Advertisement

ವಿದ್ಯಾರ್ಥಿಗಳಿಗೆ ಇನ್ಮುಂದೆ ಶನಿವಾರ ಬ್ಯಾಗ್‌ಲೆಸ್‌ ದಿನ

03:02 PM Oct 26, 2018 | Team Udayavani |

ಕಲಬುರಗಿ: ವಾರದಲ್ಲಿ ಒಂದು ದಿನ ಅದರಲ್ಲೂ ಶನಿವಾರ ದಿನವೇ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಬ್ಯಾಗ್‌ಲೆಸ್‌ ದಿನವನ್ನು ಕಾರ್ಯರೂಪಕ್ಕೆ ತರುವಂತೆ ಜಿಲ್ಲಾ ಪಂಚಾಯತ್‌ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ದೌಲತರಾವ್‌ ಪಾಟೀಲ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಗುರುವಾರ ಜಿಲ್ಲಾ ಪಂಚಾಯತ್‌ ಹೊಸ ಸಭಾಂಗಣದಲ್ಲಿ ನಡೆದ ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಾರಕ್ಕೊಂದು ದಿನ ಬ್ಯಾಗ್‌ಲೆಸ್‌ ದಿನ ಕಾರ್ಯರೂಪಕ್ಕೆ ತರಲಾಗಿದೆ. ಆದ್ದರಿಂದ ಜಿಲ್ಲೆಯಲ್ಲೂ ಶನಿವಾರ ದಿನವನ್ನಾದರೂ ಕಾರ್ಯರೂಪಕ್ಕೆ ತರಲು ಸಿದ್ಧತೆ ಮಾಡಿಕೊಳ್ಳುವಂತೆ ತಾಕೀತು ಮಾಡಿದರು. 

ಸ್ಥಾಯಿ ಸಮಿತಿ ಸಭೆ ನಿರ್ಣಯವನ್ನು ಮುಂದೆ ಸಾಮಾನ್ಯ ಸಭೆ ಎದುರು ತರುವಂತೆ ಶರಣಗೌಡ ಪಾಟೀಲ ಅವರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಅವರಿಗೆ ಸೂಚನೆ ನೀಡಿದರೆ ಇದಕ್ಕೆಲ್ಲ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದರು.

ಇದಕ್ಕೆ ಡಿಡಿಪಿಐ ಅವರು, ಶನಿವಾರ ದಿನವೇ ಬ್ಯಾಗ್‌ಲೆಸ್‌ ದಿನಾಚರಣೆಯಲ್ಲದೇ ಎಸ್‌ಎಸ್‌ ಎಪ್‌ಸಿ ಪರೀಕ್ಷಾ ಸುಧಾರಣೆಗೆ ಕೆಲವು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ವಿವರಿಸಿದರು. 

ಹಂಚಿಕೆ ಮಾಡಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿರುವ ಡಿಎಂಎಫ್‌ ಹಣವನ್ನು ಚಿಂಚೋಳಿ, ಸೇಡಂ, ಚಿಂಚೋಳಿ ತಾಲೂಕುಗಳಲ್ಲಿ ಶೇ. 60ರಷ್ಟು ಹಣ ಖರ್ಚು ಮಾಡಿದರೆ ಉಳಿಯುವ ಶೇ. 40ರಷ್ಟು ಹಣವನ್ನು ಜಿಲ್ಲೆಯ ಉಳಿದ ಎಲ್ಲ ತಾಲೂಕುಗಳಿಗೆ ಸಮಾನವಾಗಿ ಹಂಚಿಕೆ ಮಾಡಿ ಶಾಲಾ ಕಾಂಪೌಂಡ್‌ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಹಾಗೂ ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸುವಂತೆ ಶರಣಗೌಡ ಪಾಟೀಲ ಸೂಚಿಸಿದರು. 

Advertisement

ಕ್ರಮಕ್ಕೆ ಸೂಚನೆ: ಜಿಲ್ಲೆಯಲ್ಲಿ ಎಚ್‌1 ಎನ್‌1 ಸೇರಿದಂತೆ ಇತರ ಮಾರಕ ರೋಗಗಳ ನಿಯಂತ್ರಣಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಉತ್ತಮ ವೈದ್ಯಕೀಯ ಸೇವೆ ಕಲ್ಪಿಸಬೇಕು ಎಂದು ಆರೋಗ್ಯಾಧಿಕಾರಿಗೆ ನಿರ್ದೇಶನ ನೀಡಿದರು. ಇದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲೆಯಲ್ಲಿ ಎಚ್‌1 ಎನ್‌1 ಸೇರಿದಂತೆ ಇತರ ಮಾರಕ ರೋಗಗಳ ನಿಯಂತ್ರಣ ಸಲುವಾಗಿ ಜಿಲ್ಲಾಸ್ಪತ್ರೆಯಲ್ಲಿ ಐದು ಬೆಡ್‌ಗಳ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ ಎಂದು ಹೇಳಿದರು. ಸ್ಥಾಯಿ ಸಮಿತಿ ಸದಸ್ಯರುಗಳಾದ ಶಿವಾನಂದ ಪಾಟೀಲ ಮರತೂರ, ವಿಜಯಲಕ್ಷ್ಮೀ ಶರಣಬಸಪ್ಪ ಹಾಗರಗಿ, ವಿಜಯಲಕ್ಷ್ಮೀ ರಾಗಿ, ದಾಮೋದರ ರೆಡ್ಡಿ, ರತ್ನವ್ವ ಬೀರಣ್ಣ ಕಲ್ಲೂರ, ಅನಸೂಯಾ ಶರಣಪ್ಪ ತಳವಾರ ಹಾಗೂ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next