಗೂ ಪ್ರಾಯೋಜಕರ ಸಹಕಾರದಿಂದ ಕೆಪಿಎಲ್‌ ಯಶಸ್ವಿಯಾಗಿದೆ. ವರ್ಷದಿಂದ ವರ್ಷಕ್ಕೆ ಕೆಪಿಎಲ್‌ ವ್ಯಾಪ್ತಿ ಹೆಚ್ಚುತ್ತಿದೆ. ಈ ಭಾಗದ ಹಲವಾರು ಹುಡುಗರು ಪ್ರತಿಭೆ ತೋರಲು ಅವಕಾಶ ನೀಡಿದೆ. ಇಲ್ಲಿ ಮಿಂಚಿದ ಅನೇಕ ಹುಡುಗರು ಐಪಿಎಲ್‌ ಹಾಗೂ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. 
-ಬಾಬಾ ಭೂಸದ, ಕೆಎಸ್‌ಸಿಎ ಧಾರವಾಡ ವಲಯದ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next