Advertisement

ಅಧ್ಯಯನ ಶ್ರೇಷ್ಠ ಗುಣಮಟ್ಟದ್ದಿರಲಿ

06:06 AM Mar 16, 2019 | Team Udayavani |

ಕಲಬುರಗಿ: ಅಧ್ಯಯನ ಶುದ್ಧ, ಭದ್ರತೆ, ಆಸಕ್ತಿ, ಸ್ವಾರಸ್ಯ, ಆರೋಗ್ಯಕರ ಹಾಗೂ ಶ್ರೇಷ್ಠ ಗುಣಮಟ್ಟದಿಂದ ಕೂಡಿದ್ದಾಗಿರಬೇಕು ಎಂದು ಮೈಸೂರಿನ ಅಂತಾರಾಷ್ಟ್ರೀಯ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಒಕ್ಕೂಟದ ಅಧ್ಯಕ್ಷ, ಅಂತಾರಾಷ್ಟ್ರೀಯ ಪೌಷ್ಟಿಕ ವಿಜ್ಞಾನ ಒಕ್ಕೂಟದ ಉಪಾಧ್ಯಕ್ಷ, ಪದ್ಮಶ್ರೀ ಪುರಸ್ಕೃತ ಡಾ| ವಿ. ಪ್ರಕಾಶ ಹೇಳಿದರು.

Advertisement

ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ನಡೆದ 37ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಅಧ್ಯಯನ ಕೈಗೊಳ್ಳುವ ವಿದ್ಯಾರ್ಥಿಗಳು ಇಲ್ಲದ ಸೌಕರ್ಯಗಳ ಬಗ್ಗೆ ಚಿಂತಿಸದೆ ಇರುವ ಸವಲತ್ತು ಪಡೆದು ಗುಣಮಟ್ಟದ ಫಲಿತಾಂಶ, ರಚನಾತ್ಮಕ ಸಂಶೋಧನೆ ಮಾಡುವುದರ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಬೇಕು ಎಂದರು.

ಉನ್ನತ ಶಿಕ್ಷಣ ನೀಡುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಬಹುತೇಕ ಇತರ ರಾಜ್ಯದ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನಕ್ಕೆ ಬರುತ್ತಾರೆ. ಇಂತಹ ಸದಾವಕಾಶ ಬಳಸಿಕೊಂಡು ಶ್ರೇಷ್ಠ ಶಿಕ್ಷಣ ಮತು ಸಂಶೋಧನೆಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವು ಜಾಗತಿಕ ವಿಶ್ವವಿದ್ಯಾಲಯವಾಗಿ ಗುರುತಿಸಿಕೊಳ್ಳುವಂತೆ ಆಗಬೇಕೆಂದು ಆಶಯ ವ್ಯಕ್ತಪಡಿಸಿದರು.

ನೂರು ಹಳ್ಳಿಗಳಿಗೆ ಹೋಗಿ: ಸಂಶೋಧನಾ ಪದವಿ ಪಡೆದವರು ಕನಿಷ್ಠ 100 ಹಳ್ಳಿಗಳಿಗೆ ಹೋಗಬೇಕು. ಅಲ್ಲಿನ ರೈತ ಸಮುದಾಯ, ಗ್ರಾಮಸ್ಥರೊಂದಿಗೆ ಭೇಟಿಯಾಗಿ ಚರ್ಚಿಸಿ ನಿಮ್ಮ ಅಧ್ಯಯನದ ಬಗ್ಗೆ ತಿಳಿಸಬೇಕು. ಅದೇ ರೀತಿ ರೈತರಿಂದ ಸಮಸ್ಯೆಗಳ ಬಗ್ಗೆ
ಅರಿತು ಪರಿಹಾರಕ್ಕೆ ಮಾರ್ಗ ಕಂಡುಕೊಂಡಲ್ಲಿ ಶಿಕ್ಷಣ ಪಡೆದಿದ್ದು ಸಾರ್ಥಕವಾಗುತ್ತದೆ. ಗ್ರಾಮೀಣ ಭಾರತದಲ್ಲಿ ಪಠ್ಯದಲ್ಲಿರದ ಅನೇಕ ಸಂಗತಿಗಳು ನಿಮಗೆ ಸಮಾಜವು ವಾಸ್ತವದ ಜ್ಞಾನವನ್ನು ಉಣಬಡಿಸುತ್ತದೆ ಎಂದು ಹೇಳಿದರು.

ಮೂವರಿಗೆ ಗೌರವ ಡಾಕ್ಟರೇಟ್‌: ಘಟಿಕೋತ್ಸವದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಮಾನವ ಧರ್ಮ ಪೀಠದ ಅಧ್ಯಕ್ಷ, ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಬೀದರ್‌ನ ಚಿದಂಬರಾಶ್ರಮ ಸಿದ್ಧಾರೂಢ ಮಠದ ಶಿವಕುಮಾರ ಮಹಾಸ್ವಾಮೀಜಿ ಹಾಗೂ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪಂ.ವೀರಭದ್ರಪ್ಪ ಗಾದಗೆ ಅವರಿಗೆ ಕುಲಪತಿ ಪ್ರೊ| ಎಸ್‌.ಆರ್‌.ನಿರಂಜನ್‌ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿ ಗೌರವಿಸಿದರು.

Advertisement

ನಿರ್ಮಲಾನಂದನಾಥ ಶ್ರೀ ಗೈರು: ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಪಿಎಚ್‌ಡಿ ಪೂರೈಸಿರುವ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಘಟಿಕೋತ್ಸವ ಸಮಾರಂಭಕ್ಕೆ ಗೈರಾಗಿದ್ದರು.
 
ನಿವೃತ್ತ ಪ್ರಾಧ್ಯಾಪಕ ಡಾ| ಪಿ.ಬಿ. ಸಂತಪ್ಪನವರ ಮಾರ್ಗದರ್ಶನದಲ್ಲಿ ಶ್ರೀಗಳು ಮಂಡಿಸಿದ್ದ “ನಾಥ ಸಂಪ್ರದಾಯ ಒಂದು ಸಾಂಸ್ಕೃತಿಕ ಅಧ್ಯಯನ’  ಶೋಧನಾ ಪ್ರಬಂಧಕ್ಕೆ ಪಿಎಚ್‌.ಡಿ ಪದವಿ ಲಭಿಸಿದೆ. ಕುಲಸಚಿವ ಪ್ರೊ| ಸಿ. ಸೋಮಶೇಖರ, ಮೌಲ್ಯಮಾಪನ ಕುಲಸಚಿವ ಪ್ರೊ| ಡಿ.ಎಂ. ಮದರಿ ಸೇರಿದಂತೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ, ಸಿಂಡಿಕೇಟ್‌ ಕೌನ್ಸಿಲ್‌ ಸದಸ್ಯರು, ವಿವಿಧ ಅಧ್ಯಯನ ವಿಭಾಗದ ಮುಖ್ಯಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next