Advertisement

ಸಬ್‌ಅರ್ಬನ್‌ ಯೋಜನೆ ಮತ್ತೆ ಕಗ್ಗಂಟು

06:23 AM Feb 17, 2019 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರ ವಿಧಿಸಿದ ಷರತ್ತುಗಳನ್ನು ರೈಲ್ವೆ ಮಂಡಳಿ ನಿರಾಕರಿಸಿದ ಬೆನ್ನಲ್ಲೇ ಮುಂಬೈ ಮಾದರಿ ಅನುಸರಿಸುವ ಬೇಡಿಕೆಯನ್ನು ರಾಜ್ಯ ಸರ್ಕಾರ ನೈರುತ್ಯ ರೈಲ್ವೆ ಮುಂದಿಟ್ಟಿದೆ. ಈ ಮೂಲಕ ಯೋಜನೆ ಮತ್ತೆ ಕಗ್ಗಂಟಾದಂತಾಗಿದ್ದು, ಲೋಕಸಭಾ ಚುನಾವಣೆ ಮುಗಿಯುವವರೆಗೂ ಈ ತಿಕ್ಕಾಟ ಮುಂದುವರಿಯುವ ಸಾಧ್ಯತೆಯಿದೆ.

Advertisement

ಸ್ವತಃ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಿಂಗ್‌ ಈ ಸುಳಿವು ನೀಡಿದ್ದಾರೆ. ನಗರದ ಯಶವಂತಪುರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯಶವಂತಪುರ ರೈಲು ನಿಲ್ದಾಣದ ಪುನರ್‌ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

“ಮುಂಬೈ ಸಬ್‌ಅರ್ಬನ್‌ ಯೋಜನೆ ವೇಳೆ ಮಹಾರಾಷ್ಟ್ರ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಅನುಸರಿಸುವುದಾಗಿ ಕರ್ನಾಟಕ ಸರ್ಕಾರ ಹೇಳುತ್ತಿದೆ. ಆದರೆ ಆ ಸಮಯದಲ್ಲಿ ಯಾವುದೇ ಷರತ್ತುಗಳನ್ನು ವಿಧಿಸಿರಲಿಲ್ಲ. ಏಕೆಂದರೆ, ಆಗ ಒಂದೇ ಸರ್ಕಾರ ಅಧಿಕಾರದಲ್ಲಿತ್ತು.

ಈಗ ಹಲವು ಸರ್ಕಾರಗಳಿದ್ದು, ಪರಸ್ಪರ ಗುದ್ದಾಟದಲ್ಲಿ ನಿರತವಾಗಿವೆ. ವಾಸ್ತವ ಹೀಗಿರುವಾಗ, ಯೋಜನೆ ಅನುಷ್ಠಾನ ಮತ್ತೆ ಕಗ್ಗಂಟಾಗಿದೆ. ಚುನಾವಣೆ ಮುಗಿಯುವವರೆಗೂ ಸ್ಪಷ್ಟ ನಿರ್ಧಾರ ಹೊರಬೀಳುವುದು ಅನುಮಾನ’ ಎಂದು ಅವರು ತಿಳಿಸಿದರು.

30 ಸಾವಿರ ಕೋಟಿಗೂ ಅಧಿಕ ವೆಚ್ಚ: ಉಪನಗರ ರೈಲು ಯೋಜನೆ ಅಂದಾಜು ವೆಚ್ಚ 20 ಸಾವಿರ ಕೋಟಿ ರೂ. ಆಗಿದೆ. ಆದರೆ ಇದಕ್ಕೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಮಾರ್ಗ ವಿಸ್ತರಣೆ ಮೂಲಕ ಇದನ್ನು 30 ಸಾವಿರ ಕೋಟಿಗೆ ಹೆಚ್ಚಿಸಬೇಕು ಎಂದು ಹೇಳುತ್ತಿದೆ.

Advertisement

ಆದರೆ, ಇದನ್ನು ರೈಲ್ವೆ ಸಚಿವರು ನಿರಾಕರಿಸಿದ್ದು, ರೈಲ್ವೆ ಮಂಡಳಿ ಕೂಡ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿದೆ ಎಂದರು. ಇದಕ್ಕೆ ದನಿಗೂಡಿಸಿದ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಆರ್‌.ಎಸ್‌.ಸಕ್ಸೇನ, ಉಪನಗರ ರೈಲು ಯೋಜನೆ ಮೂಲ ಉದ್ದೇಶ ವೈಟ್‌ಫೀಲ್ಡ್‌-ಹೊಸೂರು, ಹೊಸೂರು-ಯಶವಂತಪುರ, ಬೆಂಗಳೂರು ಸಿಟಿ-ಬೈಯಪ್ಪನಹಳ್ಳಿ,

ಸಿಟಿ-ಕೆಂಗೇರಿಯಂತಹ ಸಣ್ಣ-ಪುಟ್ಟ ಮಾರ್ಗಗಳ ನಡುವೆ ರೈಲು ಸಂಪರ್ಕ ಸೇವೆ ಕಲ್ಪಿಸುವುದಾಗಿತ್ತು. ಇದರ ಆಧಾರದ ಮೇಲೆಯೇ ಮೊದಲ ಸಮಗ್ರ ಯೋಜನಾ ವರದಿ ಸಿದ್ಧಗೊಂಡಿದೆ. ಇದರ ಉದ್ದ 160 ಕಿ.ಮೀ. ಆದರೆ, ರಾಜ್ಯ ಸರ್ಕಾರವು ಅದನ್ನು ಹತ್ತಿರದ ನಗರಗಳಿಗೆ ವಿಸ್ತರಿಸಬೇಕು ಎಂದು ಪ್ರಸ್ತಾವನೆ ಮುಂದಿಟ್ಟಿದ್ದು, ಸರ್ಕಾರ ವಿಧಿಸಿದ 19 ಷರತ್ತುಗಳಲ್ಲಿ ಇದೂ ಒಂದು ಎಂದು ಹೇಳಿದರು.

ಮೆಟ್ರೋ ಸಬ್‌ಅರ್ಬನ್‌ ನಡುವೆ ಸ್ಪರ್ಧೆ ಇಲ್ಲ: ಅಷ್ಟಕ್ಕೂ ಈ ವಿಸ್ತರಣೆ ಮಾರ್ಗವನ್ನು ಎರಡನೇ ಹಂತದಲ್ಲೂ ಜಾರಿಗೊಳಿಸಲು ಅವಕಾಶ ಇದೆ. ಮೊದಲ ಹಂತದಲ್ಲೇ ಇದೆಲ್ಲವೂ ಹೇಗೆ ಸಾಧ್ಯ ಎಂದು ಕೇಳಿದ ಆರ್‌.ಎಸ್‌.ಸಕ್ಸೇನ, ಮೆಟ್ರೋ ಮತ್ತು ಉಪನಗರ ರೈಲು ಯೋಜನೆ ನಡುವೆ ಯಾವುದೇ ಸ್ಪರ್ಧೆ ಇಲ್ಲ.

ಇವೆರಡೂ ಬಹುಮಾದರಿ ಸಾರಿಗೆ ಸೇವೆಗಳಾಗಿದ್ದು, ಒಂದಕ್ಕೊಂದು ಪೂರಕವಾಗಿವೆ. ರಸ್ತೆಯಲ್ಲಿ ನಿತ್ಯ ಸಂಚಾರದಟ್ಟಣೆಗೆ ಸಿಲುಕುವ ಜನರನ್ನು ರೈಲು ಸೇವೆಯತ್ತ ಆಕರ್ಷಿಸುವುದು ಎರಡೂ ಯೋಜನೆಗಳ ಉದ್ದೇಶವಾಗಿದೆ. ಮುಂಬೈನಲ್ಲಿಯೂ ಇದೇ ವ್ಯವಸ್ಥೆ ಇದೆ ಎಂದರು. 

“ಇನ್ನು ಎಲ್ಲೆಲ್ಲಿ ಇಲಾಖೆ ಜಾಗ ಲಭ್ಯ ಇದೆಯೋ ಅಲ್ಲೆಲ್ಲಾ ಉಪನಗರ ರೈಲು ವ್ಯವಸ್ಥೆ ಕಲ್ಪಿಸಲು ನೈರುತ್ಯ ರೈಲ್ವೆ ಮಂಡಳಿ ಸಿದ್ಧವಿದೆ. ಈ ಎರಡೂ (ಮೆಟ್ರೋ ಮತ್ತು ಸಬ್‌ಅರ್ಬನ್‌) ಯೋಜನೆಗಳು ಬೇರೆ ಬೇರೆ ವರ್ಗದ ಜನರನ್ನು ಸೆಳೆಯಲಿವೆ. ಈ ಹಿಂದೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಈ ಬಗ್ಗೆ ಗಮನಸೆಳೆದಿದ್ದೇನೆ.

ಆದರೆ, ರಾಜ್ಯ ಸರ್ಕಾರ ಮೆಟ್ರೋ ಮಾರ್ಗ ಇರುವ ಕಡೆಗಳಲ್ಲಿ ಉಪನಗರ ರೈಲು ಮಾರ್ಗ ನಿರ್ಮಾಣ ಕೈಬಿಡುವಂತೆ ಹೇಳಿದ್ದು, ಸರ್ಕಾರದ ಸೂಚನೆಯನ್ನು ನಾವು ಅನುಸರಿಸುತ್ತಿದ್ದೇವೆ. ಹಾಗೊಂದು ವೇಳೆ ಭೂಮಿ ನೀಡಲು ಸರ್ಕಾರ ಸಿದ್ಧವಿದ್ದರೆ, ಉಪನಗರ ರೈಲನ್ನು ಸ್ಯಾಟಲೈಟ್‌ ಟೌನ್‌ಗಳವರೆಗೂ ಕೊಂಡೊಯ್ಯಲು ನೈರುತ್ಯ ರೈಲ್ವೆ ಸಿದ್ಧವಿದೆ’ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next