Advertisement

ಓಟಿನ ಬೇಟೆಗೆ ಪ್ರಬಲ ಪಕ್ಷಗಳ ಕಾರ್ಯತಂತ್ರ! ಚಿಗುರೊಡೆದ ರಾಜಕೀಯ ರಂಗ

06:20 PM Dec 19, 2022 | Team Udayavani |

ಉಡುಪಿ: ರಾಜಕೀಯ ರಂಗ ಮತ್ತೆ ಚಿಗುರೊಡೆದಿದೆ. ವಿಧಾನಸಭೆ ಚುನಾವಣೆ ಕಣಕ್ಕಿಳಿಯಲು ಪ್ರಬಲ ಪಕ್ಷಗಳು ಈಗಾಗಲೇ ಕಾರ್ಯತಂತ್ರ ರೂಪಿಸಿಕೊಳ್ಳುತ್ತಿವೆ. ಒಬ್ಬೊಬ್ಬ ನಾಯಕರ ಭೇಟಿ ಹಿಂದೆ ಒಂದೊಂದು ರೀತಿಯ ರಾಜಕೀಯ ಲೆಕ್ಕಾಚಾರ ಹಾಕಿಕೊಳ್ಳಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಬಲ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ರೇಸ್‌ನಲ್ಲಿವೆ. ಈ ನಡುವೆ ಜೆಡಿಎಸ್‌, ಆಮ್‌ಆದ್ಮಿ ಹಾಗೂ ಎಸ್‌ಡಿಪಿಐ ಪಕ್ಷಗಳೂ ಪ್ರಬಲ ಪಕ್ಷಗಳಿಗೆ ಹೋರಾಟ ನೀಡಲು ಯೋಜನೆ ರೂಪಿಸಿಕೊಳ್ಳುತ್ತಿವೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಕಣಕ್ಕೆ ಇಳಿಯಬಹುದು ಎಂಬುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ತೆರೆಹಿಂದಿನ ಕಸರತ್ತುಗಳು, ರಣತಂತ್ರಗಳು, ಗಾಳಿಸುದ್ದಿಗಳು ದಿನನಿತ್ಯ ಚರ್ಚೆಯ ವಸ್ತುವಾಗುತ್ತಿವೆ.

Advertisement

ಬಿಜೆಪಿ ಕಾರ್ಯತಂತ್ರ
ಜಿಲ್ಲೆಯ ಎಲ್ಲ ಮಂಡಲ, ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರಗಳಲ್ಲಿ ಚುನಾವಣೆಗೆ ಪೂರಕವಾದ ಕೆಲಸ ನಡೆಯುತ್ತಿದೆ. ಮುಂದೆ ನಡೆಯಬೇಕಿರುವ ಅಟಲ್‌ ಉತ್ಸವ, ರಾಜ್ಯಮಟ್ಟದ ಯುವ ಸಮಾವೇಶಕ್ಕೆ 1.5ರಿಂದ 2 ಲಕ್ಷ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ. ಬೂತ್‌ ಮಟ್ಟದಲ್ಲಿ ಸಮಾವೇಶಗಳು ನಡೆಯುತ್ತಿವೆ. ಜಿಲ್ಲಾ ಮಟ್ಟದ ತಂಡ ಪ್ರತೀ ಬೂತ್‌ಗಳಿಗೆ ಪ್ರವಾಸ ಮಾಡಿ ಬೂತ್‌ ಮಟ್ಟದಲ್ಲಿರುವ ಸಮಸ್ಯೆ ಗುರುತಿಸಲಾಗುತ್ತಿದೆ.

1 ಗಂಟೆಗಳ ಕಾಲ ಫ‌ಲಾನುಭವಿಗಳೊಂದಿಗೆ ಸಭೆ ಮಾಡಲಾಗುತ್ತಿದೆ. ಎಲ್ಲ 5 ಕ್ಷೇತ್ರಗಳಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತಗಳಿಸುವ ನಿಟ್ಟಿನಲ್ಲಿ ಎಲ್ಲ ರೂಪುರೇಷೆ ಸಿದ್ದಗೊಂಡಿದೆ. ಜನವರಿ ತಿಂಗಳಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಚುನಾವಣೆ ಆರಂಭಕ್ಕೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನೂ ಕರೆತರುವ ಚಿಂತನೆ ನಡೆಯುತ್ತಿದೆ. ಈಗಾಗಲೇ ಕಾಪು, ಬೈಂದೂರು ತಾಲೂಕಿನಲ್ಲಿ ಜನಸಂಕಲ್ಪ ಯಾತ್ರೆ ನಡೆದಿದೆ. ರಾಜ್ಯಾಧ್ಯಕ್ಷರ ನೇತೃತ್ವ
ದಲ್ಲಿ ಬೂತ್‌ ಸಮಿತಿ ಸಮಾವೇಶ ನಡೆಯಲಿದೆ.

ಕಾಂಗ್ರೆಸ್‌ ರಣವ್ಯೂಹ
ಚದುರಿ ಹೋಗಿರುವ ಕಾಂಗ್ರೆಸ್‌ ಮತಗಳನ್ನು ಸೆಳೆಯುವ ಬಗ್ಗೆ ಕಾಂಗ್ರೆಸ್‌ ಪಕ್ಷ ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಕಾರ್ಯತಂತ್ರ ರೂಪಿಸಿಕೊಳ್ಳುತ್ತಿದೆ. ಈಗಾಗಲೇ ಪಕ್ಷವನ್ನು ಬೂತ್‌ಮಟ್ಟದಲ್ಲಿ ಪುನಃ ಸಂಘಟಿಸಲಾಗುತ್ತಿದೆ. ಬೂತ್‌ಮಟ್ಟದಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ನಿಯಮಿತವಾಗಿ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ರಾಜ್ಯಮಟ್ಟದ ನಾಯಕರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಸಭೆಗಳನ್ನು ನಡೆಸುತ್ತಿದ್ದಾರೆ.

ಮುಂದಿನ ದಿನದಲ್ಲಿ ರಾಷ್ಟ್ರ ಮಟ್ಟದ ನಾಯಕರನ್ನು ಕರೆದು ಸಮಾವೇಶ ನಡೆಸುವ ಬಗ್ಗೆಯೂ ಪಕ್ಷದಲ್ಲಿ ಚಿಂತನೆ ಇದೆ. ತಳಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಮತದಾರರನ್ನು ಸೆಳೆಯುವ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಮುಖ್ಯವಾಗಿ ಪಕ್ಷದ ಸಿದ್ಧಾಂತಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಹಾಗೂ ಆಡಳಿತ ಪಕ್ಷದ ವೈಫ‌ಲ್ಯಗಳನ್ನು ಜನರಿಗೆ ಮನದಟ್ಟು ಮಾಡುವ ಕೆಲಸವೂ ಕಾಂಗ್ರೆಸ್‌ ಕಡೆಯಿಂದ ಚುನಾವಣೆ ಸಂದರ್ಭ ನಿತ್ಯ ನಿರಂತರವಾಗಿ ನಡೆಸಲು ಉದ್ದೇಶಿಸಲಾಗಿದೆ.

Advertisement

ಜೆಡಿಎಸ್‌ ಕಾರ್ಯಾಚರಣೆ
ಜೆಡಿಎಸ್‌ ಪಕ್ಷ ಕ್ಷೇತ್ರಾವಾರು ಸಭೆಗಳನ್ನು ಕರೆದು ಕಾರ್ಯಕರ್ತರು, ಬೂತ್‌ ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಲಾಗಿದೆ. ಕಾರ್ಯಕರ್ತರಿಗೆ ವಿಶೇಷ ತರಬೇತಿ ನೀಡುವ ಮೂಲಕ ಸದ್ದಿಲ್ಲದೆ ಕಾರ್ಯಾಚರಣೆ ರೂಪಿಸಲಾಗಿದೆ. ಸಾಂಭವ್ಯ ಅಭ್ಯರ್ಥಿಗಳು ಈಗಾಗಲೇ ತಮ್ಮ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆಗಳನ್ನು ಮಾಡಿಕೊಂಡಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ಮಾಜಿ ಮುಖ್ಯ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉಡುಪಿ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ನಡೆಸಿ ಗ್ರಾಮ ವಾಸ್ತವ್ಯ ನಡೆಸಲು ಉದ್ದೇಶಿಸಿದ್ದಾರೆ. ಈ ಬಗ್ಗೆ ಎಲ್ಲ ರೀತಿಯ ಪೂರ್ವತಯಾರಿಗಳನ್ನು ಮಾಡಲಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಹೇಗೆ ಪೈಪೋಟಿ ನೀಡಬೇಕು ಎಂಬ ಬಗ್ಗೆ ಸ್ಪಷ್ಟ ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಮುಖ್ಯವಾಗಿ ಪಂಚರತ್ನ ರಥಯಾತ್ರೆಯ ಉಪಯೋಗಗಳ ಬಗ್ಗೆ ಮನೆಮನೆಗೆ ತೆರಳಿ ಪ್ರಚಾರ ಮಾಡಲಾಗುತ್ತದೆ. ಯುವಮತದಾರರು ಹಾಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆಯೂ ಪಕ್ಷದೊಳಗೆ ಚಿಂತನೆ ಇದೆ. ಹಾಗೆಯೇ ರಾಜ್ಯದ ಪ್ರಮುಖ ಜೆಡಿಎಸ್‌ ನಾಯಕರನ್ನು ಕರೆತರುವ ಯೋಚನೆ ಪಕ್ಷದ ಮುಖಂಡರಿಗಿದೆ.

ಅಧಿಕ ಮತ ಗಳಿಕೆ ವಿಶ್ವಾಸ ಈ ಹಿಂದಿನ ಚುನಾವಣೆ ಗಿಂತಲೂ ಅಧಿಕ ಮತಗಳು ಬಿಜೆಪಿಗೆ ಸಿಗುವ ವಿಶ್ವಾಸವಿದೆ. ವಿವಿಧ ಸಭೆ-ಸಮಾರಂಭ, ಸಮಾವೇಶ ಯಶಸ್ವಿಯಾಗಿ ನಡೆಸಲು ಉದ್ದೇಶಿಸಲಾಗಿದೆ. ಮುಂದಿನ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದ ನಾಯಕರು ಆಗಮಿಸಲಿದ್ದಾರೆ.
– ಕುಯಿಲಾಡಿ ಸುರೇಶ್‌ ನಾಯಕ್‌, ಬಿಜೆಪಿ ಜಿಲ್ಲಾಧ್ಯಕ್ಷರು

ತಳಹಂತದ ಸಿದ್ಧತೆ
ಚದುರಿ ಹೋಗಿರುವ ಕಾಂಗ್ರೆಸ್‌ ಮತಗಳನ್ನು ಒಗ್ಗೂಡಿಸುವ ಬಗ್ಗೆ ಕಾರ್ಯ ಯೋಜನೆ ರೂಪಿಸಲಾಗಿದೆ. ಈಗಾಗಲೇ ಪಕ್ಷದ ವರಿಷ್ಠರಂತೆ ಹಲವು ಸಭೆ, ಸಮಾರಂಭ ನಡೆಸಲಾಗಿದೆ. ಬೂತ್‌ ಮಟ್ಟದಲ್ಲಿಯೂ ಎಲ್ಲ ರೀತಿಯ ಸಿದ್ದತೆ ನಡೆಸಲಾಗಿದೆ. ಮುಂದೆ ಪ್ರಚಾರಕಾರ್ಯಕ್ಕೆ ಮತ್ತಷ್ಟು ವೇಗ ಸಿಗಲಿದೆ.
– ಅಶೋಕ್‌ ಕುಮಾರ್‌ ಕೊಡವೂರು, ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು

ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ
ಎಚ್‌.ಡಿ. ಕುಮಾರಸ್ವಾಮಿ ಯವರ ಪಂಚರತ್ನ ರಥ ಯಾತ್ರೆಯ ಬಗ್ಗೆ ಜಿಲ್ಲೆಯಲ್ಲಿ ಮತ್ತಷ್ಟು ಪ್ರಚಾರಕಾರ್ಯ ಮಾಡಲಿದ್ದೇವೆ. ಉದ್ಯೋಗಾವಕಾಶ ಸಹಿತ ಜನರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದ್ದೇವೆ. ಈ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುವ ಉದ್ದೇಶದಿಂದ ಸಿದ್ದತೆ ನಡೆಯುತ್ತಿದೆ.
– ಯೋಗೀಶ್‌ ವಿ.ಶೆಟ್ಟಿ, ಜಿಲ್ಲಾಧ್ಯಕ್ಷರು, ಜೆಡಿಎಸ್‌

ಮತ ವಿಂಗಡಣೆ ಸಾಧ್ಯತೆ
ಪ್ರಬಲ ಪಕ್ಷಗಳ ನಡುವೆ ಜೆಡಿ ಎಸ್‌, ಆಮ್‌ಆದ್ಮಿ ಹಾಗೂ ಎಸ್‌ಡಿಪಿಐ ಪಕ್ಷಗಳೂ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆಯಲ್ಲಿದ್ದಾರೆ. ಜತೆಗೆ ಪ್ರಬಲ ಪಕ್ಷ ಗಳಲ್ಲಿ ಟಿಕೆಟ್‌ ಸಿಕ್ಕದಿದ್ದಾಗ ನಿರಾಶರಾಗಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುವವರ ಸಂಖ್ಯೆಯೂ ಈ ಬಾರಿ ಅಧಿಕವಾಗುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿದೆ. ಈ ಎಲ್ಲ ಪ್ರಕ್ರಿಯೆಗಳಿಂದ ಮತಗಳು ವಿಂಗಡಣೆಯಾಗಿ ಹೋಗುವ ಸಾಧ್ಯತೆಗಳೇ ಹೆಚ್ಚು. ಈ ಎಲ್ಲ ಅಂಶಗಳು ಯಾರಿಗೆ ಪೂರಕ ಹಾಗೂ ಯಾರಿಗೆ ಮಾರಕವಾಗಲಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next