ಆಲಮೇಲ: ಕರ್ನಾಟಕದಲ್ಲಿ ಕನ್ನಡ ಪರವಾಗಿ ಯಾವುದೆ ಸರ್ಕಾರಗಳು ಕೆಲಸ ಮಾಡುತ್ತಿಲ್ಲ. ರಾಷ್ಟ್ರೀಯ ಪಕ್ಷಗಳು ರಾಷ್ಟ್ರೀಯವಾದಿಗಳಂತೆ ವರ್ತಿಸುತ್ತಿಸುವ ಮೂಲಕ ಕನ್ನಡ ಬೆಳವಣಿಗೆ ನಿರ್ಲಕ್ಷಸಿವೆ. ಕನ್ನಡ ಪರವಾಗಿ ಕೆಲಸ ಮಾಡುವ ಸರ್ಕಾರ ಬರುವತನಕ ನಿರಂತರ ಹೋರಾಟ ಮಾಡುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ ಹೇಳಿದರು.
ಪಟ್ಟಣದ ಫೀರ ಗಾಲಿಬ ಸಾಬ ಉರೂಸ್ ನಿಮಿತ್ತ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಆಲಮೇಲ ತಾಲೂಕು ಘಟಕ ಸಹಯೋಗದಲ್ಲಿ ನಡೆದ ಕನ್ನಡ ಉತ್ಸವ ಮತ್ತು ಪುನೀತ್‌ರಾಜಕುಮಾರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ವಿವಿದ ರಾಜ್ಯಗಳು ರಾಜಕಾರಣಿಗಳು ತಮ್ಮ ರಾಜ್ಯದ ಹಿತಾಸಕ್ತಿಗಳು ಕಾಪಾಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ರಾಷ್ಟೀಯ ಪಕ್ಷಗಳು ಆಳ್ವಿಕೆ ಮಾಡುತ್ತಿದ್ದು ಕನ್ನಡದ ಎಲ್ಲ ರಂಗದ ಬೆಳವಣಿಗೆ ನಿರ್ಲಕ್ಷಿಸುತ್ತಿದೆ. ಕನ್ನಡ ಪರವಾಗಿ ಕೆಲಸ ಮಾಡುವಂತ ಸರ್ಕಾರ ಬರುವಂತೆ ಮಾಡಲು ಕನ್ನಡಪರ ಸಂಘಟನೆ ನಿರಂತರ ಹೋರಾಟ ಮಾಡಲಿದೆ ಎಂದರು.
ಕನ್ನಡ ಭಾಷೆ, ನೆಲ, ಜಲ ಸಮಗ್ರ ಕರ್ನಾಟಕದ ರಕ್ಷಣೆಗಾಗಿ ಕನ್ನಡಪರ ಸಂಘಟನೆ ಹೋರಾಟ ಮಾಡುತ್ತಿದ್ದರೆ ನಮ್ಮ ಸಂಘಟನೆಯನ್ನು ಹತ್ತಿಕಲು ಅನೇಕ ಪ್ರಕರಣಗಳು ದಾಖಲಿಸಿ ಮೂಲೆಗುಂಪು ಮಾಡುವ ಹುನ್ನಾರ ನಡೆದಿದೆ. ರಾಷ್ಟ್ರೀಯ ರಾಜಕೀಯ ಪಕ್ಷಗಳು ಕನ್ನಡಪರ ಸಂಘಟನೆ ಕಾರ್ಯಕರ್ತರ ಮೇಲೆ ಎಷ್ಟೇ ಪ್ರಕರಣ ದಾಖಲಿಸಿದರು ಹೋರಾಟ ನಿಲ್ಲಿಸುವುದಿಲ್ಲ. ರೈತ ಸಂಘ ಸೇರಿದಂತೆ ಕೆಲವು ಸಂಘಟನೆಗಳ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಸರ್ಕಾರ ಹಿಂಪಡೆಯುತ್ತಿದೆ. ಆದರೆ ಕನ್ನಡಪರ ಸಂಘಟನೆಗಳ ಮೇಲೆ ದಾಖಲಿಸಿರುವ ಯಾವುದೇ ಪ್ರಕರಣಗಳು ಹಿಂಪಡೆಯುತ್ತಿಲ್ಲ ಎಂದರು.
ಕನ್ನಡದ ಬಗ್ಗೆ ಅಗೌರವದಿಂದ ಮಾತನಾಡುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಕನ್ನಡದ ಬಗ್ಗೆ ಅಗೌರವ ತೋರಿದ ಗೂಗಲ್ ವಿರುದ್ಧ ಹೋರಾಟ ಮಾಡಿದ ಫಲದಿಂದ ಕ್ಷಮೆ ಕೇಳಿದೆ. ಅದು ಕನ್ನಡಪರ ಸಂಘಟನೆ ಹೋರಾಟದಿಂದ. ಹಾಗೆ ರೈಲ್ವೆ ಡಿ ದರ್ಜೆ ನೌಕರರಿಗೆ ಕನ್ನಡದಲ್ಲಿಯೆ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿದ್ದು ಕನ್ನಡಪರ ಸಂಘಟನೆ ಹೋರಾಟದಿಂದ ಎಂದರು.
ನಮ್ಮ ಜೊತೆಯಲ್ಲಿದ್ದು ತಾನು ಮಾಡಿದ ಸಹಾಯ ಯಾರಿಗೂ ಗೊತ್ತಾಗದ ರೀತಿಯಲ್ಲಿ ಅನೇಕ ಬಡವರಿಗೆ, ಅನಾಥರಿಗೆ ಆಶ್ರಯದಾತನಾಗಿದ್ದ ಕನ್ನಡದ ಶ್ರೇಷ್ಠ ನಟ ಪುನೀತ್ ರಾಜಕುಮಾರ ಅವರ ನಡೆ ಅನೇಕ ನಟರಿಗೆ, ಶ್ರೀಮಂತರಿಗೆ ಪ್ರೇರಣೆಯಾಗಿದೆ. ಅವರ ಮಾಡುವ ಕೆಲಸ ವಿದೇಶಗಳಲ್ಲಿಯೂ ಪ್ರೇರಣೆಯಾಗಿದೆ. ಅವರು ಮೃತರಾಗಿರಬಹುದು ಅವರು ಮಾಡಿರುವ ಸಹಾಯ, ಸಾಧನೆಗಳು ಜನರ ಮನಸಿನಲ್ಲಿ ಶಾಶ್ವತವಾಗಿ ಜೀವಂತವಾಗಿರಲಿವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಕಾನಿಪ ತಾಲೂಕಾಧ್ಯಕ್ಷ ಸೈಯದ್ ದೇವರಮನಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಮಾತನಾಡಿದರು. ತಾಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ಆನಂದ ಭೂಸನೂರ, ಕರವೇ ತಾಲೂಕಾಧ್ಯಕ್ಷ ಅಶೋಕ ಭೂಸನೂರ, ಗುಂಡು ಕರುಟೆ, ಈರಣ್ಣ ತೆಲ್ಲೂರ, ಸಂತೋಷ ಉಪ್ಪಿನ ಇದ್ದರು. ನಂತರ ವಿವಿಧ ಕಲಾವಿದರಿಂದ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.