Advertisement

ಗ್ರಾಹಕರ ಸಂತೃಪ್ತಿಯೇ ಸಹಕಾರಿ ಯಶಸ್ಸಿನ ಜೀವಾಳ: ಚಿದಾನಂದ ಗಾಳಿ

03:08 PM Sep 20, 2024 | Team Udayavani |

ಉದಯವಾಣಿ ಸಮಾಚಾರ
ರಬಕವಿ-ಬನಹಟ್ಟಿ: ಗ್ರಾಹಕರೇ ಸಹಕಾರಿಗಳ ಮೂಲದ್ರವ್ಯವಾಗಿದ್ದು, ಅವರ ಸಂತೃಪ್ತಿಯಿಂದ ಸಹಕಾರಿಗಳ ಯಶಸ್ಸು ಸುಲಭಸಾಧ್ಯ ಎಂದು ರಬಕವಿಯ ಶ್ರೀ ಧನಲಕ್ಷ್ಮೀ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಗಾಳಿ ನುಡಿದರು.

Advertisement

ರಬಕವಿಯ ಶ್ರೀ ಬನಶಂಕರಿ ಸಭಾಭವನದಲ್ಲಿ ನಡೆದ ಸಂಘದ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸಂಘಕ್ಕೆ ಶೇರುದಾರರು ಮೂಲಸ್ತೋತ್ರವಾದರೆ, ಹೊಣೆಯರಿತ ಆಡಳಿತ ಮಂಡಳಿ ಹಾಗೂ ಆಡಳಿತ ಮಂಡಳಿ ಮತ್ತು ಗ್ರಾಹಕರ ನಡುವೆ ಸಕಾರಾತ್ಮಕ ಸ್ಪಂದನೆ ನೀಡುವ ಕೌಶಲ್ಯಯುತ ಸಿಬ್ಬಂದಿಯ ಜತೆಗೆ ಗ್ರಾಹಕರು ನಡೆಸುವ ವಹಿವಾಟು ಸಹಕಾರಿಯ ಯಶಸ್ಸಿನ ಜೀವಾಳವಾಗಿದೆ ಎಂದರು.

2023-24ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದ ಅಧ್ಯಕ್ಷ ಚಿದಾನಂದ ಒಟ್ಟು 2774 ಸದಸ್ಯರು ಹೊಂದಿರುವ ಸಂಘದ ಶೇರು ಬಂಡವಾಳ 74,78,800 ಇದ್ದು, 8,74,18,268 ಠೇವಣಿ ಹೊಂದಿದೆ. ಸಾಲ ಪ್ರಮಾಣದಲ್ಲೂ ಏರಿಕೆಯಾಗಿದ್ದು, 6,96,64,003 ವಿತರಣೆಯಾಗಿದೆ.

ಸದಸ್ಯರ ನಿಗದಿತ ಕಾಲದಲ್ಲಿ ಮರುಪಾವತಿ ಮಾಡಿದ ಕಾರಣ 32,71,228 ರೂ. ನಿವ್ವಳ ಲಾಭ ಹೊಂದಿದೆ. ಶೇ.20 ರಂತೆ ಲಾಭಾಂಶ ಹಂಚಲು ತೀರ್ಮಾನಿಸಲಾಗಿದೆ. ಮುದ್ದತ್‌ ಮೀರಿದ ಸಾಲದ ಪ್ರಮಾಣ ಶೇ.3.86ರಷ್ಟು ಮಾತ್ರ ಇದ್ದು ಸಾಲ ಬಾಕಿದಾರರು ಸಂಘಕ್ಕೆ ಹಣ ಪಾವತಿಸಿ ಸಂಘದೊಡನೆ ಸಹಕರಿಸಬೇಕೆಂದರು. ಸಂಘದ ನೂತನ ಕಚೇರಿ ಕಟ್ಟಡ ಕಾಮಗಾರಿ ಕಳೆದ 2 ವರ್ಷಗಳಿಂದ ನಡೆಯುತ್ತಿದ್ದು, ಬರುವ ವಾರ್ಷಿಕ ಸರ್ವಸಾಧಾರಣ ಸಭೆಯೊಳಗಾಗಿ ನೂತನ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ ಎಂದು ಸಭೆಗೆ ವಿವರಿಸಿದರು.

ಸಭೆಯಲ್ಲಿ ಚರ್ಚಿಸುವ ವಿಷಯಗಳನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿ ಈರಣ್ಣ ಗುಣಕಿ ಸಭೆಯ ಮುಂದಿಟ್ಟು ಅನುಮೋದನೆ ಪಡೆದುಕೊಂಡರು. ಬಸವರಾಜ ಯಂಡಿಗೇರಿ, ಡಾ.ಸಂಗಣ್ಣಾ ಸಾಬೋಜಿ, ಎಂ.ಸಿ.ಸಾಬೋಜಿ, ಬಸವರಾಜ ಭಿಲವಡಿ, ರಾಜಶೇಖರ ಕುರ್ಲಿ, ರಾಜು ಉಮದಿ, ವಿಜಯ ಕರಡಿಗುದ್ದಿ, ಬಸವರಾಜ ಮಟ್ಟಿಕಲ್ಲಿ, ಭೀಮಪ್ಪ ಭಜಂತ್ರಿ, ಸುನಂದಾ ವಗ್ಗ, ಶೋಭಾ ಭಿಲವಡಿ, ಮಹಾದೇವ ಕವಿಶೆಟ್ಟಿ, ನಾರಾಯಣ ಬೋರಗಿನಾಯಕ, ಗಜಾನನ ನಾಗರಾಳ, ಸತೀಶ ಅಬ್ದುಲ್‌ಪೂರ, ಮಲ್ಲಿಕಾರ್ಜುನ ಉಮದಿ ಉಪಸ್ಥಿತರಿದ್ದರು.

Advertisement

ಡಾ| ಎಸ್‌.ಜಿ.ಸಾಬೋಜಿ ಸ್ವಾಗತಿಸಿದರು. ಮಹೇಶ ಮಟ್ಟಿಕಲ್ಲಿ, ಸದಾನಂದ ಜೋತಾವರ ನಿರೂಪಿಸಿದರು. ವಿಜಯ ಕರಡಿಗುದ್ದಿ
ವಂದಿಸಿದರು. ಪುರವಂತರು, ಸಾಂಪ್ರದಾಯಿಕ ಕರಡಿ ಮಜಲು ವಾದಕರು, ಚಳ್ಳಂಗ ಕಲಾವಿದರು, ರುದ್ರಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 15 ಸಾಧಕರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next