ಬೆಂಗಳೂರು: ಯಾವುದೇ ಸಭೆ, ಸಮಾರಂಭಗಳಲ್ಲಿ ನಿರೂಪಕರ ನಿರೂಪಣೆಯಲ್ಲಿ ಸತ್ವ ಇದ್ದರೆ ಮಾತ್ರ, ಅಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದು ವಿದ್ವಾನ್ ಚಂದ್ರಶೇಖರ ನಾವಡ ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಸಕೆರೆಹಳ್ಳಿಯ ಕಲಾಭೂಮಿಕಾ ಪ್ರತಿಷ್ಠಾನ, ಬಸವನಗುಡಿಯ ಅಬಲಾಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಮಾತು ಬಲ್ಲವರಿಗೆ ಭಾವದೌತಣ’, ಕಾರ್ಯಕ್ರಮದಲ್ಲಿ ನಿರೂಪಣೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿರೂಪಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ವಿಭಿನ್ನವಾದ ಮಾತಿನ ಶೈಲಿಯ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ನಿರೂಪಕರಿಗೆ ಇರುತ್ತದೆ. ನಿರೂಪಣೆಯಲ್ಲಿ ಸತ್ವವಿಲ್ಲದೆ ಹೋದರೆ, ಅಂತಹ ಕಾರ್ಯಕ್ರಮದಲ್ಲಿ ಕಳೆಯಿರುವುದಿಲ್ಲ. ಕಾರ್ಯಕ್ರಮವನ್ನು ಗೆಲ್ಲಿಸುವುದು ಮತ್ತು ಸೋಲಿಸುವುದು ಎರಡೂ ನಿರೂಪಕರ ಕೈಯಲ್ಲಿರುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ನಿರೂಪಣಾ ಕ್ಷೇತ್ರದಲ್ಲಿ ಹಲವು ಮಂದಿ ಹೆಸರು ಮಾಡಿದ್ದಾರೆ. ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಂತಹ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ನಡೆಯಬೇಕಾಗಿದ್ದು, ಈ ನಿಟ್ಟಿನಲ್ಲಿ ಕಲಾಭೂಮಿಕಾ ಪ್ರತಿಷ್ಠಾನ ಹಮ್ಮಿಕೊಂಡಿರುವ ಸನ್ಮಾನ ಕಾರ್ಯಕ್ರಮ ಪ್ರಶಂಸನೀಯ ಎಂದು ತಿಳಿಸಿದರು.
ಸಾಧನೆ ಮಾಡಿ: ಹಿರಿಯ ಹಿಂದೂಸ್ತಾನಿ ಗಾಯಕ ಡಾ.ಮೃತ್ಯುಂಜಯ ಶೆಟ್ಟರ್ ಮಾತನಾಡಿ, ಯಾವುದೇ ಕ್ಷೇತ್ರವಿರಲಿ, ಆ ಕ್ಷೇತ್ರದಲ್ಲಿ ಹೆಸರು ಮಾಡಬೇಕಾದರೆ ಪರಿಶ್ರಮ ಅಗತ್ಯ. ಪರಿಶ್ರಮ ಇಲ್ಲದೆ ಫಲ ನಿರೀಕ್ಷೆ ಮಾಡುವುದರಲ್ಲಿ ಉಪಯೋಗವಿಲ್ಲ. ಸಾಧನೆ ಮಾಡಿ ಸನ್ಮಾನಕ್ಕೆ ಅರ್ಹರಾಗಬೇಕು ಎಂದು ಹೇಳಿದರು.
ಮಾತು ಜ್ಯೋತಿಯಂತಿರಬೇಕು, ಪ್ರೀತಿಯ ನುಡಿ ಅದರಲ್ಲಿ ಅಡಗಿರಬೇಕು. ಅರ್ಥವಿಲ್ಲದ ಮಾತಿನಲ್ಲಿ ಯಾವುದೇ ಪ್ರಯೋಜವಿಲ್ಲ. ಈ ದೃಷ್ಟಿಯಿಂದಲೇ ಹಿರಿಯರು ಮಾತು ಬಲ್ಲವರ ಬಿಲ್ಲಿನ ಬಾಣವಾಗಬೇಕು ಎಂದು ಹೇಳುತ್ತಾರೆ ಎಂದರು.
ಇದೇ ವೇಳೆ ನಿರೂಪಣಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೃತ್ಯನಿರ್ದೇಶಕ ಸುಗ್ಗವನಹಳ್ಳಿ ಷಡಾಕ್ಷರಿ, ಹರೀಶ್ ನಾಗರಾಜು, ಕಲಾದೇಗುಲ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ತಬಲಾ ವಾದಕ ಸತೀಶ್ ಹಂಪಿಹೊಳಿ, ಕರ್ನಾಟಕ ಗಮಕ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ.ಎಂ.ಆರ್.ಸತ್ಯನಾರಾಯಣ, ಕಲಾಭೂಮಿಕಾ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಕಶ್ಯಪ್ ಇದ್ದರು. ಅಬಲಾಶ್ರಮದ ವಿದ್ಯಾರ್ಥಿಗಳು ಕುವೆಂಪು, ಜಿಎಸ್‌ಎಸ್ ಸೇರಿದಂತೆ ಕೆಲವು ಹಿರಿಯ ಕವಿಗಳ ಗೀತೆಗಳನ್ನು ಹಾಡಿದರು.