ಪಡುಬಿದ್ರಿ: ಮಂಗಳೂರು ಗೋಲ್ಡ್‌ಫಿಂಚ್ ಸಿಟಿಯಲ್ಲಿ 40 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ಪ್ರಥಮ ಹಂತದಲ್ಲಿ 10 ಸಾವಿರ ಮಂದಿಗೆ ಉದ್ಯೋಗ ನೀಡುವ ಯೋಜನೆಯನ್ನು ಶೀಘ್ರವೇ ಕಾರ್ಯಗತಗೊಳಿಸಲಾಗುವುದು. ಸದ್ಯ ಎಂಆರ್‌ಜಿ ಗ್ರೂಪ್‌ನಲ್ಲಿ 4 ಸಾವಿರ ಉದ್ಯೋಗಿಗಳಿದ್ದು, 4 ವರ್ಷಗಳಲ್ಲಿ ಆ ಸಂಖ್ಯೆಯನ್ನು 8 ಸಾವಿರಕ್ಕೇರಿಸುವ ಗುರಿ ಹೊಂದಲಾಗಿದೆ ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ತಿಳಿಸಿದರು.
ಪಡುಬಿದ್ರಿ ಬಂಟರ ಸಂಘ ಮತ್ತು ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್, ಉಡುಪಿ ಗ್ರಾಮೀಣ ಬಂಟರ ಸಂಘ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ಬಂಟರ ಸಭಾಭವನದಲ್ಲಿ ಆ. 25 ರಂದು ಆಯೋಜಿಸಿದ್ದ ಯುವಕರಿಗೆ ಮತ್ತು ಮಹಿಳೆಯರಿಗೆ ವೃತ್ತಿ
ನಾವೀನ್ಯ ತರಬೇತಿಯನ್ನು ಉದ್ಘಾಟಿಸಿದ ಅವರು, ದೇಶದ ಆಸ್ತಿಯಾದ ಯುವ ಪೀಳಿಗೆ ವಿದ್ಯೆಯೊಂದಿಗೆ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಬೇಕು ಎಂದರು.
ಮಂಗಳೂರಿನ ಉದ್ಯಮಿ ಮೈತ್ರಿ ಮಲ್ಲಿ, ಪ್ರೊ| ದಿವ್ಯಾರಾಣಿ ಪ್ರದೀಪ್ ಮಾತನಾಡಿದರು. ಡಾ| ಸಿ. ಕೆ.ಮಂಜು ನಾಥ್, ಶುಭ ಮಾಹೆ, ಪ್ರವೀಣ್ ಶೆಟ್ಟಿ ಎಂಐಟಿ, ಸುಧೀರ್‌ರಾಜ್, ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಹರೀಶ್ ಮೊದಲಾದವರು ನಾಯಕತ್ವ, ಸಂವಹನ ಕೌಶಲ ಇತ್ಯಾದಿ ಕುರಿತ ಬಗ್ಗೆ ಮಾಹಿತಿ ನೀಡಿದರು. ಇದರಲ್ಲಿ ಭಾಗವಹಿಸಿದ್ದವರಿಗೆ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನ ಪ್ರಮಾಣಪತ್ರ ವಿತರಿಸಲಾಯಿತು.
ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಸಭಾಧ್ಯಕ್ಷತೆ ವಹಿಸಿದರು. ಬಂಟರ ಸಂಘ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ವೈ. ಶಶಿಧರ್ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷರಾದ ರವೀಂದ್ರನಾಥ್ ಜಿ. ಹೆಗ್ಡೆ, ಸುರೇಶ್ ಶೆಟ್ಟಿ, ಸಾಂತೂರು ಭಾಸ್ಕರ್ ಶೆಟ್ಟಿ, ನವೀನಚಂದ್ರ ಜೆ. ಶೆಟ್ಟಿ, ಸಂಘದ ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಉಡುಪಿ ಗ್ರಾಮೀಣ ಬಂಟರ ಸಂಘ ಕಾರ್ಯದರ್ಶಿ ವಿಜಿತ್ ಶೆಟ್ಟಿ, ಪದ್ಮನಾಭ ಹೆಗ್ಡೆ ಉಪಸ್ಥಿತರಿದ್ದರು.
ಉಡುಪಿ ಗ್ರಾಮೀಣ ಬಂಟರ ಸಂಘದ ಟ್ರಸ್ಟ್ ಅಧ್ಯಕ್ಷ ಅಶೋಕ್ ಶೆಟ್ಟಿ ಪ್ರಸ್ತಾವಿಸಿದರು. ಜಯ ಶೆಟ್ಟಿ ಪದ್ರ ಪಡುಬಿದ್ರಿ ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು. ಅಂತಿಮ ವರ್ಷದ ಪಾಲಿಟೆಕ್ನಿಕ್, ಎಂಜಿನಿಯರಿಂಗ್, ಪದವಿಯ 250 ವಿದ್ಯಾರ್ಥಿಗಳು ಮತ್ತು ಯುವಜನರು ಭಾಗವಹಿಸಿದ್ದರು.