Advertisement

ಮುಂದುವರಿದ ಎಚ್‌ಎಎಲ್‌ ಮುಷ್ಕರ

12:39 AM Oct 16, 2019 | Team Udayavani |

ಬೆಂಗಳೂರು: ವೇತನ ಪರಿಷ್ಕರಣೆಗಾಗಿ ಎಚ್‌ಎಎಲ್‌ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನ ತಾರಕ್ಕೇರಿದ್ದು, ನೌಕರರ ಸಂಘಟನೆ ಮತ್ತು ಆಡಳಿತ ಮಂಡಳಿ ಪಟ್ಟುಹಿಡಿದಿವೆ. ಇದರಿಂದ ಮುಷ್ಕರ ಮುಂದುವರಿಯುವ ಸಾಧ್ಯತೆ ಇದೆ. “ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಸಂಸ್ಥೆಯ ಆರ್ಥಿಕ ವಹಿವಾಟು ಆಧರಿಸಿ ವೇತನ ಪರಿಷ್ಕರಿಸಲಾಗಿದೆ.

Advertisement

ನೌಕರರ ಪಾಲಿಗೆ ಇದೊಂದು ಅತ್ಯುತ್ತಮ ಕೊಡುಗೆ (ಫೇರ್‌ ಆಫ‌ರ್‌) ಆಗಿದೆ. ಇದನ್ನು ಒಪ್ಪಿಕೊಂಡು ಮುಷ್ಕರ ಹಿಂಪಡೆಯಬೇಕು ಎಂದು ಎಚ್‌ಎಎಲ್‌ ಆಡಳಿತ ಮಂಡಳಿ ಮನವಿ ಮಾಡಿದೆ. ಆದರೆ, ಸೌಹಾರ್ದಯುತ ಮತ್ತು ನ್ಯಾಯಯುತವಾದ ಪರಿಹಾರ ದೊರೆಯುವವರೆಗೂ ಮುಷ್ಕರದಿಂದ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ ಎಂದು ನೌಕರರು ಪಟ್ಟುಹಿಡಿದಿದ್ದಾರೆ. ಇದರಿಂದ ಸಮಸ್ಯೆ ಕಗ್ಗಂಟಾಗಿದೆ.

“ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಸಂಸ್ಥೆಯ ಆರ್ಥಿಕ ಅಭಿವೃದ್ಧಿಗೆ ಸರಿಸಮನಾಗಿ ವೇತನ ಪರಿಷ್ಕರಿಸಲಾಗಿದೆ. ಆದರೂ ಹಿರಿಯ ಅಧಿಕಾರಿಗಳ ವೇತನ ಪರಿಷ್ಕರಣೆ ಮಾದರಿಯಲ್ಲೇ ನೌಕರರಿಗೂ ಪರಿಷ್ಕರಿಸುವಂತೆ ಬೇಡಿಕೆ ಇರಿಸಿದ್ದಾರೆ. ವಾಸ್ತವದಲ್ಲಿ ಇದು ಸಾಧ್ಯವಿಲ್ಲ’ ಎಂದು ಎಚ್‌ಎಎಲ್‌ ಆರ್ಥಿಕ ವಿಭಾಗದ ನಿರ್ದೇಶಕ ಸಿ.ಬಿ.ಅನಂತ ಕೃಷ್ಣನ್‌ ಸ್ಪಷ್ಟಪಡಿಸಿದರು.

ನೌಕರರ ಅನಿರ್ದಿಷ್ಟಾವಧಿ ಧರಣಿ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸರ್ಕಾರದ ನಿಯಮಾನುಸಾರವೇ ನೌಕರರ ವೇತನ ಪರಿಷ್ಕರಿಸಲಾಗಿದೆ. ನಿಯಮ ಪ್ರಕಾರ ಹತ್ತು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಬೇಕು. ಆದರೆ 12 ವರ್ಷಗಳಲ್ಲಿ ಎರಡು ಬಾರಿ (2007 ಮತ್ತು 2012) ಪರಿಷ್ಕರಿಸಲಾಗಿದೆ. ಆದಾಗ್ಯೂ ಪರಿಷ್ಕರಣೆ ನ್ಯಾಯಯುತವಾಗಿಲ್ಲ ಎಂದು ಆರೋಪಿಸಿ ಮುಷ್ಕರಕ್ಕೆ ಮುಂದಾಗಿರುವುದು ಸರಿಯಲ್ಲ.

ಯಾವುದೇ ತಾರತಮ್ಯ ಆಗಿಲ್ಲ ತಿಳಿಸಿದರು. ವ್ಯಾಪಾರ-ವಹಿವಾಟಿನಲ್ಲಿ ಸಾಕಷ್ಟು ಸ್ಪರ್ಧೆ ಎದುರಿಸುತ್ತಿದ್ದೇವೆ. ಅದರ ಮಧ್ಯೆಯೂ ನೌಕರರಿಗೆ ಶೇ.11ರಷ್ಟು ಫಿಟ್‌ಮೆಂಟ್‌ ಹಾಗೂ ಶೇ.22ರಷ್ಟು ಪರ್ಕ್ಸ್ ಹೆಚ್ಚಳ ಮಾಡಲು ನಿರ್ಧರಿಸಿದ್ದೇವೆ. ಇದು ಅತ್ಯುತ್ತಮ ಪರಿಷ್ಕರಣೆ. ಈ ಸಂಬಂಧ ನೌಕರರ ಸಂಘಟನೆ ಜತೆಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇವೆ.

Advertisement

ನೌಕರರ ಬೇಡಿಕೆ ಅನುಸಾರ ವೇತನ ಪರಿಷ್ಕರಣೆ ಮಾಡಿದರೆ ಕೆಲಸಗಳನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗುತ್ತದೆ. ವಾಸ್ತವ ಹೀಗಿದ್ದರೂ ನೌಕರರು ವೇತನ ಪರಿಷ್ಕರಣೆ ಒಪ್ಪದೆ ಧರಣಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ ಅವರು, ಶೇ.24 ಇರುವ ಕಾರ್ಮಿಕರ ವೆಚ್ಚವನ್ನು ಶೇ.20ಕ್ಕಿಂತ ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಹಲವು ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಕರ್ತವ್ಯಕ್ಕೆ ಮರಳುವ ವಿಶ್ವಾಸ: ಎಚ್‌ಎಎಲ್‌ನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ವಿ.ಎಂ.ಚಮೋಲಾ ಮಾತನಾಡಿ, ದೇಶದ ಎಚ್‌ಎಎಲ್‌ನ ಏಳು ಘಟಕಗಳಲ್ಲಿ 19 ಸಾವಿರ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ 60 ಸಾವಿರ ಕೋಟಿ ರೂ. ಮೊತ್ತದ ವರ್ಕ್‌ ಆರ್ಡರ್‌ ಇದೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಆರ್ಡರ್‌ಗಳು ಬರುವ ನಿರೀಕ್ಷೆಯಿದೆ. ನೌಕರರ ಧರಣಿಯಿಂದ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ. ನೌಕರರು ಸಹ ಇದನ್ನು ಅರ್ಥ ಮಾಡಿಕೊಂಡು ಶೀಘ್ರವೇ ಕರ್ತವ್ಯಕ್ಕೆ ಮರಳುವ ವಿಶ್ವಾಸವಿದೆ ಎಂದರು.

ಪ್ರಸ್ತುತ ನಗರದ ಎಚ್‌ಎಎಲ್‌ ಘಟಕದಲ್ಲಿ 9 ಸಾವಿರ ನೌಕರರು ಇದ್ದಾರೆ. ಪೈಕಿ ಶೇ.10 ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ಉತ್ಪಾದನೆ ಮೇಲೆ ಸಧ್ಯಕ್ಕೆ ಗಂಭೀರ ಪರಿಣಾಮ ಉಂಟಾಗಿಲ್ಲ. ಸಂಸ್ಥೆ ಆಡಳಿತ ಮಂಡಳಿ ನೌಕರರ ಹಿತಕಾಯಲು ಬದ್ಧವಾಗಿದೆ. ನೌಕರರ ಸಂಘದೊಂದಿಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧವಿರುವುದಾಗಿ ಅವರು ಸ್ಪಷ್ಟಪಡಿಸಿದರು.

ಧರಣಿ ಮುಂದುವರಿಯಲಿದೆ – ನೌಕರರು: ಈ ಮಧ್ಯೆ ಆಡಳಿತ ಮಂಡಳಿ ಮುಂದಿಟ್ಟಿರುವ ತಾರತಮ್ಯದ ವೇತನ ಪರಿಷ್ಕರಣೆ ಒಪ್ಪಲು ಸಾಧ್ಯವೇ ಇಲ್ಲ. ಈ ಪರಿಷ್ಕರಣೆ ಅನ್ವಯ ಸಂಸ್ಥೆಯ ಬಹುತೇಕ ನೌಕರರಿಗೆ ಅನ್ಯಾಯವಾಗುತ್ತದೆ. ಹಾಗಾಗಿ ನಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಯಲಿದೆ ಎಂದು ಅಖೀಲ ಭಾರತ ಎಚ್‌ಎಎಲ್‌ ಯೂನಿಯನ್‌ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಸೂರ್ಯದೇವ ಚಂದ್ರಶೇಖರ್‌ ತಿಳಿಸಿದ್ದಾರೆ.

ಆಡಳಿತ ಮಂಡಳಿಗೆ ಪ್ರತಿಯಾಗಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇತನ ಪರಿಷ್ಕರಣೆ ಸಂಬಂಧ ಈವರೆಗೆ 11 ಸುತ್ತು ಮಾತುಕತೆ ನಡೆದರೂ ಪ್ರಯೋಜನವಾಗಿಲ್ಲ. ಆಡಳಿತ ಮಂಡಳಿಯು ಈ ಹಿಂದೆ ನೌಕರರಿಗೆ ಎರಡು ಬಾರಿ ವೇತನ ಪರಿಷ್ಕರಿಸಿರುವುದಾಗಿ ಹೇಳಿದೆ. ಇದು ಶುದ್ಧ ಸುಳ್ಳು. ಏಕೆಂದರೆ, 2007ರಲ್ಲಿ ಎರಡು ಭಾಗದಲ್ಲಿ ವೇತನ ಪರಿಷ್ಕರಣೆಯಾಗಿದೆ. ಉದಾಹರಣೆಗೆ 10 ರೂಪಾಯಿಯನ್ನು 5 ರೂ.ನಂತೆ ಎರಡು ಬಾರಿ ನೌಕರರಿಗೆ ನೀಡಲಾಗಿದೆ. ಆದರೆ, ಅಧಿಕಾರಿ ಶ್ರೇಣಿಯ ನೌಕರರಿಗೆ ಒಮ್ಮೆಗೆ 10 ರೂ. ನೀಡಲಾಗಿದೆ. ಇದರಿಂದ ಅವರು ಹೆಚ್ಚಿನ ಫಿಟ್‌ಮೆಂಟ್‌ ಪಡೆದುಕೊಂಡಿದ್ದಾರೆ ಎಂದರು.

ರಕ್ಷಣಾ ಸಚಿವರು ಮಧ್ಯಪ್ರವೇಶಿಸಲಿ: ನೌಕರರ ಧರಣಿಯಿಂದ ಸಂಸ್ಥೆಗೆ ತೊಂದರೆ ಎಂಬುದು ನಮಗೂ ಗೊತ್ತಿದೆ. ಕಳೆದ ಮೂರು ವರ್ಷಗಳಿಂದ ವೇತನ ಪರಿಷ್ಕರಣೆಗೆ ಆಗ್ರಹಿಸುತ್ತಿದ್ದರೂ ಆಡಳಿತ ಮಂಡಳಿ ತಾರತಮ್ಯ ನೀತಿ ಅನುಸರಿಸುತ್ತಿದೆ. ನಾವೇನೂ ಕಾನೂನುಬಾಹಿರವಾಗಿ ಧರಣಿ ಮಾಡುತ್ತಿಲ್ಲ. ಸಂಸ್ಥೆಗೆ ನೋಟಿಸ್‌ ನೀಡಿದ ಬಳಿಕ ಮಾತುಕತೆ ವಿಫ‌ಲವಾದ್ದರಿಂದ ಧರಣಿ ಅನಿವಾರ್ಯವಾಗಿದೆ. ಕೇಂದ್ರ ರಕ್ಷಣಾ ಸಚಿವರು ತಕ್ಷಣ ಮಧ್ಯ ಪ್ರವೇಶಿಸಿ ನೌಕರರ ಸಮಸ್ಯೆ ಬಗೆಹರಿಸಬೇಕು ಎಂದು ಸೂರ್ಯದೇವ ಚಂದ್ರಶೇಖರ್‌ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next