Advertisement

ಆಸೀಸ್‌ ಪ್ರಬಲ: ಭಾರತಕ್ಕೆ ರಿಸ್ಟ್‌ ಸ್ಪಿನ್ನರ್‌ಗಳ ಬಲ

10:08 AM Jan 28, 2020 | Team Udayavani |

ಪೋಚೆಫ್ ಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಕಿರಿಯರ ವಿಶ್ವಕಪ್‌ ಕೂಟದ ಸೂಪರ್‌ ಲೀಗ್‌ ಕ್ವಾರ್ಟರ್‌ ಫೈನಲ್‌ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಪೋಚೆಫ್ ಸ್ಟ್ರೂಮ್ನಲ್ಲಿ ಹಾಲಿ ಚಾಂಪಿಯನ್‌ ಖ್ಯಾತಿಯ ಭಾರತ ಮತ್ತೂಂದು ಬಲಿಷ್ಠ ತಂಡವಾದ ಆಸ್ಟ್ರೇಲಿಯದ ಸವಾಲನ್ನು ಎದುರಿಸಲಿದೆ. ರಿಸ್ಟ್‌ ಸ್ಪಿನ್ನರ್‌ಗಳ ಮೇಲಾಟಕ್ಕೆ ಇದೊಂದು ಉತ್ತಮ ವೇದಿಕೆಯಾಗುವ ಸಾಧ್ಯತೆ ಇದೆ.

Advertisement

ಲೀಗ್‌ ಹಂತದ ಮೂರೂ ಪಂದ್ಯಗಳನ್ನು ಅಧಿಕಾರಯುತವಾಗಿ ಗೆದ್ದಿರುವ ಪ್ರಿಯಂ ಗರ್ಗ್‌ ನೇತೃತ್ವದ ಭಾರತ ಈ ಕೂಟದ ಅಜೇಯ ತಂಡಗಳಲ್ಲಿ ಒಂದು. ಶ್ರೀಲಂಕಾ, ಜಪಾನ್‌ ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ ಅಮೋಘ ಪರಾಕ್ರಮ ತೋರಿತ್ತು. ಆದರೆ ಮುಂದಿನದು ನಾಕೌಟ್‌ ಪಂದ್ಯವಾದ್ದರಿಂದ ಕಾಂಗರೂ ವಿರುದ್ಧ ಇದಕ್ಕಿಂತ ಮಿಗಿಲಾದ ಪ್ರದರ್ಶನ ನೀಡಬೇಕಾದುದು ಅಗತ್ಯ.

ಮೆಕೆಂಜಿ ಹಾರ್ವೆ ನಾಯಕತ್ವದ ಆಸ್ಟ್ರೇಲಿಯ “ಬಿ’ ವಿಭಾಗದ ದ್ವಿತೀಯ ಸ್ಥಾನಿಯಾಗಿದೆ. ಅದು ಭರ್ಜರಿ ಗೆಲುವು ಸಾಧಿಸಿದ್ದು ದುರ್ಬಲ ನೈಜೀರಿಯಾ ವಿರುದ್ಧ ಮಾತ್ರ. ಅಂತರ 10 ವಿಕೆಟ್‌. ವೆಸ್ಟ್‌ ಇಂಡೀಸ್‌ ವಿರುದ್ಧ 3 ವಿಕೆಟ್‌ ಸೋಲನುಭವಿಸಿದ ಬಳಿಕ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್‌ ವಿರುದ್ಧವೂ ಸೋಲಿನ ಭೀತಿಗೆ ಸಿಲುಕಿತ್ತು. 253 ರನ್‌ ಬೆನ್ನಟ್ಟುವ ಹಾದಿಯಲ್ಲಿ 206ಕ್ಕೆ 8 ವಿಕೆಟ್‌ ಕಳೆದುಕೊಂಡಿತ್ತು. ಆದರೆ 9ನೇ ವಿಕೆಟಿಗೆ ಜತೆಗೂಡಿದ ಕಾನರ್‌ ಸುಲ್ಲಿ-ಟಾಡ್‌ ಮರ್ಫಿ ಸೇರಿಕೊಂಡು ಆಸೀಸ್‌ಗೆ ರೋಚಕ ಜಯ ಒದಗಿಸಿದ್ದರು. ಹೀಗಾಗಿ ಹಾರ್ವೆ ಪಡೆಗೆ ಕ್ವಾರ್ಟರ್‌ ಫೈನಲ್‌ ಪ್ರವೇಶ ಸಾಧ್ಯವಾಯಿತು.

ಬಿಡದೇ ಕಾಡುವ ಬಿಶ್ನೋಯ್‌
ಜೋಧ್‌ಪುರದ ಬಲಗೈ ಲೆಗ್‌ ಸ್ಪಿನ್ನರ್‌ ರವಿ ಬಿಶ್ನೋಯ್‌ ಈ ಕೂಟದಲ್ಲಿ ಮಿಂಚು ಹರಿಸಿದ ಬೌಲರ್‌ಗಳಲ್ಲಿ ಮುಂಚೂಣಿಯಲ್ಲಿದ್ದಾರೆ. 3 ಪಂದ್ಯಗಳಿಂದ 10 ವಿಕೆಟ್‌ ಉರುಳಿಸಿದ್ದು ಇವರ ಸಾಧನೆ. ನ್ಯೂಜಿಲ್ಯಾಂಡ್‌ ವಿರುದ್ಧ 30ಕ್ಕೆ 4 ವಿಕೆಟ್‌ ಹಾರಿಸುವ ಮೂಲಕ ಎದುರಾಳಿಗಳ ಪಾಲಿಗೆ ತಾನೆಷ್ಟು ಘಾತಕ ಎಂಬುದನ್ನು ನಿರೂಪಿಸಿದ್ದಾರೆ. ಕಳೆದ ಐಪಿಎಲ್‌ ಹರಾಜಿನ ವೇಳೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 2 ಕೋಟಿ ರೂ. ವ್ಯಯಿಸಿ ಈ ಪ್ರತಿಭಾನ್ವಿತ ಬೌಲರ್‌ಗೆ ಯಾಕೆ ಬಲೆ ಬೀಸಿತು ಎಂಬುದಕ್ಕೆ ಇಲ್ಲಿ ಉತ್ತರ ಸಿಕ್ಕಿದೆ. ಆಸೀಸ್‌ ವಿರುದ್ಧ ರವಿ ಬಿಶ್ನೋಯ್‌ ಸಾಧನೆಯೇ ನಿರ್ಣಾಯಕ.

ಅಥರ್ವ ಅಂಕೋಲೆಕರ್‌ ಭಾರತದ ಮತ್ತೂಂದು ಪ್ರಮುಖ ಸ್ಪಿನ್‌ ಅಸ್ತ್ರ. ಮುಂಬಯಿಯ ಈ ಎಡಗೈ ಬೌಲರ್‌ ನ್ಯೂಜಿಲ್ಯಾಂಡ್‌ ವಿರುದ್ಧ 3 ಪ್ರಮುಖ ವಿಕೆಟ್‌ ಕಿತ್ತು ಮೆರೆದಿದ್ದರು. ಉತ್ತರಪ್ರದೇಶದ ಕಾರ್ತಿಕ್‌ ತ್ಯಾಗಿ 140 ಕಿ.ಮೀ. ವೇಗದಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಎಡಗೈ ಸೀಮರ್‌ ಆಕಾಶ್‌ ಸಿಂಗ್‌ ಬಲಗೈ ಬ್ಯಾಟ್ಸ್‌ಮನ್‌ಗಳ ಪಾಲಿಗೆ ತಲೆನೋವೇ ಸರಿ.

Advertisement

ಆಸೀಸ್‌ ಅಪಾಯಕಾರಿ
ಆಸ್ಟ್ರೇಲಿಯ ಕೂಡ ಲೆಗ್‌ ಸ್ಪಿನ್‌ ದಾಳಿಯನ್ನು ನೆಚ್ಚಿ ಕೊಂಡಿದೆ. ಭಾರತೀಯ ಮೂಲದ ತನ್ವೀರ್‌ ಸಂಗಾ ಇಲ್ಲಿನ ಹುರಿಯಾಳು. ಬಿಶ್ನೋಯ್‌ ಅವರಂತೆ ಸಂಗಾ ಕೂಡ 10 ವಿಕೆಟ್‌ ಉರುಳಿಸಿದ್ದಾರೆ. ನೈಜೀರಿಯಾ ವಿರುದ್ಧ 5, ವೆಸ್ಟ್‌ ಇಂಡೀಸ್‌ ವಿರುದ್ಧ 4 ವಿಕೆಟ್‌ ಉರುಳಿಸಿದ್ದು ಇವರ ಬೌಲಿಂಗ್‌ ಸಾಹಸವನ್ನು ಪರಿಚಯಿಸುತ್ತದೆ.

ಆಸೀಸ್‌ ಬ್ಯಾಟಿಂಗ್‌ ವಿಭಾಗ ನಾಯಕ ಮೆಕೆಂಜಿ ಹಾರ್ವೆ ಅವರನ್ನು ನೆಚ್ಚಿಕೊಂಡಿದೆ. ಮಾಜಿ ಆಲ್‌ರೌಂಡರ್‌ ಇಯಾನ್‌ ಹಾರ್ವೆ ಅವರ ಸಂಬಂಧಿಯಾಗಿರುವ ಮೆಕೆಂಜಿ ಇಂಗ್ಲೆಂಡ್‌ ಎದುರು 65 ರನ್‌ ಬಾರಿಸಿ ಹೋರಾಟ ಜಾರಿಯಲ್ಲಿರಿಸಿದ್ದರು. ಆಲ್‌ರೌಂಡರ್‌ ಕಾನರ್‌ ಸುಲ್ಲಿ ಕೂಡ ಅಪಾಯಕಾರಿ. ಕಾಂಗರೂಗಳ “ಬಾಲ’ದಲ್ಲೂ ಬ್ಯಾಟಿಂಗ್‌ ಬಲವಿದೆ!
ಆದರೆ ದಾಖಲೆ ಹಾಗೂ ಈಗಿನ ಬಲಾಬಲದ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಕ್ಕಿಂತ ಭಾರತವೇ ಬಲಾಡ್ಯ. 2013ರಿಂದೀಚೆ ಆಸ್ಟ್ರೇಲಿಯ ವಿರುದ್ಧ ಆಡಿದ 5 ಯು-19 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿರುವುದು ಭಾರತದ ಪರಾಕ್ರಮಕ್ಕೆ ಸಾಕ್ಷಿ. ಉಳಿದೊಂದು ಪಂದ್ಯ ರದ್ದುಗೊಂಡಿತ್ತು.

ವೈವಿಧ್ಯಮಯ ಬ್ಯಾಟಿಂಗ್‌ ಸರದಿ
ಭಾರತದ ಬ್ಯಾಟಿಂಗ್‌ ಸರದಿ ಕೂಡ ಅತ್ಯಂತ ಬಲಿಷ್ಠ ಹಾಗೂ ವೈವಿಧ್ಯಮಯ. ಒಬ್ಬರಿಗಿಂತ ಒಬ್ಬರು ಮಿಗಿಲು ಎಂಬಂಥ ಆಟಗಾರರು ಇಲ್ಲಿದ್ದಾರೆ. ಆರಂಭಿಕರಾದ ಯಶಸ್ವಿ ಜೈಸ್ವಾಲ್‌-ದಿವ್ಯಾಂಶ್‌ ಸಕ್ಸೇನಾ ಅವರದು ಯಶಸ್ವಿ ಅಭಿಯಾನ. ತಿಲಕ್‌ ವರ್ಮ, ಪ್ರಿಯಂ ಗರ್ಗ್‌, ಧ್ರುವ ಜುರೆಲ್‌, ಸಿದ್ದೇಶ್‌ ವೀರ್‌ ಅಮೋಘ ಲಯದಲ್ಲಿದ್ದಾರೆ. ಕೀಪರ್‌ ಜುರೆಲ್‌ ಅವರದು ಸ್ಟಂಪ್‌ ಹಿಂದುಗಡೆಯೂ ಜಬರ್ದಸ್ತ್ ನಿರ್ವಹಣೆ. ಇವರೆಲ್ಲ ತಮ್ಮ ನೈಜ ಸಾಮರ್ಥ್ಯವನ್ನು ಹೊರಗೆಡಹಿದರೆ, ಜತೆಗೆ ಹೆಚ್ಚು ಎಚ್ಚರಿಕೆಯಿಂದ ಆಡಿದರೆ ಆಸ್ಟ್ರೇಲಿಯವನ್ನು ಅಟ್ಟಾಡಿಸುವುದು ಕಷ್ಟವೇನಲ್ಲ.

Advertisement

Udayavani is now on Telegram. Click here to join our channel and stay updated with the latest news.

Next