Advertisement
ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ, ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ನಾಲ್ಕು ಸಂಘಗಳಿಂದ ನಡೆಯುತ್ತಿರುವ ಗ್ರಾಮೀಣ ಅಂಚೆ ಸೇವಕರ ಮುಷ್ಕರ ಶುಕ್ರವಾರ 11ನೇ ದಿನ ಪೂರೈಸಿದೆ.
Related Articles
Advertisement
ಪ್ರಸ್ತುತ ಗ್ರಾಮೀಣ ಅಂಚೆ ಕಚೇರಿಗಳು ಮುಚ್ಚಿದ್ದು, ಬಟವಾಡೆ ಅಸ್ತವ್ಯಸ್ತಗೊಂಡಿದೆ. ಇದರಿಂದ ಸರಕಾರಿ ಸೌಲಭ್ಯಗಳು ಲಭಿಸದೆ ಫಲಾನುಭವಿಗಳು ಕಷ್ಟ ಅನುಭವಿಸುವಂತಾಗಿದೆ. ರೈಲ್ವೇ ಸ್ಟೇಷನ್‌ನಲ್ಲೂ ಅಂಚೆ ಪತ್ರಗಳನ್ನು ವಿಂಗಡಿಸುವ ಹಾಗೂ ಅದನ್ನು ಆಯಾಯ ಪ್ರದೇಶಗಳ ರೈಲಿಗೆ ಹಾಕುವ ಕೆಲಸಕ್ಕೂ ಅಂಚೆ ಸೇವಕರು ಬಾರದ ಕಾರಣ ಕಳೆದ ಕೆಲವು ದಿನಗಳಿಂದ ಅಂಚೆ ಪತ್ರಗಳು ಬಾಕಿ ಉಳಿದಿದ್ದವು. ಶುಕ್ರವಾರ ಅಂಚೆ ನೌಕರರು ಮಧ್ಯಪ್ರವೇಶಿಸಿ ಅಂಚೆ ವಿಲೇವಾರಿ ಮಾಡಲು ಸಹಕರಿಸಿದರು.
ಸೋಮವಾರದಿಂದ ಅಂಚೆ ನೌಕರರು ಪ್ರತಿಭಟನೆಯಲ್ಲಿ ಭಾಗಿಕಳೆದ 11 ದಿನಗಳಿಂದ ಅಂಚೆ ಸೇವಕರು ಮಾತ್ರ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸೋಮವಾರದಿಂದ ಅವರೊಂದಿಗೆ ಅಂಚೆ ನೌಕರರು ಭಾಗಿಯಾಗಲಿದ್ದಾರೆ. ಅಂಚೆ ಸೇವಕರ ಬೇಡಿಕೆಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಹೀಗೆ ಮುಂದುವರಿದರೆ ಅವರೊಂದಿಗೆ ನಾವು ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ಅಂಚೆ ನೌಕರರು ಉದಯವಾಣಿಗೆ ತಿಳಿಸಿದ್ದಾರೆ. ಜೂ. 4ರಿಂದ ಎಲ್ಲ ಸಂಘಟನೆಗಳಿಂದ ಮುಷ್ಕರ
ಉಡುಪಿ: ಗ್ರಾಮೀಣ ಅಂಚೆ ನೌಕರರ ಮುಷ್ಕರ ಶನಿವಾರಕ್ಕೆ 12ನೆಯ ದಿನಕ್ಕೆ ಕಾಲಿರಿಸುತ್ತಿದೆ. ಜೂ. 4ರಿಂದ ಅಂಚೆ ಇಲಾಖೆಯ ಎಲ್ಲ ನೌಕರರ ಸಂಘಟನೆಗಳೂ ಮುಷ್ಕರಕ್ಕೆ ಕರೆ ನೀಡಿರುವುದಾಗಿ ಮುಖಂಡರು ತಿಳಿಸಿದ್ದಾರೆ.
ಶನಿವಾರ ಉಡುಪಿ ಪ್ರಧಾನ ಅಂಚೆ ಕಚೇರಿ ಎದುರಿನಿಂದ ಪ್ರತಿಭಟನ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಮಂಗಳೂರು, ಪುತ್ತೂರು, ಕಾರ್ಕಳದಲ್ಲಿ ಶನಿವಾರ ಪ್ರಧಾನ ಅಂಚೆ ಕಚೇರಿ ಎದುರು ಮುಷ್ಕರ ನಡೆಯಲಿದೆ. ಉಡುಪಿಯಲ್ಲಿ ಮುಷ್ಕರ ನಿರತರನ್ನು ಸಂಸದರ ಪರವಾಗಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಭೇಟಿಯಾದರು ಮತ್ತು ಸಂಸದರು ಅಂಚೆ ನೌಕರರ ಸಂಘಟನೆ ನಾಯಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಹರೀಶ್ ಕಿಣಿ ಭೇಟಿ ನೀಡಿದರು. ಕೇಂದ್ರದ ಗಮನ ಸೆಳೆಯುವೆ: ಸಂಸದ ನಳಿನ್
ಮೂಡಬಿದಿರೆ: ಗ್ರಾಮೀಣ ಅಂಚೆ ನೌಕರರ ಮುಷ್ಕರದ ಬಗ್ಗೆ ಸಂಬಂಧಪಟ್ಟ ಸಚಿವರ ಜತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು. ಮೂಡಬಿದಿರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅಂಚೆ ಇಲಾಖೆಗೆ ಹೊಸ ಹೊಸ ಯೋಜನೆಗಳನ್ನು ಜೋಡಿಸುವ ಮುಖಾಂತರ ಅಂಚೆ ಇಲಾಖೆಯ ಭವಿಷ್ಯವನ್ನು ರೂಪಿಸಿದ್ದಾರೆ. ಅದೇ ರೀತಿ ಅಂಚೆ ಇಲಾಖೆಯ ನೌಕರರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಮಾರ್ಗವನ್ನು ತೋರಿಸಿಕೊಡುವ ಭರವಸೆ ಇದೆ ಎಂದರು.