Advertisement

ಮುಂದೆಯೂ ಉಪ ಚುನಾವಣೆ ಕಾರ್ಯತಂತ್ರ ಮಾದರಿ

06:35 AM Nov 08, 2018 | Team Udayavani |

ಬೆಂಗಳೂರು: ಐದು ಕ್ಷೇತ್ರಗಳ ಉಪ ಚುನಾವಣೆ ಗೆಲುವಿನಿಂದ  ಉತ್ಸಾಹ ಇಮ್ಮುಡಿಗೊಳಿಸಿಕೊಂಡಿರುವ ಜೆಡಿಎಸ್‌ ಮುಂದಿನ ಲೋಕಸಭೆ ಚುನಾವಣೆಗೂ ಇದೇ ಮಾದರಿ ಕಾರ್ಯತಂತ್ರ ಅನುಸರಿಸಲು ತೀರ್ಮಾನಿಸಿದೆ.

Advertisement

ಉಪ ಚುನಾವಣೆಯ ಕಾರ್ಯತಂತ್ರದಡಿಯೇ ಕಾಂಗ್ರೆಸ್‌ ಜತೆಗೂಡಿ ಮುಂದಿನ ಲೋಕಸಭೆ ಚುನಾವಣೆ ಎದುರಿಸಿ ಟಾರ್ಗೆಟ್‌ 20 ಗುರಿಯೊಂದಿಗೆ  ಈಗಿನಿಂದಲೇ ಕಾರ್ಯೋನ್ಮುಖವಾಗಲು ಜೆಡಿಎಸ್‌ ನಿರ್ಧರಿಸಿದೆ.

ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲೂ ಬಿಜೆಪಿಯ ಮತಬ್ಯಾಂಕ್‌ಗೆ ಲಗ್ಗೆ ಇಡಲು  ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು “ಜಾತಿ ಸಮೀಕರಣ’ದ ತಂತ್ರ ರೂಪಿಸಿದ್ದು, ಇದನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಮುಂದೆ ಪ್ರಸ್ತಾಪಿಸಲು ಮುಂದಾಗಿದ್ದಾರೆ.

ಈ ಸಂಬಂಧ ಎಐಸಿಸಿ  ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಜತೆಯೂ ಪೂರ್ವಭಾವಿಯಾಗಿ ಚರ್ಚಿಸಿ ರಾಜ್ಯದಲ್ಲಿ 20 ಸ್ಥಾನ ಗೆಲ್ಲುವ ಅವಕಾಶಗಳ ಬಗ್ಗೆಯೂ ಹೇಳಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯದ 28 ಕ್ಷೇತ್ರಗಳ ಪೈಕಿ ಮಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್‌ ಮತಬ್ಯಾಂಕ್‌ ಇಲ್ಲ. ಆದರೆ, ಲೋಕಸಭೆ ಚುನಾವಣೆ ವೇಳೆಗೆ ಆ ಭಾಗಕ್ಕೆ ಜೆಡಿಎಸ್‌ನಿಂದಲೂ ಸಚಿವ ಸ್ಥಾನ ನೀಡಿ ಪಕ್ಷ ಸಂಘಟಿಸುವ ಲೆಕ್ಕಾಚಾರ ಸಹ ಹಾಕಲಾಗಿದೆ. ಆಗ ಕಾಂಗ್ರೆಸ್‌-ಜೆಡಿಎಸ್‌ ಸೇರಿ ಬಿಜೆಪಿ ಮಣಿಸಬಹುದು.

Advertisement

ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಗೆ ಬರುವ ಕ್ಷೇತ್ರಗಳಲ್ಲಿ ಜೆಡಿಎಸ್‌ ನೆಲೆಯಿದ್ದು ಅಲ್ಲಿ ಉಡುಪಿ ಭಾಗದ ಕಾಂಗ್ರೆಸ್‌ ಮತಬ್ಯಾಂಕ್‌ ಗಟ್ಟಿಗೊಳಿಸಿಕೊಂಡರೆ ಆ ಕ್ಷೇತ್ರದಲ್ಲಿ ಸ್ಪರ್ಧೆ ಒಡ್ಡಬಹುದು.

ಉತ್ತರ ಕನ್ನಡದಲ್ಲೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಒಟ್ಟಾರೆ ಗೆಲ್ಲುವ ಸಾಧ್ಯತೆಯಿದೆ. ಶಿಮಮೊಗ್ಗದಲ್ಲಿ  ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಪಿಯ ಎರಡು ಲಕ್ಷ ಮತ ಅಂತರ ಕಡಿಮೆ ಮಾಡಿಸಿದ್ದು ಮತ್ತಷ್ಟು ಪ್ರಯತ್ನ ಪಟ್ಟರೆ ಗೆಲುವು ಧಕ್ಕಿಸಿಕೊಳ್ಳಬಹುದು. ಆದರೆ, ಅಭ್ಯರ್ಥಿ ಆಯ್ಕೆ ಜಾಗರೂಕತೆಯಿಂದ ಮಾಡಬೇಕು.  ಉಳಿದಂತೆ ಉತ್ತರ ಕರ್ನಾಟಕ, ಹಳೇ ಮೈಸೂರು ಜೆಡಿಎಸ್‌-ಕಾಂಗ್ರೆಸ್‌ 16 ಸ್ಥಾನ ಗೆಲ್ಲುವುದು ಕಷ್ಟವಾಗಲಾರದು.  ಒಕ್ಕಲಿಗ, ದಲಿತ, ಮುಸ್ಲಿಂ, ಹಿಂದುಳಿದ ವರ್ಗದ ಕ್ಯಾಂಬಿನೇಷನ್‌ನಡಿ  ಒಗ್ಗೂಡಿ ಚುನಾವಣೆಗೆ ಹೋದರೆ ಹೆಚ್ಚು ಅನುಕೂಲ. ಎರಡೂ ಪಕ್ಷದ ಶಾಸಕರು ಇರುವ ಕಡೆ ಲಿಂಗಾಯಿತ ಸಮುದಾಯದ ಬೆಂಬಲವೂ ಸಿಗಲಿದೆ ಎಂಬ ವಾದ ಜೆಡಿಎಸ್‌ನದು ಎಂದು ತಿಳಿದು ಬಂದಿದೆ.

ಫ‌ಲಿಸಿದ ತಂತ್ರ
ಸಮ್ಮಿಶ್ರ ಸರ್ಕಾರ “ಸೇಫ್’ ಮಾಡಿಸುವ ಜತೆಗೆ ಮುಂದಿನ ಲೋಕಸಭೆ ಚುನಾವಣೆಗೂ ಮೈತ್ರಿ ಗಟ್ಟಿಗೊಳಿಸಿಕೊಳ್ಳಲು ಐದು ಕ್ಷೇತ್ರಗಳ ಉಪ ಚುನಾವಣೆ ವಿಚಾರದಲ್ಲಿ ದೇವೇಗೌಡರ ಲೆಕ್ಕಾಚಾರ ಫ‌ಲಿಸಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜತೆಗೂಡಿ ಒಂದೇ ವೇದಿಕೆಯಡಿ ಪತ್ರಿಕಾಗೋಷ್ಠಿ ನಡೆಸಿ ನಾವು ಒಂದಾಗಿದ್ದೇವೆ ಎಂದು ಸಂದೇಶ ಸಾರಿ ನಂತರ ಒಂದೇ ವೇದಿಕೆಯಡಿ ಪ್ರಚಾರ ನಡೆಸಿದ  ಕಾರ್ಯತಂತ್ರ ಯಶಸ್ವಿಯಾಯಿತು.

ಬಳ್ಳಾರಿ, ಶಿವಮೊಗ್ಗ, ಜಮಖಂಡಿ, ಮಂಡ್ಯ, ರಾಮನಗರದಲ್ಲಿ ಮುಸ್ಲಿಂ ಮತಗಳ ಕ್ರೂಢೀಕರಣಕ್ಕೆ ಸಿ.ಎಂ.ಇಬ್ರಾಹಿಂ, ಜಮೀರ್‌ ಅಹಮದ್‌ ಎಸ್‌ಟಿ ಮತಗಳಿಗಾಗಿ ಸತೀಶ್‌ ಜಾರಕಿಹೊಳಿ, ದಲಿತರ ಮತಗಳಿಗಾಗಿ ಎಚ್‌.ಆಂಜನೇಯ,ಕೆ.ಎಚ್‌.ಮುನಿಯಪ್ಪ
ರಂತಹ ನಾಯಕರನ್ನು ಜತೆಗೂಡಿಸಿಕೊಂಡಿದ್ದು ಮತಗಳಿಕೆಗೆ ಸಹಕಾರಿಯಾಗಿದೆ. ಖುದ್ದು ದೇವೇಗೌಡರು ಭಾಷಣದ ಸಮದಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಒಂದಾಗಿದೆ. ಹಿಂದೆ ನಾನು ಏನೇ ಮಾತನಾಡಿರಬಹುದು. ಜಮೀರ್‌ ಅಹಮದ್‌ ಏನೇ ಮಾತನಾಡಿರಬಹುದು. ಡಿ.ಕೆ.ಶಿವಕುಮಾರ್‌ ವಿರುದ್ಧ ನಾನು ಆರೋಪ ಮಾಡಿರಬಹುದು ಎಲ್ಲವನ್ನೂ ಮರೆತಿದ್ದೇವೆ. 

ಮತ ನೀಡಿ ಎಂದು ಕೋರಿಕೆ ಸಲ್ಲಿಸಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹ ಮಂಡ್ಯದ ಚೆಲುವರಾಯಸ್ವಾಮಿ ವಿಚಾರದಲ್ಲಿ ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂದು ಹೇಳಿದ್ದು ಕಾಂಗ್ರೆಸ್‌-ಜೆಡಿಎಸ್‌ನಲ್ಲಿ ತಳಮಟ್ಟದಲ್ಲಿ ಕಾರ್ಯಕರ್ತರು-ಮುಖಂಡರ ನಡುವಿನ ಕಂದಕವನ್ನೂ ನಿವಾರಿಸಿತು. ಹೀಗಾಗಿ, ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಿ ಶಿವಮೊಗ್ಗದಲ್ಲಿ ಬಿಜೆಪಿಯ ಮತಗಳಿಕೆ ಎರಡು ಲಕ್ಷ ಕಡಿಮೆ ಮಾಡಲು ಸಾಧ್ಯವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ.

ಇತ್ತ ಕಾಂಗ್ರೆಸ್‌ನಲ್ಲೂ ಜೆಡಿಎಸ್‌ ಜತೆಗೂಡಿದರೆ ಬಿಜೆಪಿ ಮಣಿಸಬಹುದು. ಹೀಗಾಗಿ, ಎರಡೂ ಪಕ್ಷಗಳ ಮೈತ್ರಿ ಲೋಕಸಭೆ ಚುನಾವಣೆಗೂ ಮೈತ್ರಿ ಅನಿವಾರ್ಯ.ಜತೆಗೆ ರಾಜ್ಯದಲ್ಲೂ  ಆಡಳಿತ ಚುಕ್ಕಾಣಿ ನಮ್ಮ ಕೈಲೇ ಇರುತ್ತದೆ ಎಂಬ ಅಭಿಪ್ರಾಯವಿದೆ. ಆದರೆ, ಜೆಡಿಎಸ್‌ ಕೇಳಿದಷ್ಟು ಹಾಗೂ ನಿಗದಿತ ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ವಿರೋಧವಿದೆ ಎಂದು ಹೇಳಲಾಗಿದೆ.

ಶಿವಮೊಗ್ಗದಲ್ಲಿ ಜಯಗಳಿಸಿದರೂ ಸೊರಗಿದ ಬಿಜೆಪಿ
ಐದು ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಶಿವಮೊಗ್ಗದಲ್ಲಿ ಜಯಗಳಿಸಿದರೂ ಇತರೆ ಕ್ಷೇತ್ರಗಳಲ್ಲಿನ ಸೋಲು ಪಕ್ಷದಲ್ಲಿ ಮಂಕು ಕವಿದ ವಾತಾವರಣ ಮೂಡಿಸಿದೆ. ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿದರೆ ಪಕ್ಷಕ್ಕೆ ಕಷ್ಟ ಎಂಬ ಸಂದೇಶ “ಸೆಮಿಫೈನಲ್‌’ ನಿಂದ ರವಾನೆಯಾಗಿದ್ದು ಕಾರ್ಯತಂತ್ರ ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಲಿಂಗಾಯಿತ ಮತಬ್ಯಾಂಕ್‌ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆವರೆಗೂ ರಾಜ್ಯಾಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪ ಅವರ ಬದಲಾವಣೆಯಾಗದಿದ್ದರೂ ಸಂಘಟನಾತ್ಮಕವಾಗಿ ಒಂದಷ್ಟು ಬದಲಾವಣೆಗೆ ಪಕ್ಷದ ಕೇಂದ್ರ ನಾಯಕರು ಸಜ್ಜಾಗಿದ್ದಾರೆ. ರಾಜ್ಯದ ನಾಯಕರ ನಡುವೆ ಸಮನ್ವಯತೆ ಇಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ. ಜನಾರ್ದನರೆಡ್ಡಿ ಮತ್ತೆ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದರಿಂದಲೇ ಪಕ್ಷಕ್ಕೆ ಹಿನ್ನೆಡೆಯಾಗುತ್ತಿದೆ ಎಂಬ ಅಭಿಪ್ರಾಯ ಹಿನ್ನೆಲೆಯಲ್ಲಿ ಸದ್ಯದಲ್ಲೇ ಉಪ ಚುನಾವಣೆ ಫ‌ಲಿತಾಂಶ ಹಿನ್ನೆಲೆಯಲ್ಲಿ ಆತ್ಮಾವಲೋಕನ ಸಭೆ ಸಹ ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.

– ಎಸ್‌. ಲಕ್ಷ್ಮಿನಾರಾಯಣ
 

Advertisement

Udayavani is now on Telegram. Click here to join our channel and stay updated with the latest news.

Next