ಮೈಸೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚುನಾವಣೆಗಾಗಿ ಕಣ್ಣೊರೆಸುವ ತಂತ್ರ ಮಾಡದೆ ಕೊಡಗು ಮೂಲಕ ಹಾದು ಹೋಗುವ ರೈಲ್ವೆ ಯೋಜನೆಗಳನ್ನು ಕೈಬಿಡಬೇಕು. ಕೊಡಗಿಗೆ ರೈಲು ಮಾರ್ಗದ ಅವಶ್ಯಕತೆ ಇಲ್ಲ ಎಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿ ಕೇಂದ್ರಕ್ಕೆ ಕಳುಹಿಸಬೇಕು ಎಂದು ರೈತಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಮೂಲಕ ಎರಡು ರೈಲು ಮಾರ್ಗದ ಪ್ರಯತ್ನ ನಡೆದಿದೆ. ತಲಚೇರಿ-ಮೈಸೂರು ನಡುವಿನ 240 ಕಿ.ಮೀ ರೈಲು ಮಾರ್ಗದ ಯೋಜನೆಗೆ ಯುಪಿಎ ಸರ್ಕಾರದ ಅವಧಿಯಲ್ಲೇ ಭೌತಿಕ ಸರ್ವೇ ಮಾಡಿಸಿ, 5052 ಕೋಟಿ ರೂ.ಅಂದಾಜು ವೆಚ್ಚವನ್ನು ನಿಗದಿಪಡಿಸಿ, ಕೊಂಕಣ್ ರೈಲು ನಿಗಮಕ್ಕೆ ವಹಿಸಲಾಗಿದೆ.
ಆದರೆ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ರಾಜ್ಯದ ಸಚಿವ ಆರ್.ವಿ.ದೇಶಪಾಂಡೆ ಅವರು ಈ ಯೋಜನೆಗೆ ಅನುಮತಿ ನೀಡಿಲ್ಲ ಎಂದು ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಇನ್ನು ಮೈಸೂರು-ಕುಶಾಲ ನಗರ ರೈಲು ಮಾರ್ಗದ ಭೌತಿಕ ಸರ್ವೇ ಕೂಡ ಆಗಿದೆ. ಈ ಎರಡು ಯೋಜನೆಗಳಿಂದ ಕೊಡಗಿನ ಪರಿಸರ ಹಾಳಾಗಲಿದೆ.
ತೀವ್ರ ವಿರೋಧದ ನಡುವೆಯೂ ಕೇರಳದ ಟಿಂಬರ್ ಲಾಬಿಗೆ ಮಣಿದು ಕೇರಳಕ್ಕೆ 440 ಕೆ.ವಿ.ಹೈಟೆನÒನ್ ವಿದ್ಯುತ್ ಮಾರ್ಗ ಕಲ್ಪಿಸಲು ಕೊಡಗಿನಲ್ಲಿ ಸುಮಾರು ಒಂದು ಲಕ್ಷ ಮರಗಳನ್ನು ಕಡಿಯಲಾಯಿತು. ಇದರ ಪರಿಣಾಮ ಕೊಡಗಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ತಾಪಮಾನ ಹೆಚ್ಚಳವಾಗಿದೆ.
ಜತೆಗೆ ಈ ವರ್ಷ ಶೇ.70 ಕಾಫಿ ಇಳುವರಿ ಕಡಿಮೆಯಾಗಿದೆ, ಆನೆ ಹಾವಳಿಯೂ ಹೆಚ್ಚಾಗಿದೆ. ಹೀಗಾಗಿ ಮುಂದಿನ ಪೀಳಿಗೆಗೆ ಕೊಡಗನ್ನು ಉಳಿಸುವ ದೃಷ್ಟಿಯಿಂದ ರೈತಸಂಘ ಹೋರಾಟ ಕೈಗೆತ್ತಿಕೊಳ್ಳಲಿದ್ದು, ಈ ಸಂಬಂಧ ಕೊಡಗಿನ ವವಿಧ ಸಂಘಟನೆಗಳ ಜತೆಗೆ ದುಂಡುಮೇಜಿನ ಸಭೆ ಮಾಡಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು.
ಮಡಿಕೇರಿಯಲ್ಲಿ ನಿರ್ಮಿಸಲಾಗುತ್ತಿರುವ ರೈಲ್ವೇ ಕಚೇರಿ ಕಟ್ಟಡದ ಕಾಮಗಾರಿಯನ್ನು ಹತ್ತು ದಿನಗಳೊಳಗೆ ನಿಲ್ಲಿಸದಿದ್ದಲ್ಲಿ ಮುತ್ತಿಗೆ ಹಾಕಿ ಕಾಮಗಾರಿ ತಡೆಗಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತಸಂಘದ ಮುಖಂಡರಾದ ಎಚ್.ಸಿ.ಲೋಕೇಶ್ ರಾಜೇ ಅರಸ್, ಅಶ್ವಥನಾರಾಯಣ ರಾಜೇ ಅರಸ್, ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನಕಾರ್ಯದರ್ಶಿ ಹೊಸಕೋಟೆ ಬಸವರಾಜು, ಕೊಡಗು ಜಿಲ್ಲಾಧ್ಯಕ್ಷ ಸೋಮಯ್ಯ ಮೊದಲಾದವರು ಹಾಜರಿದ್ದರು.